ಕೊಪ್ಪಳ: ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕನಾಮಕರಣ ಮಾಡಿರುವುದುಸ್ವಾಗತಾರ್ಹ. ಇದರ ಜೊತೆಗೆ ಜನರ ಕಲ್ಯಾಣವಾದರೆ ಮಾತ್ರ ಹೆಸರು ಇಟ್ಟಿದ್ದು ಸಾರ್ಥಕವಾಗುತ್ತದೆ ಎಂದುಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಕಿಡದಾಳ ಗ್ರಾಮದಲ್ಲಿರುವ ಶ್ರೀ ಶಾರದಾ ಇಂಟರ್ ನ್ಯಾಶನಲ್ ಸ್ಕೂಲ್ಶಾರದಾ ಉತ್ಸವ-2019ಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ವಿನಯದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ. ಬಡತನ, ಗ್ರಾಮೀಣ ಭಾಗ, ಕೃಷಿಕ ಕುಟುಂಬದಿಂದ ಬಂದ ನಾವೇ ಸಾಧನೆ ಮಾಡಿರುವಾಗ ಇಷ್ಟೆಲ್ಲ ಸೌಲಭ್ಯಗಳನ್ನು ಹೊಂದಿದಂತಹ ಮಕ್ಕಳು ಸಾಧನೆ ಮಾಡಲು ಸಾಧ್ಯ. ಅದಕ್ಕಾಗಿ ಆತ್ಮವಿಶ್ವಾಸ, ತ್ಯಾಗ ಮನೋಭಾವದಿಂದ ನಾವು ಉನ್ನತ ಸ್ಥಾನ ತಲುಪಬಹುದು ಎಂದು ಹೇಳಿದರು.
ಉದಾತ್ತ ಆಶಯಗಳನ್ನು ಹೊಂದಿರುವ ಉತ್ತರ ಕರ್ನಾಟಕ ಎತ್ತರದ ಕರ್ನಾಟಕವಾಗಬೇಕು. ಈ ಭಾಗದಲ್ಲಿ ಶಿಕ್ಷಣದ ಅವಶ್ಯಕತೆ ಹೆಚ್ಚಾಗಿದೆ. ಸಂಸ್ಥೆಗಳು ಇವೆ. ಗುಣಮಟ್ಟದ ಶಿಕ್ಷಣವಿಲ್ಲ. ಅಂಕಗಳ ಆಧಾರದ ಮೇಲೆ ಶಿಕ್ಷಣ ವ್ಯವಸ್ಥೆ ಇದೆ. ಬದುಕು ಕಲಿಸುವ ಶಿಕ್ಷಣ ಬೇಕಾಗಿದೆ. ಹಿಂದೆ ದೇವರು ಕಲ್ಲಾಗಿದ್ದವು, ಮನುಷ್ಯರು ಬಂಗಾರವಾಗಿದ್ದರು. ಇಂದು ದೇವರ ಮೂರ್ತಿ ಬಂಗಾರವಾಗಿದ್ದರೆ, ಮನುಷ್ಯರ ಮನಸ್ಸು ಕಲ್ಲಾಗಿವೆ ಎಂದು ವಿಷಾದಿಸಿದರು.
ಗಣಿತ ಪ್ರಯೋಗಾಲಯ ಉದ್ಘಾಟಿಸಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ್ ಮಾತನಾಡಿ, ಉತ್ತರ ಕರ್ನಾಟಕದ ಜನತೆಗೆ ವಿಶೇಷವಾಗಿ ಶಾರೀರಿಕ ಮತ್ತು ಬೌದ್ಧಿಕ ಶಕ್ತಿ ಇದೆ. ಅವುಗಳನ್ನು ಉತ್ತೇಜಿಸುವ ಕೆಲಸವಾಗಬೇಕಿದೆ. ಈ ಭಾಗದಲ್ಲಿ ಇಂತಹ ಅದ್ಭುತವಾದ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿರುವ ಪಾಟೀಲ ಸಹೋದರರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ಕೊಪ್ಪಳ ಐತಿಹಾಸಿಕ, ತಿರುಳ್ಗನ್ನಡ ನಾಡು. ಅದಕ್ಕೆ ತನ್ನದೇ ಆದ ಸಾಂಸ್ಕೃತಿಕ ಇತಿಹಾಸವಿದೆ. ಇಂದು ಇಂಗ್ಲಿಷ್, ಡಾಲರ್ ವ್ಯಾಮೋಹಕ್ಕೆ ಬಿದ್ದು, ತಾಯಿ, ತಂದೆ, ಬಂಧು, ಬಳಗವನ್ನೇ ಮರೆತಿದ್ದಾರೆ. ಆಂಗ್ಲ ಭಾಷೆ ಪಡಸಾಲೆಯ ಭಾಷೆ. ಅದನ್ನು ಅಡುಗೆ ಮನೆಗೆ ತಂದು ನಮ್ಮ ಬುದುಕು ಹಾಳು ಮಾಡಿಕೊಳ್ಳುತ್ತಿದ್ದೇವೆ. ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡುವ ವ್ಯವಸ್ಥೆ ಆಗಬೇಕು. ಕೃಷಿಗೆ ಸಂಬಂಧಿಸಿದ ಪಠ್ಯಗಳನ್ನು ಬೋಧೀಸಬೇಕು ಎಂದು ಸಲಹೆ ನೀಡಿದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಭಾರತ ವಿಶ್ವಗುರುವಾಗಿದ್ದು ತನ್ನ ಸಂಸ್ಕೃತಿ, ಸಂಸ್ಕಾರ, ಶಿಕ್ಷಣದಿಂದ ಮಾತ್ರ. ಇಂತಹ ಸ್ಥಾನವನ್ನು ಈ ಶಿಕ್ಷಣ ಸಂಸ್ಥೆಗಳು ತುಂಬಬೇಕು.ಅನೇಕ ಜನ ಶ್ರೀಮಂತರು ಇರಬಹುದು. ಮಕ್ಕಳಿಗೆ ಶಿಕ್ಷಣ ದಾಸೋಹ ನೀಡುವ ಮನೋಭಾವ ಕಡಿಮೆ. ಯಾವುದೇ ಜಾತಿ, ಧರ್ಮ, ಭಾಷೆ ಬೇಧವಿಲ್ಲದ ಶಿಕ್ಷಣ ನೀಡಿದಾಗ ಮಾತ್ರ ನಿಜವಾದ ಅಭಿವೃದ್ಧಿ ಆಗುತ್ತದೆ. ಸ್ವಾಮಿ ವಿವೇಕಾನಂದರ ಮಾತಿನಂತೆ ಶಿಕ್ಷಣದಿಂದಲೇ ಬಲಿಷ್ಠ ರಾಷ್ಟ್ರ, ಧರ್ಮ ಕಟ್ಟಲು ಸಾಧ್ಯ ಎಂದು ಹೇಳಿದ್ದಾರೆ. ಅವರ ಆದರ್ಶನವನ್ನು ನಾವು ಪಾಲಿಸಬೇಕು ಎಂದು ಹೇಳಿದರು.
ಶಾಸಕ ಹಾಲಪ್ಪ ಆಚಾರ್, ಅಮರೇಗೌಡ ಬಯ್ಯಾಪುರ, ಬಸವರಾಜ ದಡೇಸಗೂರ, ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ.ಆರ್.ಅನುರಾಧಾ ಪ್ರಕಾಶ್ ಮಾತನಾಡಿದರು.
ಪಿಯು ಕಾಲೇಜು ನೂತನ ಕಟ್ಟಡವನ್ನುಸಾನ್ನಿಧ್ಯ ವಹಿಸಿದ್ದ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಗವಿಮಠದ ಸಂಸ್ಥಾನದ ಡಾ.ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಶಾಲೆಯ ನೂತನ ಕಟ್ಟಡ, ಯಲಬುರ್ಗಾ ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.
ಶಾರದಾ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ವಿ.ಆರ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಸ್.ಆರ್.ಪಾಟೀಲ, ಜಿಲ್ಲಾ ನ್ಯಾಯಾಧೀಶಸಂಜೀವ್ ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.