ಕುಷ್ಟಗಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಡಳಿತಾತ್ಮಕ ಕೆಲಸಗಳಿಗೆ ಸಂಬಂಧಿಸಿದಂತೆ ತಂತ್ರಾಂಶವನ್ನು ಮೇಲ್ದರ್ಜೆಗೆ ಏರಿಸಿದೆ. ಆದರೆ, ಹೊಸ ತಂತ್ರಾಂಶ ಅಳವಡಿಕೆಯಲ್ಲಿ ಉಂಟಾದ ಬಹಳಷ್ಟು ನ್ಯೂನತೆಗಳಿಂದ ಬ್ಯಾಂಕಿಂಗ್ ವ್ಯವಸ್ಥೆ ಏರುಪೇರಾಗಿದ್ದು, ಗ್ರಾಹಕರು ಮತ್ತು ಸಿಬ್ಬಂದಿ ಪರದಾಡುತ್ತಿರುವುದು ಕಂಡುಬಂದಿದೆ.
ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೆಜಿಬಿ ರಾಜ್ಯದ 22 ಜಿಲ್ಲೆಗಳಲ್ಲಿ 1,122 ಶಾಖೆಗಳನ್ನು ಹೊಂದಿದೆ. ತಂತ್ರಾಂಶವನ್ನು ಮೇಲ್ದರ್ಜೆಗೆ ಏರಿಸಿದ ನಂತರ ತಾಂತ್ರಿಕ ಸಮಸ್ಯೆ ಎಲ್ಲ ಶಾಖೆಗಳಲ್ಲಿ ಏಕರೂಪದಲ್ಲಿದೆ. ವಾರ ಕಳೆದರೂ ಪರಿಹಾರ ದೊರಕಿಲ್ಲ. ಇದರಿಂದ ಸಾಲದ ವ್ಯವಸ್ಥೆ, ಆನ್‌ಲೈನ್ ಬ್ಯಾಂಕಿಂಗ್, ಎಟಿಎಂ ಹೀಗೆ ಎಲ್ಲ ರೀತಿಯ ಹಣ ವರ್ಗಾವಣೆಯಲ್ಲಿ ವ್ಯತ್ಯಯವಾಗಿದೆ. ಬ್ಯಾಂಕ್ ವ್ಯವಸ್ಥೆ ಬಗ್ಗೆ ಹಿಡಿಶಾಪ ಹಾಕುತ್ತಿರುವ ಗ್ರಾಹಕರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿಯುತ್ತಿರುವುದು ಕಂಡುಬಂದಿದೆ. ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೇ ಇಕ್ಕಟ್ಟಿಗೆ ಸಿಲುಕಿರುವ ಸಿಬ್ಬಂದಿಯೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ.
ಆಗಿದ್ದೇನು?: ಹಿಂದೆ ಜೆನಿತ್ ತಂತ್ರಾಂಶ ಹೊಂದಿದ್ದ ಕೆಜಿಬಿ ಕೆಲ ವರ್ಷಗಳ ಹಿಂದೆ ಫಿನಾಕಲ್–7 ತಂತ್ರಾಂಶ ಅಳವಡಿಸಿಕೊಂಡಿತ್ತು. ಆದರೆ, ಪ್ರಾರಂಭದಲ್ಲಿ ಕೆಲವೇ ಬ್ಯಾಂಕ್‌ಗಳಲ್ಲಿ ಈ ತಂತ್ರಾಂಶವನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿ ಅದರಲ್ಲಿನ ನ್ಯೂನತೆಗಳನ್ನು ಸರಿಪಡಿಸಿದ ನಂತರ ಉಳಿದ ಎಲ್ಲ ಶಾಖೆಗಳಿಗೂ ಅಳವಡಿಸಲಾಗಿತ್ತು. ಈಗ ಫಿನಾಕಲ್–10 ತಂತ್ರಾಂಶಕ್ಕೆ ಅಪ್‌ಗ್ರೇಡ್ ಮಾಡಲಾಗಿದೆ. ಮುಂದಾಲೋಚನೆ ಇಲ್ಲದೆ ಮತ್ತು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸದೆ ಎಲ್ಲ ಶಾಖೆಗಳಿಗೆ ಏಕರೂಪದಲ್ಲಿ ವಿಸ್ತರಿಸಿದ್ದು ಅದರಲ್ಲಿನ ನ್ಯೂನತೆಗಳು ಹಾಗೇ ಮುಂದುವರಿದಿರುವುದು ಸಮಸ್ಯೆಗೆ ಮೂಲ ಕಾರಣ ಎಂದು ಬ್ಯಾಂಕ್ ಪ್ರಾದೇಶಿಕ ಶಾಖೆ ಮೂಲಗಳು ತಿಳಿಸಿವೆ.
ಸಮಸ್ಯೆ ಹೇಗೆ?
ಕೊಪ್ಪಳ ಜಿಲ್ಲೆಯಲ್ಲಿ ಕೆಜಿಬಿಯ 51 ಶಾಖೆಗಳಿದ್ದು ಅಲ್ಲಿ ಖಾತೆ ಹೊಂದಿರುವ ಗ್ರಾಹಕರು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಉದಾಹರಣೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮೂಲಕ ಶೇ 4ರ ಬಡ್ಡಿ ದರದಲ್ಲಿ ಸಾಲ ಪಡೆದಿದ್ದ ಕೆಲ ರೈತರ ಸಾಲ ಮರುಪಾವತಿಗೆ ಅವಧಿ ಫೆ.5 ಕೊನೆಯ ದಿನವಾಗಿತ್ತು. ಸರಿಯಾದ ಸಮಯದಲ್ಲಿ ಸಾಲ ಮರುಪಾವತಿಸುವ ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಧನ ದೊರೆಯುತ್ತದೆ. ಅವಧಿ ಮುಗಿದ ಒಂದು ದಿನ ಕಳೆದರೂ ರೈತ ಸಾಲಕ್ಕೆ ಶೇ 12ರಷ್ಟು ಬಡ್ಡಿ ತೆರಬೇಕಾಗುತ್ತದೆ. ಮರುಪಾವತಿಸಲು ಬಂದರೂ ಅಸಹಾಯಕರಾಗಿರುವ ಸಿಬ್ಬಂದಿ ತಾಂತ್ರಿಕ ಸಮಸ್ಯೆ ಇದೆ ಎಂದು ಹೇಳಿದರು. ಈಗ ಕೇಂದ್ರದ ಪ್ರೋತ್ಸಾಹಧನ ದೊರೆಯುವುದಿಲ್ಲ, ಬಡ್ಡಿ ಸಹಿತ ಸಾಲ ಕಟ್ಟದಿದ್ದರೆ ಸುಸ್ತಿದಾರರಾಗುತ್ತೇವೆ. ಹೊಸ ಸಾಲವೂ ದೊರೆಯುವುದಿಲ್ಲ. ಇದಕ್ಕೆ ಯಾರು ಹೊಣೆ ? ನಷ್ಟ ತುಂಬಿಕೊಡುವವರು ಯಾರು? ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆಲ ರೈತರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.
ಇದೇ ರೀ ತಿ ಆರ್‌ಟಿಜಿಎಸ್, ನೆಫ್ಟ್, ಯುಪಿಐ ವ್ಯವಹಾರಗಳೂ ವ್ಯತ್ಯಯವಾಗಿದ್ದು ಗ್ರಾಹಕರು ತೊಂದರೆ ಎದುರಿಸುತ್ತಿರುವುದು, ಸಿಬ್ಬಂದಿ ಅಸಹಾಯಕರಾಗಿರುವುದು ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿದಾಗ ಕಂಡುಬರುತ್ತಿದೆ. ಹೊಸ ತಂತ್ರಾಂಶ ಅಳವಡಿಸಿದ್ದರೂ ಸಿಬ್ಬಂದಿಗೆ ಕೇವಲ ಎರಡು ದಿನ ತರಬೇತಿ ನೀಡಲಾಗಿದ್ದು, ಸಮಸ್ಯೆ ಅರ್ಥವಾಗದೆ ಒಟ್ಟಾರೆ ಬ್ಯಾಂಕ್ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಬ್ಬಂದಿ ಬೇಸರ ಹೊರಹಾಕಿದರು.
ಸಿಬ್ಬಂದಿಗೆ ಮಾನಸಿಕ ಒತ್ತಡ
ತಾಂತ್ರಿಕ ಸಮಸ್ಯೆಯಿಂದಾಗಿ ಗ್ರಾಹಕರ ಮತ್ತು ಸಿಬ್ಬಂದಿ ಮಧ್ಯೆ ಅನೇಕ ಕಡೆ ಜಟಾಪಟಿ ನಡೆಯುತ್ತಿದೆ. ದಿನವಿಡೀ ಬ್ಯಾಂಕಿನಲ್ಲಿ ಒತ್ತಡದಲ್ಲೇ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಮಾನಸಿಕವಾಗಿ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದು ವೈಯಕ್ತಿಕ, ಕೌಟುಂಬಿಕ ಸಮಸ್ಯೆಗೂ ಕಾರಣವಾಗುತ್ತಿದೆ ಎಂದು ಕೆಲ ಸಿಬ್ಬಂದಿ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.