ಕೊಪ್ಪಳ: ತಮಗೆ ಬೇಡವಾದ ಅಥವಾ ಯಾವುದೊ ಕಾರಣಕ್ಕಾಗಿ ಎಲ್ಲೆಂದರಲ್ಲಿ ನವಜಾತ ಶಿಶುಗಳನ್ನು ಬೀಸಾಡುವ ಬದಲು ಆ ಕಂದಮ್ಮಗಳಿಗೂ ಬದುಕು ರೂಪಿಸಲು ಸರ್ಕಾರ ‘ಮಮತೆಯ ತೊಟ್ಟಿಲು’ ಆರಂಭಿಸಿದೆ. ಹಿಂದಿನ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಇಬ್ಬರು ಹೆಣ್ಣು ಕಂದಮ್ಮಗಳು ಈ ತೊಟ್ಟಿಲಿನಿಂದ ಆರೈಕೆ ಪಡೆದಿದ್ದು ಬದುಕು ಕಟ್ಟಿಕೊಳ್ಳುತ್ತಿವೆ.
ಜಿಲ್ಲೆಯಲ್ಲಿ ಈಗಾಗಲೇ ನಗರದ ಬಾಲಕರ ಸರ್ಕಾರ ಬಾಲಮಂದಿರ, ಬಾಲಕಿಯರ ಸರ್ಕಾರಿ ಬಾಲಮಂದಿರ, ಅಮೂಲ್ಯ (ಪಿ) ದತ್ತು ಸ್ವೀಕಾರ ಕೇಂದ್ರ, ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನ, ಕಿಮ್ಸ್ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಕೇಂದ್ರದ ಮುಂಭಾಗದಲ್ಲಿ ಮಮತೆಯ ತೊಟ್ಟಿಲು ಇರಿಸಲಾಗಿದೆ. ತಾಯಂದಿರು ತಮಗೆ ಬೇಡವಾದ ಮಗುವನ್ನು ಎಲ್ಲೆಂದರಲ್ಲಿ ಬೀಸಾಡದೆ ಈ ತೊಟ್ಟಿಲಿನಲ್ಲಿ ಹಾಕಿ ಹೋದರೆ ಅದನ್ನು ಮಹಿಳಾ ರಕ್ಷಣಾ ಘಟಕ ಮಗುವಿನ ಪೋಷಣೆ ಮಾಡುತ್ತದೆ.
ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ’ಮಮತೆಯ ತೊಟ್ಟಿಲಿ’ನಲ್ಲಿ ಎರಡು ಕಂದಮ್ಮಗಳು ಲಭಿಸಿವೆ. ಹುಲಿಗಿ ಗ್ರಾಮದಲ್ಲಿ 2018–19ರ ಸಾಲಿನಲ್ಲಿ ಎರಡು ಶಿಶುಗಳು ಲಭಿಸಿದ್ದವು. ಅವುಗಳ ದತ್ತು ಪ್ರಕ್ರಿಯೆ ಪೂರ್ಣಗೊಳಿಸಿದ್ದು ಸರ್ಕಾರದ ಸುಪರ್ದಿಯಲ್ಲಿ ಆ ಮಕ್ಕಳು ಬೆಳೆಯುತ್ತಿವೆ.
ತೊಟ್ಟಿಲುಗಳನ್ನು ಅಳವಡಿಸಿದ್ದಲ್ಲೇ ಮಗುವಿನ ಮಹತ್ವದ ಬಗ್ಗೆಯೂ ಜಾಗೃತಿ ಫಲಕಗಳನ್ನು ಅಳವಡಿಸಲಾಗಿದೆ. ಮಗು ಬೇಡವಾದ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ, ಪೊದೆಗಳಲ್ಲಿ ಬೀಸಾಡಿ ಎಳೆಯ ಜೀವಿಗಳನ್ನು ಹಿಂಸಿಸಬೇಡಿ. ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳಲ್ಲಿ ಬಿಡಿ; ಮಕ್ಕಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಅರಿವು ಮೂಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಇತ್ತೀಚೆಗಿನ ತಿಂಗಳುಗಳಲ್ಲಿ ನವಜಾತ ಶಿಶುಗಳು ಜಗತ್ತಿಗೆ ಕಣ್ಣು ಬಿಡುವ ಮೊದಲೇ ಹೊಸಕಿ ಹಾಕಲಾಗುತ್ತಿದೆ. ಇಲ್ಲಿನ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಎರಡು ನವಜಾತ ಶಿಶುಗಳ ಗುರುತು ಯಾರಿಗೂ ಗೊತ್ತಾಗಬಾರದು ಎಂದು ಶೌಚಾಲಯದಲ್ಲಿ ಹಾಕಿ ತುರಕಲಾಗಿತ್ತು. ಗಂಗಾವತಿ ಬಸ್ ನಿಲ್ದಾಣದಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಇದೇ ತಾಲ್ಲೂಕು ವ್ಯಾಪ್ತಿಯಲ್ಲಿಯೂ ಕಂದಮ್ಮನನ್ನು ಮುಳ್ಳಿನ ಜಾಲಿಯಲ್ಲಿ ಬೀಸಾಡಲಾಗಿತ್ತು. ಇದನ್ನು ತಡೆಯುವ ಉದ್ದೇಶದಿಂದಲೇ ಸರ್ಕಾರ ತೊಟ್ಟಿಲು ಯೋಜನೆ ಆರಂಭಿಸಿದೆ.
ಒಂದು ವೇಳೆ ಹೆತ್ತವರಿಗೆ ತಮ್ಮ ಕಂದಮ್ಮ ಬೇಡವಾದರೆ ಅದನ್ನು ತೊಟ್ಟಿಲಿನಲ್ಲಿ ಹಾಕಿ ಹೋದರೆ ಸುರಕ್ಷಿತವಾಗಿ ಬೆಳೆಯುತ್ತದೆ. ಕಾನೂನು ಪ್ರಕಾರವೇ ಸರ್ಕಾರ ಎಲ್ಲವನ್ನೂ ನಿರ್ವಹಣೆ ಮಾಡುತ್ತದೆ. ಮಗು ನೀಡಿದವರ ಮಾಹಿತಿಯನ್ನೂ ಗೌಪ್ಯವಾಗಿ ಇರಿಸುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಮಮತೆಯ ತೊಟ್ಟಿಲು ಸಂಖ್ಯೆ ಹೆಚ್ಚಿಸಲು ಮಕ್ಕಳ ರಕ್ಷಣಾ ಘಟಕ ಮುಂದಾಗಿದೆ.
ಬರಲಿದೆ ಮೂರು ತೊಟ್ಟಿಲು: ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಈಗಾಗಲೇ ಮಮತೆಯ ತೊಟ್ಟಿಲು ಇರಿಸಲಾಗಿದ್ದರೂ ಅವುಗಳ ಸಂಖ್ಯೆ ಹೆಚ್ಚಿಸಿ ಶಿಶುಗಳ ರಕ್ಷಣೆ ಮಾಡಲು ಜಿಲ್ಲಾಡಳಿತ ಇನ್ನೂ ಮೂರು ಕಡೆ ತೊಟ್ಟಿಲು ಇರಿಸಲು ಮುಂದಾಗಿದೆ.
ಗಂಗಾವತಿ ಬಸ್ ನಿಲ್ದಾಣ, ಸರ್ಕಾರಿ ತಾಲ್ಲೂಕು ಆಸ್ಪತ್ರೆ ಮತ್ತು ದೇವಸ್ಥಾನದ ಆವರಣದಲ್ಲಿ ಇವುಗಳನ್ನು ಇರಿಸಲು ತೀರ್ಮಾನಿಸಿದೆ. ಪ್ರಸ್ತುತ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಮೂರು ಸ್ಥಳಗಳಲ್ಲಿ ತೊಟ್ಟಿಲು ಇರಿಸಲಾಗುತ್ತದೆ.
‘ಮಮತೆಯ ತೊಟ್ಟಿಲಿನಲ್ಲಿ ಸಿಗುವ ನವಜಾತ ಶಿಶುಗಳನ್ನು ಮೊದಲು ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಬಳಿಕ ಅವರ ಪೋಷಕರ ಹುಡಕಾಟಕ್ಕೆ ಕ್ರಮ ವಹಿಸಲಾಗುತ್ತದೆ. ಪೋಷಕರು ಸಿಕ್ಕರೆ ಅವರ ಸುಪರ್ದಿಗೆ ವಹಿಸಲಾಗುವುದು. ಒಂದು ವೇಳೆ ಸಿಗದಿದ್ದರೆ ನಮ್ಮ ಸುಪರ್ದಿಯಲ್ಲಿಯೇ ಬೆಳೆಸಿ ಆರೈಕೆ ಮಾಡಿ ಭವಿಷ್ಯ ರೂಪಿಸಲಾಗುತ್ತದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ತಿಳಿಸಿದರು.
‘ನವಜಾತ ಶಿಶುಗಳು ಸಿಗುವ ಪ್ರಮಾಣ ಕಡಿಮೆಯಿದೆ. ಮಕ್ಕಳಾಗದವರು ಕಂದಮ್ಮಗಳನ್ನು ಕಾನೂನು ಪ್ರಕಾರ ದತ್ತು ಪಡೆಯಲು ಸಾಕಷ್ಟು ಸಂಖ್ಯೆಯಲ್ಲಿ ಕಾಯುತ್ತಿದ್ದಾರೆ. ಹೀಗಾಗಿ ತಾಯಂದಿರು ತಮಗೆ ಬೇಡವಾದ ಮಗುವನ್ನು ಎಲ್ಲೆಂದರಲ್ಲಿ ಬೀಸಾಡದೆ ಮಮತೆಯ ತೊಟ್ಟಿಲಿಗೆ ಹಾಕಬೇಕು’ ಎಂದು ಅವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.