ADVERTISEMENT

ಶಿಕ್ಷಕರ ವರ್ಗಾವಣೆ; ಲೋಪ ಸರಿಪಡಿಸಿ: ಅಂಗವಿಕಲ ನೌಕರರ ಸಂಘ ರಾಜ್ಯ ಘಟಕದ ಮನವಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 6:48 IST
Last Updated 28 ನವೆಂಬರ್ 2021, 6:48 IST
ಶಿಕ್ಷಕರ ವರ್ಗಾವಣೆಯಲ್ಲಿ ಅಂಗವಿಕಲ ಶಿಕ್ಷಕರಿಗೆ ಸಂಬಂಧಿಸಿದಂತೆ ಆಗಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಸಚಿವ ಹಾಲಪ್ಪ ಆಚಾರಗೆ ಅಂಗವಿಕಲ ನೌಕರರ ಸಂಘದ ರಾಜ್ಯ ಅಧ್ಯಕ್ಷ ಬೀರಪ್ಪ ಅಂಡಗಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು
ಶಿಕ್ಷಕರ ವರ್ಗಾವಣೆಯಲ್ಲಿ ಅಂಗವಿಕಲ ಶಿಕ್ಷಕರಿಗೆ ಸಂಬಂಧಿಸಿದಂತೆ ಆಗಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಸಚಿವ ಹಾಲಪ್ಪ ಆಚಾರಗೆ ಅಂಗವಿಕಲ ನೌಕರರ ಸಂಘದ ರಾಜ್ಯ ಅಧ್ಯಕ್ಷ ಬೀರಪ್ಪ ಅಂಡಗಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು   

ಕೊಪ್ಪಳ: ಶಿಕ್ಷಕರ ವರ್ಗಾವಣೆಯಲ್ಲಿನ ಅಂಗವಿಕಲಶಿಕ್ಷಕರಿಗೆ ಸಂಬಂಧಿಸಿದಂತೆ ಇರುವ ಲೋಪದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಮಹಿಳಾ, ಮಕ್ಕಳ ಹಾಗೂ ಅಂಗವಿಕಲ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ ಅವರಿಗೆ ಅಂಗವಿಕಲನೌಕರರ ಸಂಘ ರಾಜ್ಯ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.

ಸಂಘದ ರಾಜ್ಯ ಅಧ್ಯಕ್ಷ ಬೀರಪ್ಪ ಅಂಡಗಿ ಮಾತನಾಡಿ, ಶಿಕ್ಷಕರ ವರ್ಗಾವಣೆಯಲ್ಲಿಅಂಗವಿಕಲ ಶಿಕ್ಷಕರಿಗೆ ಸಂಬಂಧಿಸಿದಂತೆ ಈಗಾಗಲೇಕೇಂದ್ರ ಸರ್ಕಾರ ನೀಡಿರುವ ಅಂಗವಿಕಲರವಿಶಿಷ್ಟ ಗುರುತಿನ (ಯು.ಡಿ.ಐ.ಡಿ) ಚೀಟಿಯು ಅಂಗವಿಕಲರಿಗೆ ಸಂಬಂಧಿಸಿದಂತೆ ಶಾಶ್ವತವಾದ ದಾಖಲೆಯಾಗಿದೆ. ಅಂಗವಿಕಲರು ತಮ್ಮ ವಿವಿಧ ಸೌಲಭ್ಯ ಪಡೆಯಲು ಅವಕಾಶ ಇರುವಂತ ಯು.ಡಿ.ಐ.ಡಿ.ಕಾರ್ಡ್‌ ಮಾತ್ರ ಶಿಕ್ಷಕರ ವರ್ಗಾವಣೆಯಲ್ಲಿ ಪರಿಗಣಿಸುತ್ತಿಲ್ಲ ಎಂದು ತಿಳಿಸಿದರು.

2020ರ ಆ.1 ರ ನಂತರ ಪಡೆದ ತ್ರಿಸದಸ್ಯ ವೈದೈಕೀಯ ಪ್ರಮಾಣಪತ್ರವನ್ನು ತರುವಂತೆ ವರ್ಗಾವಣೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು. ಆದರೆ ಕೊರೊನಾ ಎಂಬ ಮಹಾಮಾರಿಯ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗಳ ಆ ಸಮಯದಲ್ಲಿ ಯಾವುದೇ ಪ್ರಮಾಣಪತ್ರವನ್ನು ಆಸ್ಪತ್ರೆಯ ಸಿಬ್ಬಂದಿ ನೀಡಿಲ್ಲ. ಯು.ಡಿ.ಐ.ಡಿ.ಕಾರ್ಡ್ ಮಾನ್ಯ ಮಾಡಿ ವರ್ಗಾವಣೆಯಲ್ಲಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ತ್ರಿಸದಸ್ಯರ ಪ್ರಮಾಣ ಪತ್ರವನ್ನು ನೀಡದಅಂಗವಿಕಲ ಶಿಕ್ಷಕರನ್ನು ಸಾಮಾನ್ಯ ಶಿಕ್ಷಕರೆಂದು ಪರಿಗಣಿಸಿದ್ದಾರೆ. ನೇಮಕಾತಿಯ ಪೂರ್ವದಲ್ಲಿ ಅವರ ಅಂಗವಿಕಲತೆಗೆ ಸಂಬಧಿಸಿದಂತೆ ವೈದ್ಯಕೀಯ ಪ್ರಮಾಣ ಪತ್ರದ ನೈಜ ಪರಿಶೀಲನೆಯ ನಂತರವೇ ನೇಮಕಾತಿ ಆದೇಶ ನೀಡುವುದರೊಂದಿಗೆ ಅವರಿಗೆ ನೀಡಬೇಕಾದ ಎಲ್ಲಸೌಲಭ್ಯ ನೀಡಿದಾಗ್ಯೂ ಕೂಡಾ ಕೇವಲ ಶಿಕ್ಷಕರ ವರ್ಗಾವಣೆಯಲ್ಲಿ ಮಾತ್ರ ಪದೇ ಪದೇ ಅಂಗವಿಕಲತೆಗೆ ಸಂಬಂಧಿಸಿದಂತೆ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂಬುವುದು ಅವೈಜ್ಞಾನಿಕ ನಿಯಮವಾಗಿದೆ ಎಂದು ದೂರಿದರು.

ಇದರಿಂದ ರಾಜ್ಯದ ಅನೇಕ ಶಿಕ್ಷಕರು ವರ್ಗಾವಣೆಯ ಸೌಲಭ್ಯದಿಂದ ವಂಚಿತರಾಗುತ್ತಾರೆ. ಕೂಡಲೇ ಮಾನ್ಯ ಶಿಕ್ಷಣ ಸಚಿವರ ಬಳಿಯಲ್ಲಿ ಮಾತನಾಡಿ, ಪದೇ, ಪದೇ ವೈದ್ಯಕೀಯ ಪ್ರಮಾಣಪತ್ರವನ್ನು ಕೇಳುವ ಪದ್ದತಿಯನ್ನು ಕೈ ಬೀಡುವುದರ ಜೊತೆಗೆ ಯು.ಡಿ.ಐ.ಡಿ.ಕಾರ್ಡ್‌ ಮಾನ್ಯ ಮಾಡಿ ವರ್ಗಾವಣೆಯಲ್ಲಿ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು. ಅಲ್ಲದೇ ಅಂಗವಿಕಲರ ಹಲವು ಸಮಸ್ಯೆಗಳ ಕುರಿತು ವಿವರಿಸಿದರು.

ಮನವಿ ಸ್ವೀಕರಿಸಿದ ಬಳಿಕ ಸಚಿವ ಹಾಲಪ್ಪ ಆಚಾರ ಮಾತನಾಡಿ, ಶಿಕ್ಷಕರ ವರ್ಗಾವಣೆಯಲ್ಲಿಅಂಗವಿಕಲಶಿಕ್ಷಕರಿಗೆ ಸಂಬಂಧಿಸಿದಂತೆ ಆಗಿರುವ ಲೋಪದೋಷಗಳ ಕುರಿತು ಶಿಕ್ಷಣ ಸಚಿವರ ಬಳಿ ಮಾತನಾಡುವುದರ ಜೊತೆಗೆ ಆಗಿರುವ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವುದರ ಜೊತೆಗೆ ಅಂಗವಿಕಲ ಶಿಕ್ಷಕರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಸಂಘದ ರಾಜ್ಯ ಖಜಾಂಚಿ ಮಂಜುನಾಥ ಹಿಂಡಿಹುಳಿ, ತಾಲ್ಲೂಕು ಅಧ್ಯಕ್ಷ ಅಂದಪ್ಪ ಇದ್ಲಿ, ದೇವಪ್ಪ ಒಂಟಿಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.