ಕುಷ್ಟಗಿ: ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುವ ಮತ್ತು ಆ ಬೆಳೆಗಳ ಬೇಸಾಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿರುವ ಜಿಲ್ಲೆಯ ಕೃಷಿ ಇಲಾಖೆ ಭಾನುವಾರ ಇಲ್ಲಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಅಂತರಜಿಲ್ಲಾ ಮಟ್ಟದ ‘ಸಿರಿಧಾನ್ಯ ಕಪ್’ ಕ್ರಿಕೆಟ್ ಪಂದ್ಯ ಏರ್ಪಡಿಸಿತ್ತು.
ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷದ ನಿಮಿತ್ತ ಕೃಷಿ ಇಲಾಖೆಯ ಸಿಬ್ಬಂದಿಗಾಗಿ ನಡೆದ ಈ ಪಂದ್ಯದಲ್ಲಿ ವಿವಿಧ ಜಿಲ್ಲೆಗಳ ನೌಕರರು, ಅಧಿಕಾರಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬಾಗಲಕೋಟೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೆನ್ನವರ ಪಂದ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊಪ್ಪಳ ಜಿಲ್ಲೆಯ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವಪ್ಪ ಯರಗೊಪ್ಪ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ನಮ್ಮ ದೈನಂದಿನ ಆಹಾರ ಶೈಲಿ ಮೂಲ ಕಾರಣವಾಗಿದೆ. ಆದರೆ ಗುಣಮಟ್ಟದ ಆಹಾರ ದೊರಕದ ಕಾರಣ ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ರೀತಿಯ ಕಾಯಿಲೆಗಳು ಕಾಡುತ್ತಿವೆ. ಮಕ್ಕಳು, ಯುವಕರ ಸದೃಢ ದೇಹಕ್ಕೆ ಸಿರಿಧಾನ್ಯದ ಆಹಾರ ಸೇವನೆ ಪೂರಕವಾಗುತ್ತದೆ. ಸದೃಢ ದೇಹದಲ್ಲಿ ಮಾತ್ರ ಉತ್ತಮ ಆರೋಗ್ಯ ಇರಲು ಸಾಧ್ಯ ಎಂದರು. ಅಲ್ಲದೆ ಕೃಷಿ ಇಲಾಖೆ ಕಾರ್ಯಚಟುವಟಿಕೆಯ ಒತ್ತಡದಲ್ಲಿ ಕೆಲಸ ನಿರ್ವಹಿಸುವ ನೌಕರರಲ್ಲಿ ಲವಲವಿಕೆ ಹೆಚ್ಚಿಸುವುದಕ್ಕೂ ಇಂಥ ಕ್ರೀಡಾ ಸ್ಪರ್ಧೆಗಳು ನೆರವಾಗುತ್ತವೆ ಎಂದು ಹೇಳಿದರು. ಮುಂದಿನ ವರ್ಷ ವಿಜಯಪುರದಲ್ಲಿ ಪಂದ್ಯ ನಡೆಯಲಿದೆ ಎಂದು ವಿವರಿಸಿದರು.
ವಿಜಯನಗರ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಅಧ್ಯಕ್ಷತೆ ವಹಿಸಿದ್ದರು. ಉಪನಿರ್ದೇಶಕ ನಯೀಮ್ ಪಾಷಾ, ಸಂತೋಷ ಪಟ್ಟದಕಲ್, ನಿಂಗಪ್ಪ ಬಾಗಲಕೋಟೆ, ಮಲ್ಲಪ್ಪ, ಸಂಗಮೇಶ ಗೂಳಪ್ಪಗೋಳ, ಸುನಿಲ್ ನಾಯಕ, ರಾಯಚೂರಿನ ಮಿಯಾಜ ಮಹ್ಮದ್ ಇತರರು ಇದ್ದರು.
ಕುಷ್ಟಗಿ ತಾಲ್ಲೂಕು ಟಕ್ಕಳಕಿ ಗ್ರಾಮದ ಸಿರಿಧಾನ್ಯ ಬೆಳೆಗಾರ ಶಿವನಗೌಡ ಪಂದ್ಯದಲ್ಲಿ ಭಾಗವಹಿಸಿದ ತಂಡಗಳಿಗೆ ಸಿರಿಧಾನ್ಯಗಳಿಂದ ತಯಾರಿಸಿದ ಊಟ ಹಾಗೂ ಸಿಹಿ ಖಾದ್ಯಗಳ ವ್ಯವಸ್ಥೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.