ಕೊಪ್ಪಳ: ‘ಹಿಂದಿನ ವಿಧಾನಸಭಾ ಚುನಾವಣೆ ವೇಳೆ ನಮ್ಮ ಪಕ್ಷದವರಿಂದಲೇ ನನಗೆ ಸೋಲಾಗಿದೆ. ನನ್ನ ವಿರುದ್ಧ ಹೊತ್ತಿಗೆ ತರುವುದಾಗಿ ಹೇಳುತ್ತಿರುವವರು ಹೊತ್ತಿಗೆಯಷ್ಟೇ ಅಲ್ಲ; ಒಂದು ಗ್ರಂಥಾಲಯಕ್ಕೆ ಆಗುವಷ್ಟು ಪುಸ್ತಕಗಳನ್ನು ಹೊರತಂದರೂ ಹೆದರುವುದಿಲ್ಲ’ ಎಂದು ಮಾಜಿ ಸಚಿವ ಕಾಂಗ್ರೆಸ್‌ನ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
‘ಪ್ರಜಾವಾಣಿ’ಯ ಗುರುವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಡೀಲರ್’ ಹೇಳಿಕೆಗೆ ಒಳಬೇಗುದಿ? ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಗೆ ಪ್ರತಿಕ್ರಿಯೆ ನೀಡಿರುವ ಅವರು ‘ನಾನು ಯಾವುದೇ ತಪ್ಪು ಮಾಡಿಲ್ಲ. ಚುನಾವಣಾ ಸಮಯದಲ್ಲಿ ವಿರೋಧ ಪಕ್ಷದವರು ತಂತ್ರ ಹಾಗೂ ಕುತಂತ್ರ ಮಾಡುವುದು ಸಾಮಾನ್ಯ. ಆದರೆ ನನಗೆ ನಮ್ಮ ಪಕ್ಷದವರೇ ಶಾಸಕ ಜನಾರ್ದನ ರೆಡ್ಡಿ ಜೊತೆ ಡೀಲ್ ಮಾಡಿಕೊಂಡು ನನ್ನ ಸೋಲಿಗೆ ಕಾರಣರಾದರು’ ಎಂದು ಆರೋಪಿಸಿದರು.
‘ಗಂಗಾವತಿ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮಿದ್ ಮನಿಯಾರ್, ಹನುಮಂತಪ್ಪ ಅವರನ್ನು ರಾಜಕೀಯವಾಗಿ ಬೆಳೆಸಿದ್ದು ನಾನೇ. ಚುನಾವಣಾ ಪೂರ್ವದಲ್ಲಿ ರೆಡ್ಡಿ ಜೊತೆಗೆ ಡೀಲ್ ಮಾಡಿಕೊಂಡರು. ಮೇಲ್ನೋಟಕ್ಕೆ ಮಾತ್ರ ನಮ್ಮ ಪಕ್ಷದಲ್ಲಿದ್ದರು. ಯಾರ ಬಳಿಯೂ ಮತ ಯಾಚಿಸಲಿಲ್ಲ’ ಎಂದರು.
‘ಹನುಮಂತಪ್ಪ ಚುನಾವಣಾ ಪೂರ್ವದಲ್ಲಿ ಬೆಂಗಳೂರಿಗೆ ಹೋಗಿ ರೆಡ್ಡಿಗೆ ಕಂಬಳಿ ಹಾಕಿ ಕನಕದಾಸರ ಮೂರ್ತಿ ಕೊಟ್ಟು ಬಂದಿದ್ದಾನೆ. ಲೇಬಗೇರಿಯ ಸೋಮಶೇಖರ ಮೇಟಿ, ತಾಳಕನಕಾಪುರ ಶ್ರೀಕಾಂತ, ಸಂಗಾಪುರದ ಹನುಮಂತ, ಕಮಲಾಪುರದ ಮಲ್ಲಪ್ಪ ತುಬಾಕಿ ಎಲ್ಲರೂ ರೆಡ್ಡಿಯನ್ನು ಹನುಮಂತಪ್ಪ ಮನೆಗೆ ಆಹ್ವಾನಿಸಿ ಚಹಾ ಕುಡಿಸಿ ಕಳುಹಿಸಿದ್ದಾರೆ. ಬಳಿಕ ಹನುಮಂತಪ್ಪಗೆ ನಾನು ಈ ಬಗ್ಗೆ ಕೇಳಿದರೆ ‘ಮನೆ ಬಾಗಿಲಿಗೆ ಬಂದವರಿಗೆ ಸತ್ಕರಿಸಿದ್ದೇನೆ’ ಎಂಬ ಸಬೂಬು ಹೇಳಿದ್ದಾನೆ. ಆತ ಮೊದಲೇ ರೆಡ್ಡಿ ಜೊತೆ ಡೀಲ್ ಆಗಿದ್ದ’ ಎಂದು ಆಪಾದಿಸಿದರು.
‘ಹನುಮಂತಪ್ಪ ಒಂದು ಬೂತ್‌ಗೆ ಮಾತ್ರ ಸೀಮಿತ. ವನಬಳ್ಳಾರಿ ಭಾಗದ ಜನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ ನೋಡಿ ನನಗೆ ಮತ ಹಾಕಿದ್ದಾರೆ. ಯಾವ ಸಮಯದಲ್ಲಿ ಪ್ರಚಾರ ಮಾಡಬೇಕು ಎನ್ನುವುದು ನನ್ನ ರಾಜಕೀಯ ತಂತ್ರದ ಒಂದು ಭಾಗ. ಹಿಂದೆ ಹನುಮಂತಪ್ಪಗೆ ಸಾಕಷ್ಟು ಕೆಲಸ ಕೊಟ್ಟಿದ್ದೇನೆ. ಆತ ಲಾಭವನ್ನೂ ತೆಗೆದುಕೊಂಡಿದ್ದಾನೆ. ಸುಮ್ಮನೆ ಕೆಲಸ ಮಾಡಿಲ್ಲ’ ಎಂದು ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.