ಕೊಪ್ಪಳ: ‘ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದವರು ಜನರ ಪ್ರಾಣ ಹೋದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಪರಿಹಾರ ಕೊಡುತ್ತೇವೆ ಎಂದು ಲಿಖಿತ ರೂಪದಲ್ಲಿ ಬರೆದುಕೊಟ್ಟವರು ಇಂದಿಗೂ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಧ್ವನಿ ಗಟ್ಟಿಯಿಲ್ಲದ ಅಸಹಾಯಕರಿಗೆ ಇದೇ ಪರಿಸ್ಥಿತಿ ಬಿಡಿ’
ಎರಡು ವರ್ಷಗಳ ಹಿಂದೆ ಜಿಲ್ಲಾ ಕೇಂದ್ರದಲ್ಲಿ ಬೀಡಾಡಿ ದನ ಇರಿದು ಮೃತಪಟ್ಟ ರಮೀಜಾ ಬೇಗಂ ಅವರ ಪತಿ ಹುಸೇನ್ ಅವರ ನೋವಿನ ಮಾತುಗಳು ಇವು.
ಮಾತು ಮುಂದುವರಿಸಿದ ಅವರು ‘ನಾವು ದುಡಿದು ತಿನ್ನುವ ಜನ. ದುಡಿದ ದಿನವಷ್ಟೇ ಬದುಕಿನ ಬಂಡಿ ಸಾಗುತ್ತದೆ. ಪತ್ನಿ ಮೃತಪಟ್ಟು ಎರಡು ವರ್ಷಗಳು ಉರುಳಿದವು. ಪತ್ನಿ ಕಳೆದುಕೊಂಡ ದುಃಖ ಒಂದೆಡೆಯಾದರೆ ಹೋಟೆಲ್‌ನಲ್ಲಿ ಕೆಲಸ ಮಾಡಿ ಇಬ್ಬರು ಹೆಣ್ಣುಮಕ್ಕಳನ್ನು ಸಾಕಬೇಕಾದ ಜವಾಬ್ದಾರಿಯೂ ಇದೆ’ ಎಂದು ಅಳಲು ತೋಡಿಕೊಂಡರು.
ಬೀಡಾಡಿ ಜಾನುವಾರಗಳ ಹಾವಳಿಗೆ ನಗರದ ಜನ ಮೇಲಿಂದ ಮೇಲೆ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ. 2022ರ ನ.21ರಂದು ರಮೀಜಾ ಬೇಗಂ ಮೃತಪಟ್ಟಿದ್ದರು. ಹೋಟೆಲ್‌ನಲ್ಲಿ ಕೆಲಸ ಮುಗಿಸಿ ದಿನದ ಅನ್ನ ಸಂಪಾದಿಸಿಕೊಂಡು ಮನೆಗೆ ಹೋಗುವಾಗ ಇಲ್ಲಿನ ದೇವರಾಜ ಅರಸ ಕಾಲೊನಿಯಲ್ಲಿ ಘಟನೆ ನಡೆದಿತ್ತು. ಎರಡು ದನಗಳು ಗುದ್ದಾಡುತ್ತಿರುವಾಗ ಸಮೀಪದಲ್ಲಿ ಹೋಗುತ್ತಿದ್ದ ರಮೀಜಾ ಅವರಿಗೆ ಒಂದು ದನ ಬಲವಾಗಿ ಹೊಟ್ಟೆಗೆ ಇರಿದ ಕಾರಣ ದೇಹದ ಮಾಂಸವೇ ಹೊರಗಡೆ ಬಂದಿತ್ತು. ಈ ದುರ್ಘಟನೆ ಬಳಿಕ ಪ್ರತಿಭಟನೆ ನಡೆದು ಆಗಿನ ನಗರಸಭೆ ಪೌರಾಯುಕ್ತ ಎಚ್.ಎನ್. ಭಜಕ್ಕನವರ ಪರಿಹಾರ ಕೊಡಿಸುವುದಾಗಿ ತಿಳಿಸಿದರು.
ನಗರಸಭೆ ಸದಸ್ಯರ ಸಭೆ ನಡೆಸಿ ಪರಿಹಾರ ಕೊಡುವ ಬಗ್ಗೆಯೂ ತೀರ್ಮಾನಿಸಿ ಅವರಿಗೆ ಲಿಖಿತ ರೂಪದಲ್ಲಿ ಭರವಸೆಯನ್ನೂ ನೀಡಿದ್ದರು. ಆದರೆ ಇದುವರೆಗೂ ಪರಿಹಾರ ಲಭಿಸಿಲ್ಲ. ಸಂಕಷ್ಟದಲ್ಲಿರುವ ಬಡ ಕುಟುಂಬಕ್ಕೆ ಆಶ್ವಾಸನೆಯ ಮಾತುಗಳಷ್ಟೇ ಸಿಕ್ಕವು.
ಇದು ರಮೀಜಾ ಬೇಗಂ ಅವರ ಸಾವಿನ ಉದಾಹರಣೆಯಷ್ಟೇ. ಬೀಡಾಡಿ ದನಗಳ ಹಾವಳಿಗೆ ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ಅನೇಕ ಜನ ಇದ್ದಾರೆ. ನಗರಸಭೆ ಮುಂಭಾಗ, ಹೆಚ್ಚು ಜನಸಂದಣಿ ಇರುವ ಕೇಂದ್ರೀಯ ಬಸ್ ನಿಲ್ದಾಣ, ಜವಾಹರ ರಸ್ತೆಯ ಮಾರುಕಟ್ಟೆ ಪ್ರದೇಶ, ರೈಲು ನಿಲ್ದಾಣ, ಲೇಬರ್ ಸರ್ಕಲ್, ಗವಿಸಿದ್ದೇಶ್ವರ ಮಠಕ್ಕೆ ಹೋಗುವ ರಸ್ತೆ, ಗಡಿಯಾರ ಕಂಬದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿ ವಾಹನಗಳ ಸವಾರರನ್ನು, ಪಾದಚಾರಿಗಳನ್ನು ದನಗಳು ಬೀಳಿಸಿದ, ಗಾಯಗೊಳಿಸಿದ ಉದಾಹರಣೆಗಳು ಇವೆ. ಜವಾಹರ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಕೊಳೆತ ಅಥವಾ ಬಳಕೆಗೆ ಬಾರದ ತರಕಾರಿ ಅಲ್ಲಿಯೇ ಚೆಲ್ಲಿ ಹೋಗುತ್ತಾರೆ. ಅದನ್ನು ತಿನ್ನಲು ಬರುವ ಬೀಡಾಡಿ ದನಗಳು ಜನರಿಗೆ ಅಪಾಯ ಮಾಡುತ್ತಿವೆ.
ಜಿಲ್ಲಾ ಕೇಂದ್ರ ನಿತ್ಯವೂ ಬೆಳೆಯುತ್ತಿದೆ. ಸುಗಮ ಸಂಚಾರಕ್ಕೆ ಪೊಲೀಸರು ಸಿಗ್ನಲ್‌ಗಳನ್ನು ಅಳವಡಿಸುತ್ತಿದ್ದಾರೆ. ಬಹುತೇಕರು ಸಂಚಾರ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಕೆಲವರು ಸಿಗ್ನಲ್ ಸಲುವಾಗಿ ಕಾಯುತ್ತಿದ್ದರೆ ಇನ್ನು ಪ್ರಮುಖ ರಸ್ತೆಗಳಲ್ಲಿ ‘ರಸ್ತೆಯ ರಾಜ’ರಂತೆ ಓಡಾಡುವ ಜಾನುವಾರುಗಳನ್ನು ಜನ ಕಾಯಬೇಕಾಗಿದೆ. ಇವು ವಾಹನಗಳ ಸವಾರರಿಗೆ ಫಜೀತಿ ತಂದೊಡ್ಡುತ್ತಿವೆ. ಇನ್ನು ಬಡಾವಣೆಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓಡಾಡುವ ಸವಾರರೇ ಆತಂಕಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ 2018ರಿಂದ 2020ರ ಅವಧಿಯಲ್ಲಿ ಒಟ್ಟು73 ದನಗಳನ್ನು ಹಿಡಿಯಲಾಗಿದ್ದು 30 ದನಗಳನ್ನು ವಾಪಸ್ ಬಿಡಲಾಗಿದೆ. 24 ದನಗಳು ಮೃತಪಟ್ಟಿವೆ. 2020ರಿಂದ 2022ರ ತನಕ ಬೀಡಾಡಿ ದನಗಳಿಗೆ ಮೂಗುದಾರ ಹಾಕುವ ಕಾರ್ಯಾಚರಣೆಯೇ ನಡೆದಿರಲಿಲ್ಲ. ನಿರಂತರ ಕಾರ್ಯಾಚರಣೆ ನಡೆಸಬೇಕು ಹಾಗೂ ಜಾನುವಾರುಗಳು ಜನರಿಗೆ ತಂದೊಡ್ಡುವ ಅಪಾಯಗಳನ್ನು ತಡೆಯುವ ನಿಟ್ಟಿನಲ್ಲಿ ಕೆಲಸವಾಗಬೇಕಾದ ಅಗತ್ಯವಿದೆ ಎನ್ನುವುದು ಸಾರ್ವಜನಿಕರ ಬೇಡಿಕೆ.
ಕೊಪ್ಪಳ ನಗರದಲ್ಲಿ ಬೀಡಾಡಿ ಜಾನುವಾರುಗಳ ನಿಯಂತ್ರಣಕ್ಕೆ ಈಗಾಗಲೇ ಕ್ರಮ ವಹಿಸಲಾಗಿದೆ. ಎರಡು ವರ್ಷಗಳ ಹಿಂದೆ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಪೌರಾಯುಕ್ತರ ಜೊತೆ ಚರ್ಚಿಸುವೆಅಮ್ಜದ್ ಪಟೇಲ್ ಕೊಪ್ಪಳ ನಗರಸಭೆ ಅಧ್ಯಕ್ಷ
ಪೌರಾಯುಕ್ತರು ನಗರದಲ್ಲಿ ನಿರಂತರವಾಗಿ ಸುತ್ತಾಡಬೇಕು. ಜಿಲ್ಲಾಧಿಕಾರಿ ಜಾನುವಾರಗಳ ಉಪಟಳ ತಡೆಯಲು ನಗರ ಪ್ರದಕ್ಷಣೆ ಮಾಡಬೇಕು. ಜಾನುವಾರು ನಿಯಂತ್ರಣಕ್ಕೆ ನಗರಸಭೆ ನೇರವಾಗಿ ಅವುಗಳ ಮಾಲೀಕರಿಗೆ ನೋಟಿಸ್ ನೀಡಬೇಕುಅಬ್ದುಲ್ ಗಫಾರ್ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.