ADVERTISEMENT

ವಲಸಿಗರೊಂದಿಗೆ ಕನ್ನಡ ಮಾತನಾಡಿ: ಪುರುಷೋತ್ತಮ ಬಿಳಿಮಲೆ ಸಲಹೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 15:21 IST
Last Updated 24 ನವೆಂಬರ್ 2024, 15:21 IST
ಕೊಪ್ಪಳದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಚನ್ನಪ್ಪ ಅಂಗಡಿ ಮತ್ತು ರವಿ ಹಂಪಿ ಅವರಿಗೆ ಗವಿಸಿದ್ಧ ಎನ್‌. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು
ಕೊಪ್ಪಳದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಚನ್ನಪ್ಪ ಅಂಗಡಿ ಮತ್ತು ರವಿ ಹಂಪಿ ಅವರಿಗೆ ಗವಿಸಿದ್ಧ ಎನ್‌. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಕೊಪ್ಪಳ: ‘ದೈನಂದಿನ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಕೆ ಕಡಿಮೆಯಾಗುತ್ತಿದ್ದು, ವಲಸಿಗರ ಜೊತೆ ನಮ್ಮ ಭಾಷೆಯಲ್ಲಿಯೆ ಅವರೊಂದಿಗೆ ವ್ಯವಹರಿಸಿದರೆ ಅವರಿಗೂ ಕನ್ನಡ ಕಲಿಸಬಹುದು. ಕನ್ನಡದ ಬಗ್ಗೆ ಅಪಾರ ಗೌರವ ಹೊಂದಿದ್ದ ಗವಿಸಿದ್ಧ ಎನ್‌. ಬಳ್ಳಾರಿ ಅವರಿಗೆ ನಾವೆಲ್ಲರೂ ಈ ಮೂಲಕ ಗೌರವ ಸಲ್ಲಿಸಲು ಇದು ದೊಡ್ಡ ಮಾರ್ಗ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು. 

ನಗರದಲ್ಲಿ ಭಾನುವಾರ ಗವಿಸಿದ್ಧ ಎನ್‌. ಬಳ್ಳಾರಿ ವೇದಿಕೆ, ಸಾಹಿತ್ಯ ಸಾಂಸ್ಕೃತಿಕ ಕಲಾ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಮತ್ತು ತಳಮಳ ಪ್ರಕಾಶನದ ಸಹಯೋಗದಲ್ಲಿ ನಡೆದ ಕವಿ ಗವಿಸಿದ್ಧ ಎನ್‌. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಕಾರಣವಿಲ್ಲದ ಪ್ರೀತಿಯೇ ನಿಜವಾದ ಪ್ರೀತಿಯಾಗಿದ್ದು, ಬಳ್ಳಾರಿ ಕುಟುಂಬದವರು ನನಗೆ ಈ ಪ್ರೀತಿ ತೋರಿಸಿದ್ದಾರೆ. ನಾಲ್ಕು ದಶಕಗಳಿಂದ ನಾಡಿನಲ್ಲಿ ನಡೆದ ಅನೇಕ ಹೋರಾಟಗಳನ್ನು ಗವಿಸಿದ್ಧರು ಕಾವ್ಯದ ಮೂಲಕ ಜನರ ಮುಂದಿಟ್ಟರು. ಅವರಿಗೆ ಕಾವ್ಯದ ಒಳಗುಟ್ಟು, ಚೌಕಟ್ಟು, ಬರಹಗಾರನ ಅಸ್ಮಿತೆ ಬಗ್ಗೆ ಚೆನ್ನಾಗಿ ತಿಳಿದಿತ್ತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗಬೇಕು ಎನ್ನುವ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ. ಆದರೆ ಪ್ರತ್ಯೇಕ ರಾಜ್ಯದ ಕೂಗಿನ ಬೇಡಿಕೆಯನ್ನು ಒಪ್ಪುವುದಿಲ್ಲ. ಯಾಕೆಂದರೆ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರ ಜನರ ಬೆವರು ಈಗಲೂ ಆರಿಲ್ಲ’ ಎಂದರು.

ADVERTISEMENT

ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ಗವಿಸಿದ್ಧ ಎನ್‌. ಬಳ್ಳಾರಿ ಅವರ ಬದುಕು ಬರಹ ಕುರಿತು ಮಾತನಾಡಿದರು. ಇದೇ ವೇಳೆ ಧಾರವಾಡದ ಚನ್ನಪ್ಪ ಅಂಗಡಿ ಮತ್ತು ರಾಯಚೂರು ಜಿಲ್ಲೆ ಲಿಂಗಸಗೂರಿನ ರವಿ ಹಂಪಿ ಅವರಿಗೆ ಗವಿಸಿದ್ಧ ಎನ್‌. ಬಳ್ಳಾರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹6 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಚನ್ನಪ್ಪ ಅಂಗಡಿ ಅವರ ‘ಇನ್ನು ಕೊಟ್ಟೆನಾದೊಡೆ‘, ನಾಗೇಶ್ ನಾಯಕ ಅವರ ‘ಮನುಷ್ಯರಿಲ್ಲದ ನೆಲ’ ಮತ್ತು ನಾಗಭೂಷಣ ಅರಳಿ ಅವರ ‘ನೂರೆಂಟು ಹೆಜ್ಜೆಗಳು’ ಕೃತಿಗಳ ಲೋಕಾರ್ಪಣೆಯೂ ನಡೆಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೈದ್ಯ ಗಂಗಾವತಿಯ ಶಿವಕುಮಾರ ಮಾಲಿಪಾಟೀಲ, ಸಣ್ಣೆಪ್ಪ ಯಮನಪ್ಪ ಹಕಾರಿ, ಮಾಬುಸಾಬ್‌ ಕಿಲ್ಲೇದಾರ, ಬಾಲನಾಗಮ್ಮ ಚೆನ್ನದಾಸರ, ರಮ್ಯಾ ಕಾರಟಗಿ, ಮಧುಶ್ರೀ ತೊಂಡಿಹಾಳ, ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಲ್ಲಮಪ್ರಭು ಬೆಟ್ಟದೂರು, ಸುವರ್ಣ ಸಂಭ್ರಮ ಪ್ರಶಸ್ತಿ ಪಡೆದ ಕಿನ್ನಾಳದ ರುಕ್ಮಿಣಿಬಾಯಿ ಚಿತ್ರಗಾರ ಅವರನ್ನು ಸನ್ಮಾನಿಸಲಾಯಿತು.

ಸಾಹಿತ್ಯೋತ್ಸವದ ಸಂಚಾಲಕ ಮಹೇಶ ಬಳ್ಳಾರಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಬಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಪ್ರಕಾಶ ಬಳ್ಳಾರಿ, ರಾಜೇಶ ಬಳ್ಳಾರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಸಾಹಿತ್ಯಕ್ಕೆ ಯೋಚನಾ ಲಹರಿ ಬದಲಿಸುವ ಶಕ್ತಿಯಿದೆ. ಗವಿಸಿದ್ಧ ಬಳ್ಳಾರಿ ಅವರು ಪತ್ರಕರ್ತರಾಗಿ ಸಾಹಿತಿಯಾಗಿ ತಮ್ಮ ಬರವಣಿಗೆ ಗಟ್ಟಿತನ ಉಳಿಸಿಕೊಂಡಿದ್ದರು . ಇದು ಅಪರೂಪ.
ಪ್ರೊ ಬಿ.ಕೆ. ರವಿ ಕೊಪ್ಪಳ ವಿ.ವಿ. ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.