ADVERTISEMENT

ಕುಷ್ಟಗಿ: ಸೌಲಭ್ಯ ಕೊರತೆಯ ಮಧ್ಯೆ ತಾಂತ್ರಿಕ ಶಿಕ್ಷಣ

ಸರ್ಕಾರದ ನಿರ್ಲಕ್ಷ್ಯ, ಅವ್ಯವಸ್ಥೆಯಲ್ಲಿ ಕುಷ್ಟಗಿ ಪಾಲಿಟೆಕ್ನಿಕ್ ಕಾಲೇಜು

ನಾರಾಯಣರಾವ ಕುಲಕರ್ಣಿ
Published 12 ಮೇ 2024, 4:38 IST
Last Updated 12 ಮೇ 2024, 4:38 IST
ಅಪೂರ್ಣ ಸ್ಥಿತಿಯಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿನ ಮಹಿಳಾ ಹಾಸ್ಟೆಲ್ ಒಳ ಹೊರಗೆ ಮುಳ್ಳುಕಂಟಿಗಳು ಬೆಳೆದಿವೆ
ಅಪೂರ್ಣ ಸ್ಥಿತಿಯಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿನ ಮಹಿಳಾ ಹಾಸ್ಟೆಲ್ ಒಳ ಹೊರಗೆ ಮುಳ್ಳುಕಂಟಿಗಳು ಬೆಳೆದಿವೆ   

ಕುಷ್ಟಗಿ: ಪಟ್ಟಣದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಇದ್ದೂ ಇಲ್ಲದಂತಾಗಿದೆ. ಇಲ್ಲಿಗೆ ಕಲಿಯಲು ಬರುವ ವಿದ್ಯಾರ್ಥಿಗಳು ಉತ್ತಮ ತರಬೇತಿಯಿಂದ ವಂಚಿತರಾಗಿದ್ದಾರೆ.

ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದ ಕಾಲೇಜು ಎರಡು ದಶಕಗಳ ಹಿಂದೆ ಆರಂಭಗೊಂಡಿದೆ. ಆರಂಭದ ಕೆಲ ವರ್ಷಗಳಲ್ಲಿ ಉತ್ತಮ ಹೆಸರು ಇತ್ತಾದರೂ ಬರಬರುತ್ತ ಕಾಲೇಜು ಅವ್ಯವಸ್ಥೆಯ ಆಗರವಾಗಿದೆ. ಅಗತ್ಯವಾಗಿರುವ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ವಿಫಲವಾಗಿರುವ ಬಗ್ಗೆ ಸಾರ್ವಜನಿಕರು ದೂರುತ್ತಿದ್ದಾರೆ.

ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ ಮತ್ತು ಮೆಕ್ಯಾನಿಕಲ್ ಕೋರ್ಸ್‌ಗಳು ಇದ್ದು ಆಯಾ ವಿಭಾಗಗಳ ಪ್ರಯೋಗಾಲಯಗಳಿಗೆ ಅಗತ್ಯವಾಗಿರುವ ಮೂಲಸೌಲಭ್ಯಗಳ ಕೊರತೆ ಇದೆ. ಎಲ್ಲ ಕೋರ್ಸ್‌ಗಳಿಗೂ ಕಂಪ್ಯೂಟರ್‌ಗಳು ಬೇಕಿದ್ದರೂ ಸರ್ಕಾರ ಪೂರೈಕೆ ಮಾಡಿಲ್ಲ. ಪ್ರತಿ ವರ್ಷ ತಂತ್ರಾಶ ಸುಧಾರಣೆ (ಅಪ್‌ಡೇಟ್) ಆಗುತ್ತಿರುತ್ತದೆ. ಅದಕ್ಕೆ ತಕ್ಕಂತೆ ಹೊಸ ಮಾದರಿ ಕಂಪ್ಯೂಟರ್‌ಗಳು ಬೇಕಾಗಿರುತ್ತವೆ. 2021ರಲ್ಲಿ ಇನ್ಫೋಸಿಸ್‌ ಸಾಫ್ಟ್‌ವೇರ್‌ ಕಂಪೆನಿಯ 98 ಕಂಪ್ಯೂಟರ್‌ಗಳು ದೇಣಿಗೆ ಬಂದಿದ್ದು ಹಳೆ ಕಂಪ್ಯೂಟರ್‌ಗಳಲ್ಲೇ ಕಲಿಸಲಾಗುತ್ತಿದೆ. ಪದೇ ಪದೇ ವಿದ್ಯುತ್‌ ಕೈಕೊಡುತ್ತದೆ. ಆದರೆ ಯುಪಿಎಸ್ ವ್ಯವಸ್ಥೆಯೂ ಇಲ್ಲ. ಕಾರ್ಯನಿರತರಾದ ವೇಳೆ ವಿದ್ಯುತ್‌ ಹೋದರೆ ಮಾಡಿದ್ದೆಲ್ಲ ವ್ಯರ್ಥವಾಗುತ್ತದೆ ಎಂಬ ಅಳಲು ವಿದ್ಯಾರ್ಥಿಗಳದು. ಅಲ್ಲದೆ ಸಿಲೆಬಸ್‌ಗೆ ತಕ್ಕಂತೆ ಉಪಕರಣಗಳು ಅಗತ್ಯವಾಗಿದ್ದರೂ ಸರಬರಾಜಾಗಿಲ್ಲ.

ADVERTISEMENT

ಭರ್ತಿಯಾಗದ ಹುದ್ದೆಗಳು: ತಾಂತ್ರಿಕ ಶಿಕ್ಷಣ ಇಲಾಖೆಯನ್ನು ಕೆಲ ವರ್ಷಗಳ ಹಿಂದೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಳಿಸಲಾಗಿದ್ದು ತಾಂತ್ರಿಕ ಶಿಕ್ಷಣ ವಿಭಾಗ ಅದರಲ್ಲೇ ಕಾರ್ಯನಿರ್ವಹಿಸುತ್ತಿದೆ. ವಿಲೀನದ ನಂತರವೂ ವ್ಯವಸ್ಥೆ ಸುಧಾರಣೆಗೊಂಡಿಲ್ಲ. ಸಿಬ್ಬಂದಿ, ಉಪನ್ಯಾಸಕರ ಕೊರತೆ ಎದುರಾಗಿದೆ. ಮಂಜೂರಾದ 22 ಹುದ್ದೆಗಳಿದ್ದರೂ ಪ್ರಾಚಾರ್ಯರು ಸೇರಿ ಕೇವಲ 8 ಜನ ಮಾತ್ರ ಕಾಯಂ ಸಿಬ್ಬಂದಿಯಾಗಿದ್ದಾರೆ. ದಶಕದಿಂದಲೂ ಖಾಲಿ ಹುದ್ದೆ ಭರ್ತಿಯಾಗಿಲ್ಲ. ಅತಿಥಿ ಉಪನ್ಯಾಸಕರಿಂದಲೇ ತಾಂತ್ರಿಕ ಶಿಕ್ಷಣ ನಡೆಯುತ್ತಿದೆ. 2013ರಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ 371 ಜೆ ಅನ್ವಯ ವಿಶೇಷ ಮೀಸಲಾತಿ ವ್ಯವಸ್ಥೆ ಬಂದರೂ ನೇಮಕಾತಿ ನಡೆಸಿಲ್ಲ. ವರ್ಗಾವಣೆ ಕೌನ್ಸೆಲಿಂಗ್ ನಡೆದಾಗ ಕಲ್ಯಾಣ ಕರ್ನಾಟಕಕ್ಕೆ ಸೇರದವರು ಇಲ್ಲಿಂದ ಹೊರ ಹೋಗುತ್ತಾರೆ. ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ ಎನ್ನಲಾಗಿದೆ.

ಅನಾಥಪ್ರಜ್ಞೆಯಲ್ಲಿದೆ ಸರ್ಕಾರಿ ಕಾಲೇಜು

ಪ್ರತಿವರ್ಷ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದಿರುತ್ತಾರೆ. ಆದರೆ ಹಾಸ್ಟೆಲ್‌ ವ್ಯವಸ್ಥೆ ಇಲ್ಲ. ಆದರೆ ಲಕ್ಷಾಂತರ ಹಣದಲ್ಲಿ ಬಾಲಕ ಬಾಲಕಿಯರ ಹಾಸ್ಟೆಲ್‌ ಕಟ್ಟಡಗಳನ್ನು ನಿರ್ಮಿಸಲಾಗಿದ್ದರೂ ಅಪೂರ್ಣ ಸ್ಥಿತಿಯಲ್ಲಿವೆ. ಒಂದು ಕಟ್ಟಡವನ್ನು ಬಿಸಿಎಂ ಇಲಾಖೆಗೆ ನೀಡಲಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕೌಶಲ ಅಭಿವೃದ್ಧಿ ಯೋಜನೆಯಲ್ಲಿ 2017-18ರಲ್ಲಿ ₹ 90 ಲಕ್ಷ ವೆಚ್ಚದಲ್ಲಿನ ಮಹಿಳಾ ಹಾಸ್ಟೆಲ್ ಅಪೂರ್ಣಗೊಂಡಿದ್ದು ದೊಡ್ಡ ಗಾತ್ರದಲ್ಲಿ ಮುಳ್ಳುಗಿಡಗಳು ಬೆಳೆದು ನಿಂತಿವೆ. ಅದರ ಪಕ್ಕದಲ್ಲಿ ಸಿಬ್ಬಂದಿ ವಸತಿಗೃಹ ಇದ್ದರೂ ಯಾರೂ ವಾಸವಿಲ್ಲದೆ ಭೂತ ಬಂಗಲೆಯಂತಾಗಿದೆ. ಸರ್ಕಾರದ ಹಣ ನೀರಿನಂತೆ ಪೋಲಾಗಿದ್ದರೂ ಯಾರಿಗೂ ಕಳಕಳಿ ಇಲ್ಲ ಎಂದು ಸಾರ್ವಜನಿಕರಾದ ವೀರೇಶ ಮಠಪತಿ ಪ್ರಹ್ಲಾದ ಇತರರು ಅಸಮಾಧಾನ ವ್ಯಕ್ತಪಡಿಸಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯವೂ ಅಷ್ಟಕ್ಕಷ್ಟೇ. ಸರಿಯಾದ ರಸ್ತೆಗಳಿಲ್ಲ ಮುಳ್ಳುಕಂಟಿಗಳು ಬೆಳೆದಿವೆ. ರಾತ್ರಿಯಾದರೆ ಬೆಳಕು ಇಲ್ಲ ವಿಷ ಜಂತುಗಳ ಹಾವಳಿ ಮಿತಿಮೀರಿದೆ ಎಂಬ ಆತಂಕ ವಿದ್ಯಾರ್ಥಿಗಳದ್ದು.

ಸಣ್ಣಪುಟ್ಟ ಕೊರತೆಗಳ ನಡುವೆಯೂ ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ಶಿಕ್ಷಣ ನೀಡುತ್ತಿದ್ದೇವೆ. ಮೂಲಸೌಲಭ್ಯಗಳ ಅಭಿವೃದ್ಧಿ ಕುರಿತು ಶಾಸಕರಿಗೆ ಪತ್ರ ಬರೆಯಲಾಗಿದೆ. ಹಂತ ಹಂತವಾಗಿ ಎಲ್ಲ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ.
ಬಿ.ಆರ್‌.ರಾಜಶೇಖರ, ಪ್ರಾಚಾರ್ಯ
ಪ್ರತಿಷ್ಠಿತ ಕಾಲೇಜು ಆಗಿದ್ದರೂ ಆವರಣದಲ್ಲಿ ಒಂದು ಲೈಟ್‌ ಇಲ್ಲ ರಾತ್ರಿಯಾದರೆ ಇಲ್ಲಿ ಕಾಲೇಜು ಇದೆ ಎಂಬುದೇ ಗೊತ್ತಾಗುವುದಿಲ್ಲ. ಬೆಳಕಿನ ವ್ಯವಸ್ಥೆಗೂ ಸರ್ಕಾರಕ್ಕೆ ಬಡತನವೇ ಎಂಬ ಪ್ರಶ್ನೆ ಮೂಡಿದೆ.
ಪಾಂಡುರಂಗ ಆಶ್ರೀತ್, ಕುಷ್ಟಗಿ ನಿವಾಸಿ
ಸಿಬ್ಬಂದಿ ವಸತಿಗೃಹ ಭೂತ ಬಂಗಲೆಯಂತಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.