ADVERTISEMENT

ಕೊಪ್ಪಳ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಾದ ಶಿಕ್ಷಕರು!

ಪ್ರಮೋದ
Published 16 ಮೇ 2024, 5:49 IST
Last Updated 16 ಮೇ 2024, 5:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೊಪ್ಪಳ: ಈ ಬಾರಿಯ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ವಿಶೇಷ ತರಗತಿಗಳನ್ನು ಬುಧವಾರ ಆರಂಭಿಸಿದೆ. ಆದರೆ ಮೊದಲ ದಿನ ಶಿಕ್ಷಕರೇ ವಿದ್ಯಾರ್ಥಿಗಳ ಹಾದಿ ಕಾಯುವಂತಾಯಿತು!

ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆ 16ನೇ ಸ್ಥಾನ ಗಳಿಸಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ಈ ವರ್ಷ ರಾಜ್ಯದ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 32ನೇ ಸ್ಥಾನಕ್ಕೆ ಕುಸಿದ ಕಂಡಿದೆ. ರಾಜ್ಯದ ಒಟ್ಟಾರೆ ಫಲಿತಾಂಶವೂ ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಆದ್ದರಿಂದ ಶಿಕ್ಷಣ ಇಲಾಖೆಯೇ ರಾಜ್ಯದಾದ್ಯಂತ ವಾರ್ಷಿಕ ಪರೀಕ್ಷೆ 1ರಲ್ಲಿ ಅನುತ್ತೀರ್ಣರಾದ ಮತ್ತು ಶೇ. 60ಕ್ಕಿಂತಲೂ ಕಡಿಮೆ ಫಲಿತಾಂಶ ಪಡೆದ ಮಕ್ಕಳಿಗೆ ವಿಶೇಷ ತರಗತಿಗಳನ್ನು ಆರಂಭಿಸಿದೆ. ತಮ್ಮ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳ ಇದರ ಪ್ರಯೋಜನ ಪಡೆದು ಮೇ 7ರಿಂದ ನಡೆಯುವ ಪರೀಕ್ಷೆ–2ಕ್ಕೆ ಸಿದ್ಧರಾಗಬೇಕಾಗಿತ್ತು. ಅವರೇ ಮುತುವರ್ಜಿ ವಹಿಸಿ ವಿದ್ಯಾಭ್ಯಾಸ ಮಾಡಬೇಕಿತ್ತು.

ADVERTISEMENT

ಆದರೆ ಈಗ ಶಿಕ್ಷಕರು ತಮ್ಮ ರಜೆ ಅವಧಿ ಕಡಿತಗೊಳಿಸಿ ಶಾಲೆಗೆ ಮರಳಿದರೂ ವಿದ್ಯಾರ್ಥಿಗಳು ಹಾಜರಾತಿ ಮಾತ್ರ ಕಡಿಮೆಯಿತ್ತು. ಇಲಾಖೆಯ ಪ್ರಕಾರ ಶೇ 25ರಷ್ಟು ವಿದ್ಯಾರ್ಥಿಗಳು ಮಾತ್ರ ತರಗತಿಗೆ ಬಂದಿದ್ದರು. ಆದರೆ, ವಾಸ್ತವದಲ್ಲಿ ಇದಕ್ಕಿಂತಲೂ ಪ್ರಮಾಣ ಕಡಿಮೆಯಿತ್ತು ಎಂದು ಮೂಲಗಳು ತಿಳಿಸಿವೆ.

ಈ ವರ್ಷ ಒಟ್ಟು 22,713 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 14,539 ವಿದ್ಯಾರ್ಥಿಗಳಷ್ಟೇ ಉತ್ತೀರ್ಣರಾಗಿದ್ದಾರೆ. 8,174 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪರೀಕ್ಷೆ–2 ಎದುರಿಸಲು ವಿದ್ಯಾರ್ಥಿಗಳಿಗೆ ವಿಶೇಷ ತಗತಿಗೆ ನೀಡಬೇಕು ಎಂದು ಇಲಾಖೆ ಸೂಚಿಸುತ್ತಿದ್ದಂತೆಯೇ ಆಯಾ ಶಾಲೆಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಫೋನ್‌ ಕರೆ ಮಾಡಿ ತಮ್ಮ ಮಕ್ಕಳನ್ನು ತರಗತಿಗೆ ಕಳುಹಿಸಬೇಕು ಎಂದು ತಿಳಿಸಿದ್ದಾರೆ. ವ್ಯಾಟ್ಸ್‌ ಆ್ಯಪ್‌ ಗ್ರೂಪ್ ರಚಿಸಿ ಮಾಹಿತಿಯನ್ನೂ ನೀಡುತ್ತಿದ್ದಾರೆ.

ಪೋಷಕರ ನಿರಾಸಕ್ತಿ: ಅನುತ್ತೀರ್ಣಗೊಂಡ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಶಿಕ್ಷಕರು ಕರೆ ಮಾಡುತ್ತಿದ್ದರೆ ಪೋಷಕರು ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವುದು ಗೊತ್ತಾಗಿದೆ. ಮಗ/ಮಗಳು ಊರಿಗೆ ಹೋಗಿದ್ದಾರೆ, ಕೆಲಸ ಮಾಡುತ್ತಿದ್ದಾರೆ, ಸಾಧ್ಯವಾದರೆ ಕಳುಹಿಸುತ್ತೇವೆ ಹೀಗೆ ಹಾರಿಕೆಗೆ ಉತ್ತರಗಳನ್ನು ನೀಡುತ್ತಿದ್ದಾರೆ. ಇನ್ನೂ ಕೆಲ ಪೋಷಕರಿಗೆ ತಮ್ಮ ಮಕ್ಕಳು ಎಷ್ಟು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ ಎನ್ನುವ ಮಾಹಿತಿಯೂ ಗೊತ್ತಿಲ್ಲದೆ ’ಫೇಲಾಗಿದ್ದಾರೆ ಎನ್ನುವುದಷ್ಟೇ ಗೊತ್ತು; ಎಷ್ಟು ವಿಷಯ ಎನ್ನುವುದು ತಿಳಿದಿಲ್ಲ’ ಎನ್ನುವ ಉತ್ತರ ನೀಡುತ್ತಿದ್ದಾರೆ.

ಈ ಕುರಿತು ಪ್ರಜಾವಾಣಿ ಎದುರು ಬೇಸರ ವ್ಯಕ್ತಪಡಿಸಿದ ಹೆಸರು ಹೇಳಲು ಬಯಸದ ಶಿಕ್ಷಕರೊಬ್ಬರು ’ಎಸ್‌ ಎಸ್‌ಎಲ್‌ಸಿ ಫಲಿತಾಂಶ ಕುಸಿತವಾಗಿದ್ದಕ್ಕೆ ನಮಗೂ ಬೇಸರವಾಗಿದೆ. ಈಗ ಇನ್ನೂ ಎರಡು ಪರೀಕ್ಷೆಗಳ ಅವಕಾಶ ಇದ್ದು, ಅನುತ್ತೀರ್ಣವಾದ ವಿದ್ಯಾರ್ಥಿಗಳ ಉತ್ತೀರ್ಣಕ್ಕೆ ಮತ್ತು ಶೇ. 60ಕ್ಕಿಂತಲೂ ಕಡಿಮೆ ಫಲಿತಾಂಶ ಪಡೆದ ಮಕ್ಕಳ ಅಂಕಗಳ ಸುಧಾರಣೆಗೆ ಅಗತ್ಯದಷ್ಟು ಪಾಠ ಹೇಳಿಕೊಡಲು ಕಾಯುತ್ತಿದ್ದೇವೆ. ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಕೂಡ ಆಸಕ್ತಿ ತೋರಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.