ಕೊಪ್ಪಳ/ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ತೂಬಿಗೆ ಎಲ್ಲ ಐದು ಎಲಿಮೆಂಟ್‌ಗಳನ್ನು ಅಳವಡಿಸುವ ಕಾರ್ಯ ಶನಿವಾರ ಯಶಸ್ವಿಯಾಗಿದ್ದು, ಸರಿಯಾಗಿ ಒಂದು ವಾರದ ಹಿಂದೆ ರೈತರಲ್ಲಿ ಮನೆಮಾಡಿದ್ದ ಆತಂಕ ಈಗ ದೂರವಾಗಿದೆ.
ನಾಲ್ಕು ಅಡಿ ಎತ್ತರದ ಐದು ಎಲಿಮೆಂಟ್‌ಗಳನ್ನು ಅಳವಡಿಸಿ ರಭಸದಿಂದ ಹರಿಯುವ ನೀರಿನ ವೇಗಕ್ಕೆ ಕಡಿವಾಣ ಹಾಕಲು ತಾತ್ಕಾಲಿಕ ಗೇಟ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಶುಕ್ರವಾರ ರಾತ್ರಿ ಮೊದಲ ಎಲಿಮೆಂಟ್ ಅಳವಡಿಸಿ, ಶನಿವಾರ ಉಳಿದ ಎಲಿಮೆಂಟ್‌ಗಳನ್ನು ಜೋಡಿಸಲಾಯಿತು. ರಾಜ್ಯದ ಕೊಪ್ಪಳ, ವಿಜಯನಗರ, ರಾಯಚೂರು, ಬಳ್ಳಾರಿ ಜಿಲ್ಲೆಗಳು, ನೆರೆಯ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಪಾಲು ಹೊಂದಿರುವ ಈ ಜಲಾಶಯದಲ್ಲಿ ಒಂದು ವಾರದ ಅವಧಿಯಲ್ಲಿ 36 ಟಿಎಂಸಿ ಅಡಿ ನೀರು ನದಿಗೆ ಹರಿದು ಪೋಲಾಗಿದೆ.
ಜಲಾಶಯದ ಗೇಟ್ ಕೊಚ್ಚಿ ಹೋದಾಗ ಕನಿಷ್ಠ 60 ಟಿಎಂಸಿ ಅಡಿ ನೀರು ಖಾಲಿಮಾಡಿಯೇ ಎಲಿಮೆಂಟ್‌ಗಳನ್ನು ಅಳವಡಿಸಬೇಕಾಗುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಜಲಾಶಯಗಳ ಕ್ರಸ್ಟ್‌ಗೇಟ್ ತಜ್ಞ ಕನ್ನಯ್ಯ ನಾಯ್ಡು ರಭಸವಾಗಿ ಹರಿಯುವ ನೀರಿನಲ್ಲಿಯೇ ಎಲಿಮೆಂಟ್‌ಗಳನ್ನು ಅಳವಡಿಸಿದರೆ ನೀರು ಉಳಿಸಬಹುದು ಎನ್ನುವ ಸಲಹೆ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿಯೇ ನಡೆದ ಕಾರ್ಯಾಚರಣೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಜಲಾಶಯದಲ್ಲಿಯೇ ಉಳಿಯಿತು.
ಒಂದೊಂದೇ ಎಲಿಮೆಂಟ್‌ಗಳನ್ನು ಅಳವಡಿಸಿದ ಬಳಿಕ ಅದರ ಅಕ್ಕಪಕ್ಕದ ಗೇಟ್‌ಗಳಿಂದ ನೀರಿನ ಹರಿವು ಬಂದ್ ಮಾಡಿ ಆ ನೀರಿನ ಒತ್ತಡವೆಲ್ಲ 19ನೇ ಗೇಟ್ ಮೇಲೆಯೇ ಬೀಳುವ ಪರೀಕ್ಷೆ ಮಾಡಲಾಯಿತು. ಪ್ರತಿ ಎಲಿಮೆಂಟ್ ಕೂಡಿಸಿದಾಗಲೂ ಇದೇ ರೀತಿಯ ಪರೀಕ್ಷೆ ನಡೆಸಿ ಅಳವಡಿಕೆ ಸರಿಯಾಗಿ ಆಗಿದೆಯೇ ಎಂದು ತಾಂತ್ರಿಕ ಸಿಬ್ಬಂದಿ ಖಚಿತಪಡಿಸಿಕೊಂಡರು.
ಎರಡನೇ ಎಲಿಮೆಂಟ್ ಅಳವಡಿಕೆಗೆ ಸುಮಾರು ಒಂದೂವರೆ ತಾಸು ಬೇಕಾಯಿತು. ಬಳಿಕ ವೇಗವಾಗಿ ಅವುಗಳನ್ನು ಅಳವಡಿಸಿ ಎಲ್ಲ ಗೇಟ್‌ಗಳಿಂದ ನೀರು ಬಂದ್ ಮಾಡಿದ್ದರಿಂದ ಕೆಲವೇ ನಿಮಿಷಗಳಲ್ಲಿ ಜಲಾಶಯದಲ್ಲಿ ಭೋರ್ಗೆರೆಯುತ್ತಿದ್ದ ನೀರು ಸ್ಥಬ್ದವಾಯಿತು. ಕೊಪ್ಪಳ–ಹೊಸಪೇಟೆ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವಾಗ ಜನರಿಗೆ ಕಣ್ಣು ಹಾಯಿಸಿದಷ್ಟೂ ದೂರ ನೀರೇ ನೀರು. ಆದರೆ ಶನಿವಾರ ಸಂಜೆಯಿಂದ ಕಿಂಚಿತ್ತೂ ನೀರು ಕಾಣದಿದ್ದಾಗ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ರಭಸವಾಗಿ ಹರಿಯುವ ನೀರಿನಲ್ಲಿ ಕಾರ್ಯಾಚರಣೆ ನಡೆಸಿ ಗರಿಷ್ಠ ಪ್ರಮಾಣದಲ್ಲಿ ನೀರು ಜಲಾಶಯದಲ್ಲಿಯೇ ಉಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಮತ್ತೆ ತುಂಗಭದ್ರಾ ತುಂಬಲಿದೆ.–ಶಿವರಾಜ ತಂಗಡಗಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ
ತುಂಗಭದ್ರಾ ಅಣೆಕಟ್ಟೆಗೆ 30 ವರ್ಷವಷ್ಟೇ ಆಯಸ್ಸು: ಕನ್ನಯ್ಯ ನಾಯ್ಡು
ಹೊಸಪೇಟೆ (ವಿಜಯನಗರ): ‘ತುಂಗಭದ್ರಾ ಅಣೆಕಟ್ಟೆಯ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ತಕ್ಷಣ ಬದಲಿಸಿ ಹೊಸ ಗೇಟ್ ಅಳವಡಿಸಬೇಕು. ಹಾಗೆ ಮಾಡಿದರೆ ಇನ್ನು 30 ವರ್ಷ ಸುಸ್ಥಿತಿಯಲ್ಲಿ ಇರಬಹುದು ಆ ಬಳಿಕ ಹೊಸ ಅಣೆಕಟ್ಟೆ ನಿರ್ಮಿಸಲೇಬೇಕಾಗುತ್ತದೆ’ ಎಂದು ಕ್ರಸ್ಟ್‌ಗೇಟ್ ತಜ್ಞ ಕನ್ನಯ್ಯ ನಾಯ್ಡು ಸಲಹೆ ನೀಡಿದ್ದಾರೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಅಣೆಕಟ್ಟೆಗಳಿಗೆ ವಯಸ್ಸಾದಂತೆ ಅವುಗಳಿಗೆ ಆಗಾಗ ಹೆಚ್ಚುವರಿ ಉಪಚಾರ ಬೇಕಾಗುತ್ತದೆ. ಅಣೆಕಟ್ಟೆ ನಿರ್ಮಿಸಿ 45 ವರ್ಷವಾದಾಗಲೇ ಕ್ರಸ್ಟ್‌ಗೇಟ್‌ಗಳನ್ನು ಬದಲಿಸಬೇಕಿತ್ತು ತುಂಗಭದ್ರಾದಲ್ಲಿ ಅದು ಆಗಿಲ್ಲ. 100 ವರ್ಷವಾದಾಗ ಕಲ್ಲುಗಳು ಸಡಿಲಗೊಂಡು ಅಣೆಕಟ್ಟೆ ಕುಸಿಯುವ ಸಾಧ್ಯತೆ ಇರುತ್ತದೆ ಎಂದರು.
‘ದೇಶದಲ್ಲೇ ಮೊದಲ ಬಾರಿಗೆ ರಭಸವಾಗಿ ಹರಿಯುವ ನೀರಿನಲ್ಲೇ ಗೇಟ್ ಎಲಿಮೆಂಟ್ ಇಳಿಸುವ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದೇವೆ. ಇದರಿಂದ 30 ಟಿಎಂಸಿ ಅಡಿ ನೀರು ನದಿಗೆ ವ್ಯರ್ಥವಾಗಿ ಹೋಗುವುದು ತಪ್ಪಿದೆ. ಈಗ 90 ಟಿಎಂಸಿ ಅಡಿ ಸಂಗ್ರಹವಾಗಲಿದ್ದು ರೈತರ ಒಂದು ಬೆಳೆಗೆ ಕುಡಿಯಲು ನೀರು ಸಿಗಲಿದೆ’ ಎಂದರು.
ಗೇಟ್ ಅಳವಡಿಸಿದ ಸಿಬ್ಬಂದಿಗೆ ತಲಾ ₹ 50 ಸಾವಿರ ಬಹುಮಾನ
ಬಳ್ಳಾರಿ: ಗೇಟ್ ಅಳವಡಿಕೆ ತಂಡದಲ್ಲಿ ಕೆಲಸ ಮಾಡಿದ್ದ 35 ಮಂದಿಗೆ ತಲಾ ₹ 50 ಸಾವಿರ ಬಹುಮಾನ ನೀಡುವುದಾಗಿ ವಸತಿ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್ ಶನಿವಾರ ಘೋಷಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿರುವ ಅವರು ‘ಗೇಟ್ ಅಳವಡಿಸಲು ಸಿಬ್ಬಂದಿ ಪ್ರಾಣದ ಹಂಗು ತೊರೆದು ಡ್ಯಾಂನಲ್ಲಿ ಕೆಲಸ ಮಾಡಿದ್ದಾರೆ. ತಂಡದಲ್ಲಿರುವ ಒಟ್ಟು 35 ಮಂದಿಗೆ ಖುದ್ದು ಸನ್ಮಾನ ಮಾಡಿ ₹ 50 ಸಾವಿರ ನಗದು ನೀಡುವುದಾಗಿ ಹೇಳಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಬೆಂಗಳೂರಿಗೆ ತುರ್ತಾಗಿ ತೆರಳಬೇಕಿದೆ. ಹೀಗಾಗಿ ಇನ್ನೆರಡು ಮೂರು ದಿನಗಳಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ನೇತೃತ್ವದಲ್ಲಿ ಸಮಾರಂಭ ಆಯೋಜಿಸಿ ಸಿಬ್ಬಂದಿಗೆ ಸನ್ಮಾನ ಮಾಡಲಾಗುವುದು. ಹಣದ ನೆರವನ್ನೂ ನೀಡಲಾಗುವುದು’ ಎಂದು ತಿಳಿಸಿದರು.
ಟೀಕೆಯ ಬಳಿಕ ಮುಖ್ಯ ಎಂಜಿನಿಯರ್ ನೇಮಕ
ಕೊಪ್ಪಳ: ಜಲಾಶಯದ ಗೇಟ್ ಕಳಚಿ ಅವಘಡವಾದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಮುಖ್ಯ ಎಂಜಿನಿಯರ್ ಹುದ್ದೆ ಸೃಷ್ಟಿ ಮಾಡಿದ್ದು ಕರ್ನಾಟಕ ನೀರಾವರಿ ನಿಗಮದ ತಾಲ್ಲೂಕಿನ ಮುನಿರಾಬಾದ್ ಕಚೇರಿಗೆ ಹನುಮಂತ ಜಿ. ದಾಸರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಮುನಿರಾಬಾದ್ ತುಂಗಭದ್ರಾ ಜಲಾಶಯಕ್ಕೆ ಒಂದು ವರ್ಷದಿಂದ ಮುಖ್ಯ ಎಂಜಿನಿಯರ್ ಹುದ್ದೆ ಖಾಲಿಯಿತ್ತು. ಗೇಟ್ ಕೊಚ್ಚಿಕೊಂಡು ಹೋದಾಗ ಹುದ್ದೆ ಭರ್ತಿ ಮಾಡದ ಕಾರಣಕ್ಕೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.