ಕೊಪ್ಪಳ: ’ಈ ಬಾರಿ 69 ಜನರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು. ಸುವರ್ಣ ಕರ್ನಾಟಕ ವರ್ಷಾಚರಣೆಯೂ ಇರುವ ಕಾರಣ 100 ಜನ ಪ್ರತಿಭಾನ್ವಿತರಿಗೆ ವಿಶೇಷ ಪ್ರಶಸ್ತಿ ಕೊಡಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ’ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವಂತೆ ಅನೇಕ ಶಿಫಾರಸುಗಳು ಬಂದಿವೆಯಾದರೂ ಆಯ್ಕೆ ಸಮಿತಿಯಿದೆ. ಈ ಸಮಿತಿ ಅರ್ಹರನ್ನೇ ಆಯ್ಕೆ ಮಾಡುತ್ತದೆ. ವಿಶೇಷ ಪ್ರಶಸ್ತಿಯನ್ನು ತಲಾ 50 ಮಹಿಳೆಯರು ಹಾಗೂ ಪುರುಷರಿಗೆ ನೀಡಲಾಗುವುದು’ ಎಂದರು.
ಹಿಂದುಳಿದ ವರ್ಗಗಳ ಇಲಾಖೆಯ ಸಚಿವರೂ ಆದ ತಂಗಡಗಿ ‘ನೀವೆಲ್ಲ ಹೇಳುತ್ತಿರುವ ಜಾತಿಗಣತಿ ವಿಚಾರದಲ್ಲಿ ಮುಖ್ಯಮಂತ್ರಿ ಹೇಳಿದಂತೆ ಅವರ ಆದೇಶ ಪಾಲನೆ ಮಾಡುವೆ. ವಾಸ್ತವದಲ್ಲಿ ಇದು ಜಾತಿಗಣತಿ ಅಲ್ಲ; ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಗಣತಿಯಾಗಿದ್ದು, ಇದನ್ನು ಓದದೇ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಇನ್ನು ನಾನೂ ವರದಿ ಓದಿಲ್ಲ’ ಎಂದು ಹೇಳಿದರು.
‘ಈ ಗಣತಿಗಾಗಿ ಎಲ್ಲ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಶಿಕ್ಷಕರು ಕೆಲಸ ಮಾಡಿದ್ದಾರೆ. ಅವರೆಲ್ಲಾ ಒಂದೇ ಜಾತಿಗೆ ಸೇರಿದವರಾ?’ ಎಂದು ಪ್ರಶ್ನಿಸಿದರು. ಬಿಜೆಪಿಯವರು ಯಾರೆಲ್ಲ ಮುಡಾದಲ್ಲಿ ನಿವೇಶನ ಪಡೆದಿದ್ದಾರೆ ಎಂದು ನಾವು ಬಹಿರಂಗ ಮಾಡಿದರೂ ಒಬ್ಬರಾದರೂ ವಾಪಸ್ ಕೊಟ್ಟಿದ್ದಾರಾ?’ ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.