ತಾವರಗೇರಾ: ರೈತರು ಮಣ್ಣೆತ್ತಿನ ಅಮಾವಾಸ್ಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.
ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಪಾತ್ರವಹಿಸು ರೈತನ ಮಿತ್ರ ಎತ್ತುಗಳನ್ನು ಮಣ್ಣಿನಲ್ಲಿ ತಯಾರಿಸಿ ಪೂಜೆ ಮಾಡಲಾಗುತ್ತದೆ. ಕುಂಬಾರ ಮನೆಯಲ್ಲಿ ತಯಾರಿಸಿರುವ ಜೋಡೆತ್ತಿಗೆ ₹50 ರಿಂದ ₹100 ವರೆಗೆ ಮಾರಾಟ ಮಾಡಲಾಗುತ್ತದೆ. ಅಮಾವಾಸ್ಯೆ ದಿನ ಮನೆಯಲ್ಲಿ ಪೂಜೆ ಸಲ್ಲಿಸಿ ಇಡೀ ವರ್ಷ ಮಳೆ, ಬೆಳೆ ಉತ್ತಮವಾಗಿರಲಿ ಎಂದು ಪೂಜಿಸುತ್ತಾರೆ.
ತಾವರಗೇರಾ, ಮೆಣೇದಾಳ ಸೇರಿದಂತೆ ಕುಂಬಾರ ಕುಟುಂಬಗಳು ಕಸಬು ಮಣ್ಣನ ಎತ್ತು ತಯಾರಿಸಿ ಮಾರಾಟ ಮಾಡುವ ಸಂಪ್ರದಾಯ ಇದೆ.
ಅಮಾವಾಸ್ಯೆಯ ಮರುದಿನ ಮನೆಯಲ್ಲಿ ಪೂಜೆ ಮಾಡಿರುವ ಎತ್ತುಗಳನ್ನು ಮಕ್ಕಳು ಹಿಡಿದುಕೊಂಡು ಓಣಿಯಲ್ಲಿ ಪ್ರತಿ ಮನೆಗಳಿಗೆ ಹೋಗಿ, ‘ಎಂಟೆತ್ತಿನಲ್ಲಿ ಒಂದು ಕುಂಟೆತ್ತು ಬಂದಿದೆ’ ಎಂದು ಬಾಗಲಲ್ಲಿ ನಿಂತು ಹೇಳುತ್ತಾರೆ. ಮನೆಯವರು ಸಜ್ಜಿ, ಜೋಳ, ಅಥವಾ ಅಲ್ಪ ಸ್ವಲ್ಪ ದುಡ್ಡು ನೀಡುವ ಪದ್ಧತಿ ಇದೆ.
ಈ ಕುರಿತು ಮಾತನಾಡಿದ ಮೆಣೇದಾಳ ಗ್ರಾಮದ ಶಂಕ್ರಪ್ಪ ಕುಂಬಾರ, ‘ಈಚೆಗೆ ಮಣ್ಣಿನ ಎತ್ತುಗಳನ್ನು ತಯಾರಿಸುವದು ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಹ ಕೃಷಿ ಮಾಡುವ ಜನರು ಕಡಿಮೆ. ಈಗಿನ ಜನರು ಇಂಥ ಆಚರಣೆ ಮಾಡಲು ಹಿಂಜರಿಯುತ್ತಾರೆ. ಆದರೆ ನಮ್ಮ ಕುಂಬಾರ ಸುಮುದಾಯ ಮಾತ್ರ ಎತ್ತುಗಳನ್ನು ತಯಾರಿಸಿ ಮಾರಾಟ ಮಾಡುವುದನ್ನು ಬಿಟ್ಟಿಲ್ಲ. ನಮ್ಮ ಹಿರಿಯರು ಈ ಕೆಲಸದಿಂದಲೇ ಜೀವನ ಸಾಗಿಸಿದ್ದು ನಾವು ಸಹ ಮಣ್ಣಿನ ಕುಡಿಕೆ, ಮಣ್ಣಿನ ಎತ್ತು ತಯಾರಿಸುವದು ಮುಂದುವರಿಸಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.