ADVERTISEMENT

ಕನಕಗಿರಿ: ಮೊಹರಂ ಸಂಭ್ರಮಕ್ಕೆ ಹಾಡುಗಳ ಮೆರುಗು

ಕನಕಗಿರಿ, ಸುತ್ತಮುತ್ತ ಕಳೆಗಟ್ಟಿದ ಹಬ್ಬ, ಅಲಾಯಿದೇವರ ಪ್ರತಿಷ್ಠಾಪನೆ

ಮೆಹಬೂಬ ಹುಸೇನ
Published 17 ಜುಲೈ 2024, 6:13 IST
Last Updated 17 ಜುಲೈ 2024, 6:13 IST
ಕನಕಗಿರಿಯಲ್ಲಿ ಸೋಮವಾರ ಬೆಳಗಿನ ಜಾವನ ನಡೆದ ಲಾಲಸಾಬ ಸವಾರಿಯಲ್ಲಿ ಗಂಗಾವತಿಯ ತಾಷ ಮೇಳದವರು ಭಾಗವಹಿಸಿದ್ದರು
ಕನಕಗಿರಿಯಲ್ಲಿ ಸೋಮವಾರ ಬೆಳಗಿನ ಜಾವನ ನಡೆದ ಲಾಲಸಾಬ ಸವಾರಿಯಲ್ಲಿ ಗಂಗಾವತಿಯ ತಾಷ ಮೇಳದವರು ಭಾಗವಹಿಸಿದ್ದರು   

ಕನಕಗಿರಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೊಹರಂ ಹಬ್ಬ ಆರಂಭವಾಗಿದ್ದು ಅಲಾಯಿ ದೇವರುಗಳನ್ನು ಮಸೀದಿಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಹಬ್ಬದ ಸಂಭ್ರಮ ಎಲ್ಲೆಡೆ ಕಳೆಗಟ್ಟಿದೆ.

ಮಸೀದಿಗಳನ್ನು ಸುಣ್ಣ ಬಣ್ಣಗಳಿಂದ ಶೃಂಗಾರಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ. ಪ್ರತಿ ಮಸೀದಿಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳು ಶ್ರದ್ದಾ, ಭಕ್ತಿಯಿಂದ ನಡೆದಿವೆ.

ಅಲಾಯಿ ಕುಣಿಗಳ ಮುಂದೆ ಚಿಣ್ಣರ ಆಟ ನಿಂತು ನೋಡುವಂತಿದೆ. ಮೊಹರಂ ಹಬ್ಬಕ್ಕೆ ಹೆಜ್ಜೆ ಕುಣಿತ, ಲೇಜಿಮ್, ಅಲಾಯಿ ಕುಣಿತ, ತಮಟೆ , ಹಲಗಿ ಸದ್ದು ಜಾಸ್ತಿ. ಬಾಲಕರಿಂದ ಹಿಡಿದು ವೃದ್ದರವರೆಗೆ ಭಾಗವಹಿಸುತ್ತಾರೆ.

ADVERTISEMENT

ಭಾನುವಾರ ಏಳನೇಯ ದಿನದ (ಇಮಾಮಕಾಶೀಂ) ಸವಾರಿ ಹಾಗೂ ಸೋಮವಾರ ಲಾಲಸಾಬ ದೇವರ ಸವಾರಿ ವಿಜೃಂಭಣೆಯಿಂದ ನಡೆಯಿತು. ಇಲ್ಲಿನ ಲಾಲಸಾಬ ಸವಾರಿಗೆ ಗಂಗಾವತಿಯ ತಾಷವಾಲ್‌ದವರು ಕನ್ನಡ, ಹಿಂದಿ, ಕವಾಲಿಗಳ ಮೂಲಕ ಪ್ರತಿ ವರ್ಷ ಮೆರಗು ನೀಡುತ್ತಾರೆ.

ವೃತ್ತಿಯಲ್ಲಿ ಟೇಲರ್ ಆಗಿರುವ ಗಂಗಾವತಿಯ ಹುಸೇನಸಾಬ ತಾಷವಾಲ್, ಶಾಹಿಲ್ ಪಾಷ, ಅಬ್ದುಲ್, ಮಹ್ಮದ ಸೇರಿದಂತೆ 15 ಜನರ ತಂಡ ಭಾಗವಹಿಸಿ ಸವಾರಿಯ ಸಂಭ್ರಮವನ್ನು ಹೆಚ್ಚಿಸುತ್ತಾರೆ. ರಾಜಬೀದಿ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಿಯೊನೊ ನಿನಾದ ಕೇಳದವರು ಇಲ್ಲ ಎಂಬ ಭಾವನೆ ಮನೆ ಮಾಡಿದೆ. ಬುಲ್‌ಬುಲ್ ತಾರ, ಪಿಯಾನೊ, ಬ್ಯಾಜೊ ಎಂಬ ಸಾಧನ ಬಳಸಿ ದೇವರ ಮೆರವಣಿಗೆ ಮುಂದೆ ವಿವಿಧ ಹಾಡುಗಳ ಕೈ ಚಳಕ ತೋರಿಸುತ್ತಾರೆ.

ತಳ್ಳುವ ಬಂಡೆ ಅಥವಾ ಆಟೊದಲ್ಲಿ ಸಂಗೀತ ಸಾಮಗ್ರಿ ಇಟ್ಟು ಗಾನಸುಧೆ ಹರಿಸುತ್ತಾರೆ. ಹಾಡುಗಳಿಗೆ ತಕ್ಕಂತೆ ಡೋಲ್, ಹಲಗಿ ಮೇಳದವರು ತಾಷ ಬಡೆಯುತ್ತಾರೆ.

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಕರಿಮಣಿ ಮಾಲೀಕ ನೀನಲ್ಲ, ಚೆನ್ನಪ್ಪ ಚೆನ್ನಗೌಡ, ತಿಂಗಳ ಬೆಳಕಿನ ಅಂಗಳದಲ್ಲಿ, ಚೆಲ್ಲಿದರು ಮಲ್ಲಿಗೆಯಾ, ಸಂತ ಶಿಶುನಾಳ ಷರೀಫ ಸವಾಲೊಂದು ನಿನ್ನ ಮೇಲೆ ಹೀಗೆ ಹಲವಾರು ಹಾಡುಗಳು ಜನಮನ ಸೂರೆಗೊಳ್ಳುತ್ತವೆ.

ಕನ್ನಡದ ಹಾಡುಗಳ ಜತೆಗೆ ಹಿಂದಿ ಹಾಡುಗಳು ಗಮನ ಸೆಳೆಯುತ್ತವೆ. ಇಂತ ಹಾಡುಗಳಿಗೆ ಮನಸೋತ ಯುವಕರು ಮೆರವಣಿಗೆ ಮುಂದೆ ಕುಣಿದು ಕುಪ್ಪಳಿಸುತ್ತಾರೆ. ಮಸೀದಿಯಿಂದ ಆರಂಭವಾದ ಈ ಹಾಡುಗಳು ಬರೋಬ್ಬರಿ 4 ನಾಲ್ಕು ಗಂಟೆಗೆ ಕೊನೆಗೊಳ್ಳುತ್ತವೆ.

‘ನಮ್ಮ ಪೂರ್ವಜರ ಕಾಲದಿಂದಲೂ ತಾಷ ಕಲೆಯಲ್ಲಿ ಗುರುತಿಸಿಕೊಂಡಿದ್ದೇವೆ, ಯಾವುದೇ ಉತ್ಸವ, ಗಣೇಶ ಚತುರ್ಥಿ, ಇತರೆ ಕಾರ್ಯಕ್ರಮಗಳಿಗೆ ಹೋಗುತ್ತೇವೆ, ಲಾಲಸಾಬ ದೇವರ ಮೆರವಣಿಗೆ ವಿಶಿಷ್ಟವಾಗಿದೆ. ಹಿಂದಿ, ಕನ್ನಡ ಹಾಡುಗಳಿಗೆ ಜನ ಮನಸೋತು ಖುಷಿ ವ್ಯಕ್ತ ಪಡಿಸುವುದು ತಮಗೆ ಸಂತಸ ತಂದಿದೆ’ ಎಂದು ನ್ಯೂ ಆಲ್ ಮ್ಯೂಜಿಕಲ್ ತಾಷರಮ್ ಡೋಲ್ ಜನಪದ ಕಲಾವಿದ ಹುಸೇನಸಾಬ ತಿಳಿಸುತ್ತಾರೆ.

ಕನಕಗಿರಿಯಲ್ಲಿ ಲಾಲಸಾಬ ದೇವರ ಮೆರವಣಿಗೆ ಮಂಗಳವಾರ ನಸುಕಿನ ಜಾವ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.