ADVERTISEMENT

ಕನಕಗಿರಿ: ಜನರಲ್ಲಿ ಯೋಗ ಜಾಗೃತಿ ಮೂಡಿಸಿದ ಶೇಖರಯ್ಯ ಕಲ್ಮಠ

ಮೆಹಬೂಬ ಹುಸೇನ
Published 21 ಜೂನ್ 2024, 4:59 IST
Last Updated 21 ಜೂನ್ 2024, 4:59 IST
ಕನಕಗಿರಿಯಲ್ಲಿ ನಡೆದ ಉಚಿತ ಯೋಗ ಶಿಬಿರದಲ್ಲಿ ಶೇಖರಯ್ಯ ಕಲ್ಮಠ ಅವರನ್ನು ಶಿಬಿರಾರ್ಥಿಗಳು ಸನ್ಮಾನಿಸಿದರು
ಕನಕಗಿರಿಯಲ್ಲಿ ನಡೆದ ಉಚಿತ ಯೋಗ ಶಿಬಿರದಲ್ಲಿ ಶೇಖರಯ್ಯ ಕಲ್ಮಠ ಅವರನ್ನು ಶಿಬಿರಾರ್ಥಿಗಳು ಸನ್ಮಾನಿಸಿದರು    

ಕನಕಗಿರಿ: ಸಮೀಪದ ಶಿರವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶೇಖರಯ್ಯ ಕಲ್ಮಠ ಅವರು ಶಿಕ್ಷಕ ವೃತ್ತಿಯ ಜತೆಗೆ ಶಾಲಾವಧಿಯ ನಂತರ ಹಾಗೂ ರಜೆ ದಿನಗಳಲ್ಲಿ ಯೋಗ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಯೋಗದಲ್ಲಿ‌ ಪರಿಣಿತಿ ಹೊಂದಿರುವ ಅವರು ಕಳೆದ ಒಂದು ದಶಕದಿಂದಲೂ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸದ್ದಿಲ್ಲದೆ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆರ್ಟ್ ಆಫ್ ಲಿವಿಂಗ್‌ನ ಯೋಗ ಶಿಕ್ಷಕರಾಗಿರುವ ಅವರು ಚಿಕ್ಕ ಮಾದಿನಾಳ, ಹುಲಿಹೈದರ, ಸೋಮಸಾಗರ ಇತರೆ ಗ್ರಾಮಗಳಲ್ಲಿ ಉಚಿತ ಯೋಗ ಶಿಬಿರಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಭಾಗದಲ್ಲಿಯೂ ಯೋಗದಿಂದಾಗುವ ಲಾಭಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ವಿವಿಧ ಇಲಾಖೆ, ಶಿಕ್ಷಣ ಸಂಸ್ಥೆಗಳು ನಡೆಸುವ ಸ್ಕೌಟ್ಸ್‌ ಅಂಡ್‌ ಗೈಡ್ಸ್ ತರಬೇತಿ, ಪಿಯುಸಿ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಹಾಗೂ ಬಿಇಡಿ ವಿದ್ಯಾರ್ಥಿಗಳ ಪೌರತ್ವ ತರಬೇತಿ‌ ಶಿಬಿರ ಒಳಗೊಂಡಂತೆ ವಿಶ್ವ ಯೋಗ ದಿನಾಚರಣೆ ದಿನ ಯೋಗಾಸನಗಳನ್ನು ಮಾಡಿಸುವುದು ಮತ್ತು ಅವುಗಳಿಂದಾಗುವ ಲಾಭಗಳ‌ ಕುರಿತು ಮಾಹಿತಿ ನೀಡಿದ್ದಾರೆ.

ADVERTISEMENT

ವಿಶೇಷ ತರಬೇತಿ ಅಲ್ಲದೆ ನಿತ್ಯವೂ ಇಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಯೋಗಾಸಾನ ಮಾಡಿಸುತ್ತಿದ್ದಾರೆ.

ನೆರೆ ಹಾವಳಿಗೆ ನೆರವು: 2017ರಲ್ಲಿ ರಾಜ್ಯದಲ್ಲಿ ಸಂಭವಿಸಿದ ನೆರೆ ಹಾವಳಿಗೆ ಮನ ಮಿಡಿದ ಕಲ್ಮಠ ಅವರು ಸುವರ್ಣಗಿರಿ ಯೋಗ ಟ್ರಸ್ಟ್ ವತಿಯಿಂದ ನಿರಾಶ್ರಿತರಿಗೆ ಬಟ್ಟೆ ಬರೆ, ಹೊದಿಕೆ, ಧವಸ ಧಾನ್ಯ ಹಾಗೂ ಆಹಾರ ಕಿಟ್‌ ಕೊಡಿಸಿ ಸೈ ಎನ್ನಿಸಿಕೊಂಡಿದ್ದಾರೆ. ಶೇಖರಯ್ಯ ಅವರ ಯೋಗ ಸೇವೆಯನ್ನು ಗುರುತಿಸಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸುವರ್ಣಗಿರಿ ಸಂಸ್ಥಾನ ವಿರಕ್ತಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ವಿವಿಧ ಸಂಘಸಂಸ್ಥೆಗಳು ಸನ್ಮಾನಿಸಿವೆ.

‘ಶೇಖರಯ್ಯ ಕಲ್ಮಠ ಅವರು ಯೋಗ ಕಲಿಸುವುದನ್ನು ಸಾಮಾಜಿಕ ಸೇವೆ ಎಂದು ತಿಳಿದು ಕೆಲಸ ಮಾಡುತ್ತಿದ್ದಾರೆ. ಇಂದಿನ ಒತ್ತಡಮಯ ಜೀವನದಲ್ಲಿ ಪ್ರತಿಯೊಬ್ಬರಿಗೂ ಯೋಗ ಅವಶ್ಯಕತೆ ಇದೆ’ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಯೋಗ ಟ್ರಸ್ಟ್ ಅಧ್ಯಕ್ಷ ವಾಗೀಶ‌ ಹಿರೇಮಠ, ಸದಸ್ಯರಾದ ಕನಕರೆಡ್ಡಿ ಕೆರಿ, ಆನಂದ ಭತ್ತದ ತಿಳಿಸಿದರು.

ಶೇಖರಯ್ಯ ಕಲ್ಮಠ
ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸಂತಸ ತಂದಿದೆ. ಸಾರ್ವಜನಿಕರು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು
- ಶೇಖರಯ್ಯ ಕಲ್ಮಠ ಯೋಗ ಶಿಕ್ಷಕರು ಕನಕಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.