ADVERTISEMENT

ಕೊಪ್ಪಳ: ಸರ್ಕಾರಿ ಜಾಗದಲ್ಲಿ ಶೆಡ್‌: ತೆರವು

ಅಧಿಕಾರಿಗಳ ಜತೆ ಮಾತಿನ ಚಕಮಕಿ, ಪೊಲೀಸರ ಮಧ್ಯಸ್ಥಿಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 7:50 IST
Last Updated 16 ಡಿಸೆಂಬರ್ 2023, 7:50 IST
ಕೊಪ್ಪಳದಲ್ಲಿ ಶುಕ್ರವಾರ ನಗರಸಭೆ ಸಿಬ್ಬಂದಿ ಶೆಡ್‌ ತೆರವು ಮಾಡಿದರು
ಕೊಪ್ಪಳದಲ್ಲಿ ಶುಕ್ರವಾರ ನಗರಸಭೆ ಸಿಬ್ಬಂದಿ ಶೆಡ್‌ ತೆರವು ಮಾಡಿದರು   

ಕೊಪ್ಪಳ: ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಶೆಡ್‌ ನಿರ್ಮಾಣ ಮಾಡಿದ್ದ ಇಲ್ಲಿನ ಕುವೆಂಪು ನಗರದಲ್ಲಿ ನಗರಸಭೆ ಸಿಬ್ಬಂದಿ ಶುಕ್ರವಾರ ತೆರವು ಕಾರ್ಯಾಚರಣೆ ನಡೆಸಿದರು.

ಹೂವಿನಾಳ ರಸ್ತೆಯಲ್ಲಿರುವ ಬಡಾವಣೆಯಲ್ಲಿ ಸಂಜೀವಮೂರ್ತಿ ಚೆನ್ನದಾಸರ ಮತ್ತು ಪ್ರವೀಣ ಕನ್ನಾರಿ ಎಂಬುವರು ಒತ್ತುವರಿ ಮಾಡಿಕೊಂಡು ಶೆಡ್‌ ಕೂಡ ನಿರ್ಮಿಸಿದ್ದರು. ಇದನ್ನು ನೋಡಿದ ಎಂಟತ್ತು ಜನ ಅದೇ ಬಡಾವಣೆಯಲ್ಲಿ ಶೆಡ್‌ ಹಾಕಿಕೊಳ್ಳಲು ತಯಾರಿ ಮಾಡಿಕೊಂಡಿದ್ದರು. ಇದನ್ನು ತೆರವು ಮಾಡಲು ಗುರುವಾರ ಹೋದಾಗ ಹಲವರು ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಆದ್ದರಿಂದ ಪೊಲೀಸರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದರು. ಇದರಿಂದಾಗಿ ಕಾರ್ಯಾಚರಣೆ ಪೂರ್ಣಗೊಂಡಿರಲಿಲ್ಲ. ಶುಕ್ರವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ನಡೆಸಿದ ನಗರಸಭೆ ಸಿಬ್ಬಂದಿ ಅಕ್ರಮ ಶೆಡ್‌ಗಳನ್ನು ತೆರವು ಮಾಡಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಗಣಪತಿ ಪಾಟೀಲ ‘ಸರ್ಕಾರಿ ಜಾಗವನ್ನು ಯಾರು ಬೇಕಾದರೂ ಒತ್ತುವರಿ ಮಾಡುವುದನ್ನು ಒಪ್ಪುವುದಿಲ್ಲ. ನಿರಾಶ್ರಿತರಿಗೆ ಆಶ್ರಯ ಮನೆ ಒದಗಿಸುವುದಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಎರಡ್ಮೂರು ದಿನಗಳ ಹಿಂದೆಯಷ್ಟೇ ಹೇಳಿದ್ದು, ಸೋಮವಾರ ಆಶ್ರಯ ಸಮಿತಿಯ ಸಭೆ ಕರೆದಿದ್ದಾರೆ. ಅಷ್ಟರಲ್ಲಿಯೇ ಜಾಗ ಒತ್ತುವರಿ ಮಾಡಲಾಗಿದೆ’ ಎಂದರು.

ADVERTISEMENT

‘ಒತ್ತುವರಿ ಮಾಡಿಕೊಂಡ ಜಾಗವನ್ನು ಖಾಲಿ ಮಾಡಬೇಕು ಎಂದು ಕಳೆದ ತಿಂಗಳೇ ನೋಟಿಸ್‌ ನೀಡಿದ್ದರೂ ಕೇಳಿರಲಿಲ್ಲ. ಆದ್ದರಿಂದ ಕಾರ್ಯಾಚರಣೆ ನಡೆಸಿದೆವು. ಯಾರೇ ಸರ್ಕಾರಿ ಜಾಗ ಒತ್ತುವರಿ ಮಾಡಿದರೂ ಕ್ರಮ ನಿಶ್ಚಿತ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.