ಕೊಪ್ಪಳ: ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಇಲ್ಲಿನ ಜಿಲ್ಲಾ ಕ್ರೀಡಾಂಗಣಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಖೇಲೋ ಇಂಡಿಯಾ ಯೋಜನೆ ಅಡಿ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಪ್ರೇಕ್ಷಕರ ಗ್ಯಾಲರಿ, ಸಿಂಥೆಟಿಕ್ ಟ್ರ್ಯಾಕ್, ಒಳಾಂಗಣ ಕ್ರೀಡಾಂಗಣ ಮುಂತಾದ ಕಾಮಗಾರಿ ನಡೆಯುತ್ತಿದೆ. ಅವುಗಳನ್ನು ಗುಣಮಟ್ಟದಿಂದ ನಿರ್ವಹಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕೊರೊನಾದಿಂದ ಕಳೆದ ಎರಡು ವರ್ಷ ಕ್ರೀಡಾ ಚಟುವಟಿಕೆಗಳಿಗೆ ಗರ ಬಡಿದಂತೆ ಆಗಿದೆ. ಕ್ರೀಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಲಾಖೆಗೆ ಅನುದಾನ ಕೊರತೆಯಾಗದಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಿಂದುಳಿದ ಭಾಗದ ಜಿಲ್ಲೆಗಳಲ್ಲಿ ಕ್ರೀಡಾ ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ ನೀಡಲು ಉದ್ದೇಶಿಸಲಾಗಿದೆ ಎಂದರು.
ಜಿಲ್ಲೆಯ ಕ್ರೀಡಾಂಗಣಗಳ ಸಮಸ್ಯೆ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಪರಿಶೀಲನಾ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡು ಯೋಜನೆ ರೂಪಿಸಲಾಗುತ್ತದೆ ಎಂದರು.
ಸಚಿವರು ಬೆಳಿಗ್ಗೆ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿದರು.
ಸಚಿವ ಹಾಲಪ್ಪ ಆಚಾರ, ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸಚಿವರಿಗೆ ವಿವಿಧ ಯೋಜನೆಯ ಮಾಹಿತಿ ನೀಡಿದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ ಮೈನಳ್ಳಿ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.