ತಾವರಗೇರಾ (ಕೊಪ್ಪಳ ಜಿಲ್ಲೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಸಮೀಪದ ನಂದಾಪುರ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಭಾವೈಕ್ಯದ ಸಂಗಮವಾಗಿ ಆಚರಿಸಲಾಗುತ್ತಿದೆ. ಗ್ರಾಮದ ಮಸೀದಿಗೆ ಹೊಸದಾಗಿ ಗೋಪುರ ನಿರ್ಮಿಸಲಾಗಿದ್ದು, ಕಳಸಾರೋಹಣ ನೆರವೇರಿಸುವ ಮೂಲಕ ಜನ ಭಾವೈಕ್ಯ ಮೆರೆದಿದ್ದಾರೆ.
ಮಸೀದಿಯ ಕಟ್ಟಡದ ಮುಂಭಾಗದಲ್ಲಿ ಐದು ಕಿರುಗೋಪುರಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ಎಲ್ಲ ಗೋಪುರಗಳಿಗೂ ಕಳಸ ಇರಿಸಲಾಗಿದೆ. ಗ್ರಾಮದ ಈಶ್ವರ ದೇವಸ್ಥಾನ ಸಮೀಪದಲ್ಲಿರುವ ಹಜರತ್ ಹುಸೇನ್ ಭಾಷಾ ಮಸೀದಿಯಲ್ಲಿ ಮೊಹರಂ ಪ್ರಯುಕ್ತ ಐದು ದಿನಗಳ ಕಾಲ ಅಲಾಯಿ ದೇವರ ಪ್ರತಿಷ್ಠಾಪನೆ ಮಾಡಿದ್ದು, ನೂತನ ಕಳಸ ಮತ್ತು ಮಸೀದಿಗೆ ಹಸಿರು ಧ್ವಜ ಇರಿಸುವ ಕಾರ್ಯ ನಡೆಯಿತು. ಈ ಕಾರ್ಯಕ್ಕೆ ಕುಷ್ಟಗಿಯ ಮದ್ದಾನಿಮಠದ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಕಳಸ ಇರಿಸುವ ಕಾರ್ಯವನ್ನು ಸಂಭ್ರಮದಿಂದ ನೆರವೇರಿಸಲಾಯಿತು. ನೂತನ ಗೋಪುರದ ಕಳಸಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಮಸೀದಿಗೆ ತರಲಾಯಿತು. ಮುಸ್ಲಿಮರು ವಾಸವಿಲ್ಲದ ನಂದಾಪುರದಲ್ಲಿ ಎರಡು ನದಾಫ್ ಸಮಾಜದ ಕುಟುಂಬದವರು ಮಾತ್ರ ಇದ್ದಾರೆ . ಪ್ರತಿ ವರ್ಷದ ಮೊಹರಂ ವೇಳೆ ತಾವರಗೇರಾ ಪಟ್ಟಣದ ಮುಜಾವರ ಸಾಂಪ್ರದಾಯಿಕ ಪೂಜೆ ವಿಧಾನಗಳನ್ನು ನೆರವೇರಿಸುತ್ತಾರೆ.
ಗ್ರಾಮದ ಎಲ್ಲ ಸಮುದಾಯಗಳ ಜನರ ನೆರವಿನಿಂದ ಮಸೀದಿಗೆ ಸುಣ್ಣ–ಬಣ್ಣದಿಂದ ಅಲಂಕಾರ ಮಾಡಲಾಗಿದ್ದು, ದೇಣಿಗೆ ಸಂಗ್ರಹಿಸಿ ಕಳಸ ಖರೀದಿಸಲಾಗಿದೆ. ಗ್ರಾಮಸ್ಥರ ಈ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.
‘ಪ್ರತಿವರ್ಷವೂ ನಮ್ಮಲ್ಲಿ ಮೊಹರಂ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಈ ಬಾರಿ ಮಸೀದಿ ಮೇಲೆ ಗೋಪುರ ನಿರ್ಮಿಸಿ ಹಿತ್ತಾಳೆಯ ಕಳಸ ಇಡಲಾಗಿದ್ದು ಮತ್ತೊಂದು ವಿಶೇಷ’ ಎಂದು ನಂದಾಪುರ ಗ್ರಾಮದ ಶರಣಬಸನಗೌಡ ಪಾಟೀಲ್ ಹೇಳಿದರು.
ಮೊಹರಂ ಸಂದರ್ಭದಲ್ಲಿ ಮಾತ್ರ ಮುಸ್ಲಿಂ ಸಮಾಜದ ಮುಖಂಡರನ್ನು ಕರೆಯಿಸಿ ಪೂಜಾ ವಿಧಾನ ನಡೆಸಲಾಗುತ್ತದೆ. ಗೋಪುರ ಹಾಗೂ ಕಳಸ ಆರೋಹಣ ಮಾಡಿದ್ದು ಭಾವೈಕ್ಯಕ್ಕೆ ಸಾಕ್ಷಿ.-ಸೈಯದ್ ಪಾಷಾ ಮುಜಾವರ, ತಾವರಗೇರಾ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.