ADVERTISEMENT

ತುಂಗಭದ್ರಾ: ಜಲ ‘ಯೋಧರ’ ಸಾಹಸ

19ನೇ ಕ್ರಸ್ಟ್‌ಗೇಟ್‌ ಕಾಮಗಾರಿ ಪೂರ್ಣಗೊಂಡ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ಕನ್ನಯ್ಯನಾಯ್ಡು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 4:40 IST
Last Updated 18 ಆಗಸ್ಟ್ 2024, 4:40 IST
<div class="paragraphs"><p>ಕೊಪ್ಪಳ ಜಿಲ್ಲೆಯ ತುಂಗಭದ್ರಾ ಜಲಾಶಯದ ಗೇಟ್‌ನಿಂದ ನೀರು ಹರಿಬಿಡುವುದನ್ನು ನಿಲ್ಲಿಸಿದ ಬಳಿಕ ಖಾಲಿಖಾಲಿಯಾದ ಜಾಗ ನಡುಗಡ್ಡೆ ಪ್ರದೇಶದಿಂದ ಕಂಡು ಬಂದಿದ್ದು ಹೀಗೆ.... –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ</p></div>

ಕೊಪ್ಪಳ ಜಿಲ್ಲೆಯ ತುಂಗಭದ್ರಾ ಜಲಾಶಯದ ಗೇಟ್‌ನಿಂದ ನೀರು ಹರಿಬಿಡುವುದನ್ನು ನಿಲ್ಲಿಸಿದ ಬಳಿಕ ಖಾಲಿಖಾಲಿಯಾದ ಜಾಗ ನಡುಗಡ್ಡೆ ಪ್ರದೇಶದಿಂದ ಕಂಡು ಬಂದಿದ್ದು ಹೀಗೆ.... –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ

   

ಕೊಪ್ಪಳ: ದೂರದಿಂದಲೇ ಕಣ್ಣು ಹಾಯಿಸಿದರೆ ಕಣ್ಣಿಗೆ ಚಕ್ರ ಬರುವಷ್ಟು ನೀರು ಇರುವ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಮುಂಭಾಗದಲ್ಲಿಯೇ ಕಾರ್ಮಿಕರು ಹಾಗೂ ಅಧಿಕಾರಿಗಳು ಜೀವದ ಹಂಗು ತೊರೆದು ಯೋಧರ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದರು. ಇದರಿಂದಾಗಿ ಒಂದು ವಾರದ ಹಿಂದೆ ಕೊಚ್ಚಿ ಹೋಗಿದ್ದ 19ನೇ ಕ್ರಸ್ಟ್‌ಗೇಟ್‌ ಜಾಗಕ್ಕೆ ಬೇರೊಂದು ಗೇಟ್ ಅಳವಡಿಕೆ ಸಾಧ್ಯವಾಯಿತು.

ಗೇಟ್‌ ಮೇಲಿನ ಭಾಗದಲ್ಲಿ ಸ್ಕೈವಾಕ್‌ ತೆಗೆಯುವುದು, ಗೇಟ್‌ನ ವಿವಿಧ ಭಾಗಗಳನ್ನು ತರುವುದು, ಬೃಹತ್‌ ವಾಹನಗಳಿಂದ ಅವುಗಳನ್ನು ಸುರಕ್ಷಿತವಾಗಿ ಕೆಳಗಡೆ ಇಳಿಸುವುದು ಹಾಗೂ ಹಾನಿಯಾಗದಂತೆ ಎಚ್ಚರಿಕೆ ವಹಿಸುವುದು ಹೀಗೆ ಅನೇಕ ಸಾಹಸಮಯ ಕೆಲಸಗಳಿಗೆ ಗೇಟ್‌ ಅಳವಡಿಕೆ ಕೆಲಸ ಸಾಕ್ಷಿಯಾಯಿತು. ವ್ಯಕ್ತಿಯೊಬ್ಬರು ಕಬ್ಬಿಣದ ಸರಪಳಿಗಳನ್ನು ದೇಹಕ್ಕೆ ಸುತ್ತಲೂ ಕಟ್ಟಿಕೊಂಡು ನೇತಾಡುತ್ತಲೇ ಕೆಲಸ ಮಾಡುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

ADVERTISEMENT

ಮಳೆಯತ್ತ ಚಿತ್ತ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಒಡೆದ ಪರಿಣಾಮ ಒಂದು ವಾರ ಆತಂಕದಲ್ಲಿದ್ದ ರೈತರ ಮೊಗದಲ್ಲಿ ಈಗ ಮಂದಹಾಸ ಮೂಡಿದ್ದು, ಒಳಹರಿವು ಹೆಚ್ಚಾಗಿ ಮತ್ತೆ ಜಲಾಶಯ ತುಂಬಬಹುದು ಎನ್ನುವ ನಿರೀಕ್ಷೆ ಹೊಂದಿದ್ದಾರೆ. ಆದ್ದರಿಂದ ಮಲೆನಾಡಿನತ್ತ ಜಲಾಶಯ ವ್ಯಾಪ್ತಿಯ ರೈತರ ಚಿತ್ತ ಹರಿದಿದೆ.

ಗೇಟ್‌ ಕೊಚ್ಚಿ ಹೋದ ದಿನದಿಂದಲೇ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರು ತಂಡೋಪತಂಡವಾಗಿ ಜಲಾಶಯದತ್ತ ಧಾವಿಸುತ್ತಿದ್ದು. ಕಣ್ಣೆದುರೇ ನಿತ್ಯ ಹರಿದು ಹೋಗುತ್ತಿದ್ದ ನೀರಿಗಾಗಿ ಮರುಗುತ್ತಿದ್ದರು. ಹಲವು ಸುತ್ತಿನ ಸಭೆ, ಯೋಜನೆ ಹಾಗೂ ಯೋಚನೆಗಳ ಬಳಿಕ ಜಲಾಶಯದ ಗೇಟ್‌ ದುರಸ್ತಿ ಮಾಡುವ ಕಾರ್ಯ ಪೂರ್ಣಗೊಂಡಿದೆ.

ಶುಕ್ರವಾರ ರಾತ್ರಿ ಒಂದು ಎಲಿಮೆಂಟ್‌ ಅಳವಡಿಕೆ ಯಶಸ್ಸು ಕಂಡಾಕ್ಷಣವೇ ರೈತರು ಸಂಭ್ರಮಿಸಿ ವಿಜಯೋತ್ಸವ ಆಚರಿಸಿದ್ದರು. ಈಗ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ಮುಗಿದಿದ್ದು, ಭೋರ್ಗೆರೆದು ಹೋಗುತ್ತಿದ್ದ ನೀರು ನಿಂತು ಹೋಗಿದೆ. ಜಲಾಶಯದ ಎಲ್ಲ ಗೇಟ್‌ಗಳನ್ನು ಬಂದ್‌ ಮಾಡಲಾಗಿದೆ. ದುರಸ್ತಿಯಾದ ಗೇಟ್‌ನಿಂದ ಅತ್ಯಲ್ಪ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದ್ದು ಇದನ್ನೂ ಸರಿಪಡಿಸಲಾಗುತ್ತದೆ ಎಂದು ಟಿ.ಬಿ. ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯ ಪ್ರಸ್ತುತ ಒಟ್ಟು 105.78 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು ಶನಿವಾರದ ವೇಳೆಗೆ 71.451 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಹಿಂದಿನ ಒಂದು ವಾರಕ್ಕೆ ಹೋಲಿಸಿದರೆ ಈಗ ಒಳಹರಿವಿನ ಪ್ರಮಾಣವೂ ಹೆಚ್ಚಾಗಿದ್ದು ಶನಿವಾರದ ಸಂಜೆ 7 ಗಂಟೆ ಅಂತ್ಯಕ್ಕೆ 49,387 ಕ್ಯುಸೆಕ್‌ ನೀರು ಬಂದಿದೆ. ಇದು ರೈತರಲ್ಲಿ ಹೊಸ ಆಶಾಭಾವ ಮೂಡಿಸಿದೆ.

‘ಹಿಂದೆ ಜಲಾಶಯದಲ್ಲಿ ನೀರಿನ ಕೊರತೆಯಾದಾಗ ಆಗಸ್ಟ್‌ ಕೊನೆಯ ಎರಡು ವಾರದಲ್ಲಿ ಹೇರಳವಾಗಿ ನೀರು ಬಂದ ನಿದರ್ಶನಗಳಿವೆ. ಈಗಿನ ಸಂಕಷ್ಟದ ಸಮಯದಲ್ಲಿಯೂ ಅದೇ ರೀತಿ ಆಗಿ ಮಳೆ ಬರಲಿ ಎಂದು ಕಾಯುತ್ತಿದ್ದೇವೆ. ಜಲಾಶಯ ಮತ್ತೆ ತುಂಬಿದರೆ ಯಾವ ತೊಂದರೆಯೂ ಇರುವುದಿಲ್ಲ’ ಎಂದು ಮುನಿರಾಬಾದ್ ರೈತ ಶಿವಕುಮಾರ್‌ ಹೇಳಿದರು.

ಭಾವುಕ: ಕ್ರಸ್ಟ್‌ಗೇಟ್ ಮರು ಜೋಡಣೆ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ತಜ್ಞ ಕನ್ನಯ್ಯನಾಯ್ಡು ಹಾಗೂ ಸಿಬ್ಬಂದಿಗೆ ತುಂಗಭದ್ರಾ ಮಂಡಳಿ ಆಣೆಕಟ್ಟು ಸೇತುವೆ ಮೇಲೆ ಕಾರ್ಯಕ್ರಮ ಮಾಡಿ ಅಭಿನಂದಿಸಿತು. ಈ ವೇಳೆ ಕನ್ನಯ್ಯ ನಾಯ್ಡು ಭಾವುಕರಾದರು.  ಜಲಾಶಯದ ಮುಂಭಾಗದಲ್ಲಿ ನೀರು ಕಡಿಮೆಯಾಗುತ್ತಿದ್ದಂತೆಯೇ ಬಂದ ಹಲವು ಜನ ಮೀನುಗಾರಿಕೆ ನಡೆಸಿದರು.

ಗೇಟ್ ಅಳವಡಿಕೆ ಸಿಬ್ಬಂದಿಗೆ ₹2 ಲಕ್ಷ ಬಹುಮಾನ

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಗೇಟ್‌ ಅಳವಡಿಕೆ ಕಾರ್ಯಾಚರಣೆಯಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ ಕಾರ್ಮಿಕರಿಗೆ ಕೊಪ್ಪಳ ಸಂಸದ ಕೆ. ರಾಜಶೇಖರ ಹಿಟ್ನಾಳ ₹2 ಲಕ್ಷ ಬಹುಮಾನ ನೀಡಿದರು.

ಆಣೆಕಟ್ಟೆಯ ಸೇತುವೆ ಮೇಲೆ ತೆರಳಿ ಎಲ್ಲ ಸಿಬ್ಬಂದಿಯನ್ನು ಅಭಿನಂದಿಸಿದ ಅವರು ಬಹುಮಾನದ ಮೊತ್ತ ನೀಡಿದರು. ‘ಎಲ್ಲ ಅಧಿಕಾರಿಗಳು ಕಾಳಜಿ ವಹಿಸಿ ಕಾರ್ಯಾಚರಣೆ ಯಶಸ್ವಿಯಾಗಲು ಕಾರಣರಾಗಿದ್ದಾರೆ. ಸಂಘಟಿತವಾಗಿ ಕೆಲಸ ಮಾಡಿದ್ದಕ್ಕೆ ಯಶಸ್ಸು ಸಾಧ್ಯವಾಗಿದೆ’ ಎಂದು ರಾಜಶೇಖರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.