ADVERTISEMENT

ರಾಜಕೀಯ ಪ್ರೇರಿತದಿಂದ ಪ್ರಕರಣ ದಾಖಲು: ಸಿ.ವಿ. ಚಂದ್ರಶೇಖರ್‌

ಕವಲೂರಿನಲ್ಲಿ ಪ್ರತಿಭಟನೆ ವೇಳೆ ದೂರು ದಾಖಲು ವಿಚಾರ; ಬಿಜೆಪಿ, ಜೆಡಿಎಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 15:18 IST
Last Updated 4 ಅಕ್ಟೋಬರ್ 2024, 15:18 IST
ಸಿ.ವಿ. ಚಂದ್ರಶೇಖರ್‌
ಸಿ.ವಿ. ಚಂದ್ರಶೇಖರ್‌   

ಕೊಪ್ಪಳ: ‘ತಾಲ್ಲೂಕಿನ ಕವಲೂರು ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕಾಗಿ ನಡೆದ ಪ್ರತಿಭಟನೆ ವೇಳೆ ರಾಜಕೀಯ ಪ್ರೇರಿತವಾಗಿ ಹಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ’ ಎಂದು ಜೆಡಿಎಸ್‌ ರಾಜ್ಯ ಕೋರ್‌ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್‌ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಮೂಲಸೌಕರ್ಯ ಬೇಕು ಎಂದು ಬೇಡಿಕೆ ಇಡುವುದು ತಪ್ಪೇ? ಸುಳ್ಳು ಆಶ್ವಾಸನೆ ಕೊಟ್ಟು ಮತ ಪಡೆಯುವಾಗ ಜನರ ಬೇಡಿಕೆಗಳು ತಮ್ಮ ಕಣ್ಣಿಗೆ ಕಾಣಲಿಲ್ಲವೇ? ಹಿಟ್ಲರ್ ಆಡಳಿತವನ್ನು ಕೊಪ್ಪಳದಲ್ಲಿ ಸ್ಥಾಪಿಸಲು ಕಾಂಗ್ರೆಸ್ ಪಕ್ಷ ಹೊರಟಿದೆಯೇ? ಎಂಬುದನ್ನು  ಶಾಸಕರು ಹಾಗೂ ಅವರ ಪಕ್ಷದ ನಾಯಕರು ಸ್ಪಷ್ಟ ಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಜನರ ತಾಳ್ಮೆ ಕಟ್ಟೆ ಒಡೆದಿದೆ. ಕವಲೂರು ಭಾಗದಲ್ಲಿ ರಸ್ತೆಗಳೇ ಮಾಯವಾಗಿವೆ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಶಾಸಕರು ನಿಷ್ಕ್ರಿಯವಾಗಿದ್ದು, ತಾಲ್ಲೂಕು ಆಡಳಿತ ಅದಕ್ಷವಾಗಿದೆ. ಇದರ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ ಜನರ ಮೇಲೆ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿದ ತಹಶೀಲ್ದಾರ್ ವಿಠ್ಠಲ್ ಚೌಗಲಾ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್‌ ಪತ್ರಿಕಾ ಹೇಳಿಕೆ ನೀಡಿದ್ದು ‘ರಸ್ತೆ ಅಭಿವೃದ್ಧಿ ಬಗ್ಗೆ ಪ್ರತಿಭಟನೆ ಮಾಡಿದರೆ ಗ್ರಾಮದವರಿಗೆ ಜೈಲು ಭಾಗ್ಯ ಲಭಿಸಿದೆ. ಕವಲೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಪಡಿಸುವಲ್ಲಿ ದೀರ್ಘ ವಿಳಂಬ ಖಂಡಿಸಿ ಪ್ರತಿಭಟನೆ ಮಾಡಿದವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದು ಸರಿಯೇ’ ಎಂದು ಪ್ರಶ್ನಿಸಿದ್ದಾರೆ.

‘ರಸ್ತೆ ಸರಿ ಇಲ್ಲದ್ದರಿಂದ ಬಸ್ ಸಂಚಾರ ಕೂಡ ಆಗಾಗ ಸ್ಥಗಿತವಾಗುತ್ತಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿದೆ. ದುರಸ್ತಿಗೆ ಹಲವಾರು ಬಾರಿ ಗ್ರಾಮದವರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರತಿಭಟನೆ ನೆಪವಾಗಿಟ್ಟುಕೊಂಡು ಪೊಲೀಸರು ಹಾಗೂ ತಹಶೀಲ್ದಾರ್‌ 14 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿ ದರ್ಪ ತೋರಿದ್ದಾರೆ. ಈ ದೂರು ವಾಪಸ್‌ ಪಡೆಯಬೇಕು. ಇಲ್ಲವಾದರೆ ಜಿಲ್ಲೆಯಾದ್ಯಂತ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಹಳ್ಳಿಯಲ್ಲಿ ಅಭಿವೃದ್ಧಿಯ ವಿಷಯ ಕೇಳಿದರೆ ಅಧಿಕಾರಿಗಳು ದರ್ಪ ತೋರುತ್ತಿದ್ದಾರೆ. ನಮ್ಮ ಜನರ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತುವುದು ತಪ್ಪಾ?
ಡಾ. ಬಸವರಾಜ್ ಎಸ್ ಕ್ಯಾವಟರ್ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ
ಮೊಕದ್ದಮೆ ದಾಖಲಿಸಿರುವುದು ಸಂವಿಧಾನ ಬಾಹಿರ. ಈ ಕೂಡಲೇ ಮುಗ್ಧ ಜನರ ಮೇಲಿನ ಪ್ರಕರಣ ವಾಪಸ್ ಪಡೆಯಬೇಕು. ಅದಕ್ಷ ಅಧಿಕಾರಿಯನ್ನು ಉಪಯೋಗಿಸಿಕೊಂಡು ಜನರನ್ನು ದ್ವೇಷಿಸುವ ಮನಸ್ಥಿತಿ ಕಾಂಗ್ರೆಸ್‌ ಕೈಬಿಡಬೇಕು.
ಸಿ.ವಿ. ಚಂದ್ರಶೇಖರ್‌ ಜೆಡಿಎಸ್‌ ರಾಜ್ಯಕೋರ್‌ಕಮಿಟಿ ಸದಸ್ಯ

ಕವಲೂರಿಗೆ ಇಂದು ಬಿಜೆಪಿ ತಂಡ

ಕವಲೂರು ಗ್ರಾಮಕ್ಕೆ ಬಿಜೆಪಿ ತಂಡ ಶನಿವಾರ ಭೇಟಿ ನೀಡಲಿದೆ. ಪಕ್ಷದ ಜಿಲ್ಲಾಧ್ಯಕ್ಷ ನವೀನ್‌ ಗುಳಗಣ್ಣನವರ ಬಸವರಾಜ ಕ್ಯಾವಟರ್ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಸೇರಿದಂತೆ ಹಲವರು ಗ್ರಾಮಕ್ಕೆ ತೆರಳಿ ಕಲ್ಪವೃಕ್ಷ ಸಂಜೀವಿನಿ ಮಹಿಳಾ ಒಕ್ಕೂಟದವರ ಜೊತೆ ಮತ್ತು ಗ್ರಾಮದವರ ಜೊತೆ ಸಮಾಲೋಚನೆ ಮಾಡಲಿದೆ ಎಂದು ಪಕ್ಷದ ಮಾಧ್ಯಮ ಸಂಚಾಲಕ ಮಹೇಶ್ ಹಾದಿಮನಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.