ADVERTISEMENT

ಪಂಪಾಸರೋವರದಲ್ಲಿ ಕುಟೀರಕ್ಕೆ ಬೆಂಕಿ: ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 15:42 IST
Last Updated 28 ಡಿಸೆಂಬರ್ 2023, 15:42 IST
ಕೊಪ್ಪಳದಲ್ಲಿ ಗುರುವಾರ ಕೆಆರ್‌ಪಿಪಿ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಅವರಿಗೆ ಮನವಿ ಸಲ್ಲಿಸಿದರು
ಕೊಪ್ಪಳದಲ್ಲಿ ಗುರುವಾರ ಕೆಆರ್‌ಪಿಪಿ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಅವರಿಗೆ ಮನವಿ ಸಲ್ಲಿಸಿದರು   

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಪಂಪಾಸರೋವರದಲ್ಲಿ ಸಾರ್ವಜನಿಕ ಸಭೆಗಳಿಗಾಗಿ ಬಳಸಲಾಗುತ್ತಿದ್ದ ಕುಟೀರ ಬೆಂಕಿಗೆ ಆಹುತಿಯಾಗಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಮುಖಂಡರು ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಅವರಿಗೆ ಮನವಿ ಸಲ್ಲಿಸಿದರು.

‘ಅಂಜನಾದ್ರಿಯಲ್ಲಿ ಇತ್ತೀಚೆಗೆ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ಯಶಸ್ಸಿಯಾಗಿ ನಡೆಸಲಾಗಿದೆ. ಇದರಿಂದ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಅವರ ಉತ್ತಮ ಹೆಸರು ಬಂದಿದೆ. ಇದನ್ನು ಸಹಿಸಲಾಗದೇ ದುಷ್ಕರ್ಮಿಗಳು ಕುಟೀರಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು.

ಮನವಿ ಸಲ್ಲಿಕೆಗೂ ಮೊದಲು ಪತ್ರಿಕಾಗೋಷ್ಠಿ ಮಾತನಾಡಿದ ಪಕ್ಷದ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಬಾದವಾಡಗಿ ‘ಅಂಜನಾದ್ರಿ ಭಾಗದ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ರೆಡ್ಡಿ ಅವರು ಅಲ್ಲಿನ ಕುಟೀರದಲ್ಲಿ ಸಭೆ ನಡೆಸುತ್ತಿದ್ದರು. ಇದನ್ನು ಸಹಿಸದೇ ಬೆಂಕಿ ಹಚ್ಚಲಾಗಿದೆ’ ಎಂದು ಆರೋಪಿಸಿದರು.

ADVERTISEMENT

ವಿಶ್ವ ಪರಂಪರೆ ತಾಣದಲ್ಲಿರುವ ಪಂಪಾ ಸರೋವರದಲ್ಲಿ ಕುಟೀರ ನಿರ್ಮಿಸಿದ್ದು ಅಕ್ರಮವಲ್ಲವೇ ಎನ್ನುವ ಪ್ರಶ್ನೆಗೆ ‘ಮಾಜಿ ಸಚಿವ ಬಿ. ಶ್ರೀರಾಮುಲು ಅದನ್ನು ನಿರ್ಮಿಸಿದ್ದರು. ಈಗ ರೆಡ್ಡಿ ಅವರು ಬಳಕೆ ಮಾಡುತ್ತಿದ್ದರು ಅಷ್ಟೇ’ ಎಂದರು.

ಮನವಿ ಸಲ್ಲಿಕೆ ವೇಳೆ ಚನ್ನವೀರಗೌಡ ಕೋರಿ, ಜಿಲಾನ್ ಪಾಷಾ, ದುರ್ಗಪ್ಪ ದಳಪತಿ, ಗಂಗಾಧರ ಸ್ವಾಮಿ, ವೆಂಕಟೇಶ ಇಳಿಗೇರ, ರಾಮಣ್ಣ ನಾಯ್ಕ, ರಾಜೇಶ್ವರಿ, ಮಾಲಾ ನಾಯ್ಕ, ಈರಮ್ಮ , ಸುಮಂಗಲಮ್ಮ, ವಿಜಯಲಕ್ಷ್ಮಿ, ಶರಣ ಓಜನಹಳ್ಳಿ, ಪಂಪಯ್ಯ ಸ್ವಾಮಿ ಕಿನ್ನಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ರೆಡ್ಡಿ ಅವರಿಗೆ ಕ್ಷೇತ್ರದಲ್ಲಿ ಬಿಜೆಪಿ ಪ್ರಮುಖ ಎದುರಾಳಿ. ಆ ಪಕ್ಷದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಹನುಮಮಾಲಾ ವಿಸರ್ಜನೆ ವೇಳೆ ಸಿದ್ಧತೆ ಬಗ್ಗೆ ಅಪಸ್ವರ ಎತ್ತಿದ್ದರು. ವಿಸರ್ಜನೆ ಚೆನ್ನಾಗಿ ಅಚ್ಚುಕಟ್ಟಾಗಿದ್ದು ಸಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ
ಸಂಗಮೇಶ ಬಾದವಾಡಗಿ ಕೆಆರ್‌ಪಿಪಿ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.