ADVERTISEMENT

ಅಳವಂಡಿ | ಶಾಲಾ ಕಾಲೇಜಿಗೆ ಕಾಲ್ನಡಿಗೆ: ತಪ್ಪದ ಗೋಳು

ಜುನಸಾಬ ವಡ್ಡಟ್ಟಿ
Published 14 ನವೆಂಬರ್ 2024, 6:18 IST
Last Updated 14 ನವೆಂಬರ್ 2024, 6:18 IST
ಅಳವಂಡಿ ಸಮೀಪದ ಕಾತರಕಿ ಗುಡ್ಲಾನೂರ ಗ್ರಾಮದಿಂದ ಬೇಳೂರು ಗ್ರಾಮಕ್ಕೆ ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿರುವುದು
ಅಳವಂಡಿ ಸಮೀಪದ ಕಾತರಕಿ ಗುಡ್ಲಾನೂರ ಗ್ರಾಮದಿಂದ ಬೇಳೂರು ಗ್ರಾಮಕ್ಕೆ ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿರುವುದು   

ಅಳವಂಡಿ: ಸಮೀಪದ ಬೇಳೂರು ಗ್ರಾಮದ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾತರಕಿ ಗುಡ್ಲಾನೂರ ಗ್ರಾಮದ ಶಾಲಾ ಕಾಲೇಜುಗಳಿಗೆ ತೆರಳಲು ಸರಿಯಾದ ಸಮಯಕ್ಕೆ ಸಾರಿಗೆ ಬಸ್ ಸೌಕರ್ಯ ಇಲ್ಲದ ಪರಿಣಾಮ ನಿತ್ಯ ಕಾಲ್ನಡಿಗೆಯ ಮುಖಾಂತರ ಹೋಗುವ ಪರಿಸ್ಥಿತಿ ಎದುರಾಗಿದೆ.

ಕಾತರಕಿ ಗುಡ್ಲಾನೂರಸರ್ಕಾರಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಬೇಳೂರು ಹಾಗೂ ಡಂಬ್ರಳ್ಳಿ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ದಾಖಲಾಗಿದ್ದು, ನಿಗದಿತ ಸಮಯಕ್ಕೆ ಬಸ್ ಸಂಚಾರ ಇಲ್ಲದ ಕಾರಣ ನಿತ್ಯ 5 ರಿಂದ 6 ಕಿ.ಮೀ ನಡೆದುಕೊಂಡೇ ಶಾಲಾ ಕಾಲೇಜಿಗೆ ತೆರಳುತ್ತಿದ್ದಾರೆ.

‘ನಮ್ಮ ಊರಿಗೆ ಬೆಳಿಗ್ಗೆ 10 ಗಂಟೆಗೆ ಸಾರಿಗೆ ಸಂಸ್ಥೆಯ ಬಸ್ ಬರುತ್ತದೆ. ಆದರೆ ಶಾಲೆಗೆ ಹೋಗುವಷ್ಟರಲ್ಲಿ ಒಂದು ತರಗತಿಯ ಅವಧಿ ಮುಗಿದಿರುತ್ತದೆ. ಹಾಗಾಗಿ ಬೆಳಿಗ್ಗೆ ನಾವು ಬೇಗ ನಡೆದುಕೊಂಡು ಹೋಗುತ್ತೇವೆ. ಮತ್ತೆ ಸಂಜೆ ಶಾಲೆ ಬಿಡುವ ವೇಳೆಗೆ ಬಸ್‌ ಇಲ್ಲದ ಕಾರಣ ಮನೆಗೆ ಸ್ನೇಹಿತರ ಜತೆಗೂಡಿ ನಡೆದುಕೊಂಡು ಬರುತ್ತೇವೆ’ ಎಂದು ಪ್ರೌಢ ಶಾಲಾ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ADVERTISEMENT

ಬಸ್‌ ಸೌಕರ್ಯ ಇಲ್ಲದಿದ್ದರಿಂದ ಶಾಲಾ ಕಾಲೇಜಿನ ಬಾಲಕರು ಬೈಕ್‌ಗಳಿಗೆ ಅಡ್ಡಹಾಕಿ  ನಿಲ್ಲಿಸುವ ಬೈಕ್‌ಗಳ ಮೂಲಕ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಒಮ್ಮೊಮ್ಮೆ ಟ್ರಾಕ್ಟರ್ ಹಾಗೂ ಖಾಸಗಿ ವಾಹನಗಳ ಮೂಲಕ ತೆರಳುತ್ತಾರೆ ಇದರಿಂದ ವಿದ್ಯಾರ್ಥಿಗಳ ಜೀವಕ್ಕೆ ಅಪಾಯವಿದೆ ಎಂದು ಹೇಳಿದರು.

ಮಳೆ ಬಂದ ಸಂದರ್ಭದಲ್ಲಿ ಶಾಲಾ ಬ್ಯಾಗ್ ಹಾಗೂ ಪುಸ್ತಕ, ಬಟ್ಟೆಗಳು ಒದ್ದೆಯಾಗುತ್ತವೆ. ರಸ್ತೆಯ ಮಧ್ಯೆ ಹಿಳ್ಳ ಇದ್ದು, ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಇದರಿಂದ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ. ಒಮ್ಮೊಮ್ಮೆ ಆರೋಗ್ಯದ ಸಮಸ್ಯೆಗಳು ಕೂಡ ಉಂಟಾಗಿವೆ ಎಂದು ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡರು.

‘ಬೆಳಿಗ್ಗೆ ಹಾಗೂ ಸಾಯಂಕಾಲ ಸರಿಯಾಗಿ ಶಾಲಾ ಕಾಲೇಜು ಸಮಯಕ್ಕೆ ಬಸ್ ಸಂಚಾರ ಪ್ರಾರಂಭಿಸಿದರೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶಾಲಾ ಸಮಯಕ್ಕೆ ತಕ್ಕಂತೆ ಬಸ್ ಪ್ರಾರಂಭಿಸಬೇಕು’ ಎಂದು ಗ್ರಾಮಸ್ಥ ಮಲ್ಲಣ್ಣ ಅಂಗಡಿ‌ ಒತ್ತಾಯಿಸಿದರು.

Quote - ಕಾತರಕಿ ಗುಡ್ಲಾನೂರ - ಬೇಳೂರು ನಡುವೆ ಶಾಲಾ ಸಮಯಕ್ಕೆ ಸರಿಯಾಗಿ ಬಸ್ ಆರಂಭಿಸಲು ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲಾಗುವುದು. ಬಸವರಾಜ ಬಟ್ಟೂರ ಡಿಪೊ ಮ್ಯಾನೇಜರ್ ಕೆಕೆಆರ್‌ಟಿಸಿ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.