ADVERTISEMENT

ಮಠಗಳ ಸಾಮಾಜಿಕ ಕಾಳಜಿ ಅನುಕರಣೀಯ: ಬಸವಲಿಂಗೇಶ್ವರ ಸ್ವಾಮೀಜಿ

ಸಿದ್ಧರಾಮೇಶ್ವರ ಸ್ವಾಮೀಜಿಯ ಪಟ್ಟಾಧಿಕಾರ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 4:39 IST
Last Updated 9 ಫೆಬ್ರುವರಿ 2024, 4:39 IST
ಯಲಬುರ್ಗಾ ಪಟ್ಟಣದ ಸಂಸ್ಥಾನ ಹಿರೇಮಠದ ಪೀಠಾಧಿಕಾರಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ 24ನೇ ವರ್ಷದ ಪಟ್ಟಾಧಿಕಾರ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು
ಯಲಬುರ್ಗಾ ಪಟ್ಟಣದ ಸಂಸ್ಥಾನ ಹಿರೇಮಠದ ಪೀಠಾಧಿಕಾರಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ 24ನೇ ವರ್ಷದ ಪಟ್ಟಾಧಿಕಾರ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು   

ಯಲಬುರ್ಗಾ: ಧರ್ಮ ಜಾಗೃತಿ, ಉತ್ತಮ ಸಂಸ್ಕಾರಗಳನ್ನು ತಿಳಿಸಿಕೊಡುವುದರ ಜೊತೆಗೆ ಸಾಮಾಜಿಕ ಸುಧಾರಣೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮಠಗಳ ಸಾಮಾಜಿಕ ಕಾಳಜಿಯು ಅನುಕರಣೀಯ ಎಂದು ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಸಂಸ್ಥಾನ ಹಿರೇಮಠದ ಸಿದ್ಧರಾಮೇಶ್ವರ ಸ್ವಾಮೀಜಿಯವರ 24ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ತುಲಾಭಾರ, ಗೌರವ ಸಮರ್ಪಣೆ, ಉಪನ್ಯಾಸ, ಸಂಗೀತ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ವಿಶೇಷ ಕೊಡುಗೆ ನೀಡುತ್ತಿರುವ ಮಠಗಳು ಸಮುದಾಯ ಸಂಘಟನೆಯಲ್ಲಿ ಸಾಕಷ್ಟು ಬದಲಾವಣೆ ತರುವ ಕೆಲಸ ಮಾಡುತ್ತಿವೆ. ಭಕ್ತರಿಂದ ಹಾಗೂ ಭಕ್ತರಿಗಾಗಿಯೇ ಇರುವ ಮಠಗಳು ಶ್ರದ್ಧಾ ಕೇಂದ್ರಗಳಾಗಿ, ಧಾರ್ಮಿಕ ಚಟುವಟಿಕೆಗಳ ವೇದಿಕೆಗಳಾಗಿ ರೂಪುಗೊಂಡಿವೆ ಎಂದು ನುಡಿದರು.

ಸಾಹಿತಿ, ಕನಕಗಿರಿಯ ಅಲ್ಲಾಗಿರಿರಾಜ ಮಾತನಾಡಿ, ಶ್ರೀಮಠವನ್ನು ಉನ್ನತಹಂತಕ್ಕೆ ಕೊಂಡ್ಯೊಯ್ದ ಕೀರ್ತಿ ಈಗಿನ ಶ್ರೀಗಳಿಗೆ ಸಲ್ಲುತ್ತದೆ. ವಿಶೇಷವಾಗಿ ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿಗೊಳಿಸಿದ ಇವರ ಸಂಸ್ಥೆಯಿಂದ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಉತ್ತಮ ಮಟ್ಟದಲ್ಲಿ ಸಾಧನೆ ಮಾಡಿದ ಒಳ್ಳೆಯ ಬದುಕು ಕಟ್ಟಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಇದಕ್ಕೂ ಮೊದಲು ವೀರೇಶ್ವರ ಪುಣ್ಯಾಶ್ರಮದ ವೀರಯ್ಯ ಚರಂತಿಮಠ ಹಾಗೂ ಸಂಗಡಿಗರಿಂದ ಪ್ರವಚನ ಮತ್ತು ಸಂಗೀತ ಕಾರ್ಯಕ್ರಮ ಜರುಗಿತು. ವಿವಿಧ ಗ್ರಾಮದ ಭಕ್ತರು ಸಿದ್ಧರಾಮೇಶ್ವರ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮವನ್ನು ನೆರವೇರಿಸಿ ಗೌರವ ಸಲ್ಲಿಸಿದರು.

ಅಳವಂಡಿಯ ಸಿದ್ದೇಶ್ವರ ಸಂಸ್ಥಾನ ಹಿರೇಮಠದ ಮರುಳಾರಾಧ್ಯ ಸ್ವಾಮೀಜಿಗಳು ಮಾತನಾಡಿದರು. ಮಾನಿಹಳ್ಳಿಯ ಪುರವರ್ಗಮಠದ ಮಳೆಯೋಗಿಶ್ವರ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ವರ್ತಕ ಅಮರಪ್ಪ ಕಲಬುರ್ಗಿ, ಸಂಗಣ್ಣ ಟೆಂಗಿನಕಾಯಿ ಸೇರಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಹೊಸಪೇಟೆಯ ಕಾರಿಗನೂರಿನ ಕೃತಿ ಆಕೃತಿ ಕಲಾ ಟ್ರಸ್ಟ್ ಇವರಿಂದ ‘ದುಡ್ಡೇ ದೊಡ್ಡಪ್ಪ’ ನಾಟಕ ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.