ಕುಷ್ಟಗಿ: ಕೆರೆ ತುಂಬಿಸುವ ಯೋಜನೆಯ ವ್ಯಾಪ್ತಿಯಲ್ಲಿದ್ದರೂ ತಾಲ್ಲೂಕಿನ ಶಾಖಾಪುರ ಬಳಿಯ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ಕಡಿಮೆ ನೀರು ಸಂಗ್ರಹವಾಗುತ್ತಿದೆ. ಅಭಿವೃದ್ಧಿಪಡಿಸಿದರೆ ಬರಪೀಡಿತ ಪ್ರದೇಶದ ಅಂತರ್ಜಲ ವೃದ್ಧಿಗೆ ಸಹಾಯವಾಗುತ್ತದೆ. ಆದರೆ ಸದ್ಯ ಹೆಸರಿಗೆ ಮಾತ್ರ ಕೆರೆ ಎನ್ನುವಂತಾಗಿದೆ.
ಪ್ರಾದೇಶಕ ಅರಣ್ಯ ಇಲಾಖೆಗೆ ಸೇರಿದ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಈ ಕೆರೆ 32 ಹೆಕ್ಟೇರ್ ವಿಸ್ತಾರದಲ್ಲಿದ್ದು, ದೊಡ್ಡ ಹಳ್ಳಕ್ಕೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆ ಸಣ್ಣ ಕೆರೆಯನ್ನು ನಿರ್ಮಿಸಿತ್ತು. ಸದ್ಯ ಇಡೀ ಕೆರೆ ಪ್ರದೇಶ ಸಮತಟ್ಟಾಗಿದ್ದು ದೊಡ್ಡ ಪ್ರಮಾಣದ ನೀರು ಬಂದರೂ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಭರ್ತಿಯಾಗಿ ಹೆಚ್ಚುವರಿ ನೀರು ಹರಿದು ಹೋಗುತ್ತದೆ. ಕೆರೆಯ ಒಳಭಾಗ ನೀಲಗಿರಿ, ಮುಳ್ಳುಕಂಟಿಗಳು ಬೆಳೆದಿವೆ. ಅಲ್ಲದೆ ಕೆರೆಯ ಕೋಡಿ ಹಾಳಾಗಿ ದಶಕ ಕಳೆದರೂ ದುರಸ್ತಿಯಾಗಿಲ್ಲ. ಹೀಗಾಗಿ ಅಲ್ಪ ಪ್ರಮಾಣದ ನೀರು ನಿಲ್ಲುತ್ತದೆ ಎಂಬುದು ಗ್ರಾಮಸ್ಥರ ಬೇಸರವಾಗಿದೆ.
ಕೃಷ್ಣ ಬಿಸ್ಕೀಂ ಯೋಜನೆಯಲ್ಲಿ ತಾಲ್ಲೂಕಿನ 18 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾರ್ಯಗತಗೊಂಡಿದ್ದು, ಶಾಖಾಪುರ ಕೆರೆಯೂ ಸೇರಿದೆ. ಕಳೆದ ಬೇಸಿಗೆಯಿಂದ ಇತ್ತೀಚಿನವರೆಗೂ ಕೃಷ್ಣಾ ನದಿಯಿಂದ ಕೆರೆಗೆ ನೀರು ಹರಿಸಲಾಗುತ್ತಿದೆ. ಆದರೆ ಕೆರೆಯು ಅಂಗಳದಂತಿರುವುದರಿಂದ ಒಂದೇ ದಿನದಲ್ಲಿ ನೀರು ತುಂಬುತ್ತದೆ. ಕೋಡಿ ದುಸ್ಥಿತಿಯಿಂದ ಕೆಲ ದಿನಗಳಲ್ಲೇ ಸೋರಿಕೆಯಾಗಿ ಖಾಲಿಯಾಗುತ್ತದೆ. ಅದರ ಬಗ್ಗೆ ಯಾರೊಬ್ಬರೂ ಕಾಳಜಿ ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಕೆರೆಯ ಅಂಗಳದ ಆಳ ಹೆಚ್ಚಿಸಿ, ಸುತ್ತಲಿನ ಏರಿ ಎತ್ತರಿಸಿ, ಕೋಡಿ ನಿರ್ಮಿಸಿದರೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. ಬೇಸಿಗೆಯಲ್ಲೂ ನೀರು ಲಭ್ಯವಾಗುತ್ತದೆ. ಅಂತರ್ಜಲ ಮರುಪೂರಣ ಹೆಚ್ಚಳವಾಗಿ, ಸುತ್ತಲಿನ ಕೊಳವೆಬಾವಿಗಳಲ್ಲಿ ಜೀವಸೆಲೆ ಜಿನುಗುತ್ತದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನಹರಿಸಬೇಕಿದೆ ಎಂದು ಗ್ರಾಮದ ಹನುಮಪ್ಪ, ಬಸವರಾಜ ಇತರರು ಹೇಳಿದರು.
ಅರಣ್ಯ ಇಲಾಖೆ ಅಡ್ಡಗಾಲು
ಕೆರೆ ಪ್ರದೇಶ ಪ್ರಾದೇಶಿಕ ಅರಣ್ಯ ಇಲಾಖೆಗೆ ಸೇರಿರುವುದರಿಂದ ಗಿಡಗಂಟಿಗಳನ್ನು ತೆಗೆದು ಕೆರೆ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಈ ವಿಷಯ ಜಿಲ್ಲಾಡಳಿತದ ಗಮನಕ್ಕೂ ಬಂದಿದೆ ಎಂದು ವಿವರಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ ‘ತಾಲ್ಲೂಕಿನಲ್ಲಿ ಅನೇಕ ಸಣ್ಣ ಕೆರೆಗಳಿದ್ದು ಅಭಿವೃದ್ಧಿಪಡಿಸುವ ಅಗತ್ಯವಿದೆ. ಆದರೆ ರಾಜ್ಯ ಸರ್ಕಾರ ಕೆರೆಗಳ ಸುಧಾರಣೆಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ’ ಎಂದು ಹೇಳಿದರು.
ಶಾಖಾಪುರ ಕೆರೆ ಇನ್ನಷ್ಟು ವಿಸ್ತಾರಗೊಳಿಸಿ ಅಭಿವೃದ್ಧಿಗೊಳಿಸಿದರೆ ಹೆಚ್ಚು ನೀರು ನಿಲ್ಲುತ್ತದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತೇನೆ.ದೊಡ್ಡನಗೌಡ ಪಾಟೀಲ, ಶಾಸಕ
ಕೆರೆ ಸುತ್ತಲಿನ ಮಾಳಿ(ದಿಬ್ಬ) ಸಮತಟ್ಟು ಮಾಡಿ ಕೆರೆ ಅಭಿವೃದ್ಧಿಪಡಿಸಬೇಕು. ಊರೊಳಗೆ ನೀರು ನುಗ್ಗದಂತೆ ರಕ್ಷಣಾ ಗೋಡೆಯನ್ನು ನಿರ್ಮಿಸಿದರೆ ಅನುಕೂಲವಾಗುತ್ತದೆ.ಹನುಮೇಶ ಬುರ್ಲಿ, ಗ್ರಾಮಸ್ಥ
ಕೆರೆ ಅಭಿವೃದ್ಧಿ ವಿಚಾರವಾಗಿ ಯಾವ ಇಲಾಖೆಯಿಂದಲೂ ಮಾಹಿತಿ ಬಂದಿಲ್ಲ. ಸಂಬಂಧಿಸಿದವರು ಪತ್ರ ಬರೆದರೆ ಇಲಾಖೆ ನಿಯಮಗಳಂತೆ ಕ್ರಮ ಕೈಗೊಳ್ಳಬಹುದಾಗಿದೆ.ಶಿವರಾಜ ಮೇಟಿ, ಪ್ರಾದೇಶಿಕ ಅರಣ್ಯ ಅಧಿಕಾರಿ, ಕುಷ್ಟಗಿ ವಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.