ADVERTISEMENT

ಮರಕುಂಬಿ ಪ್ರಕರಣ: ಗ್ರಾಮಸ್ಥರಲ್ಲಿ ನಿಟ್ಟುಸಿರು

99 ಅಪರಾಧಿಗಳು ಜೈಲಿನಿಂದ ಬರುವಿಕೆಯ ನಿರೀಕ್ಷೆಯಲ್ಲಿ ಕುಟುಂಬದವರು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 5:02 IST
Last Updated 15 ನವೆಂಬರ್ 2024, 5:02 IST
ಮರಕುಂಬಿ ಗ್ರಾಮದ ಶಾಲೆಯ ಬಳಿ ಬಿಗಿ ಪೊಲೀಸರ ಕಣ್ಗಾವಲು
ಮರಕುಂಬಿ ಗ್ರಾಮದ ಶಾಲೆಯ ಬಳಿ ಬಿಗಿ ಪೊಲೀಸರ ಕಣ್ಗಾವಲು   

ಗಂಗಾವತಿ: ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ದಶಕದ ಹಿಂದೆ ದಲಿತರು ಮತ್ತು ಪ್ರಬಲ ಸಮುದಾಯದವರ ನಡುವೆ ನಡೆದ ಹಿಂಸಾಚಾರ, ಜಾತಿ ಸಂಘರ್ಷಕ್ಕೆ ಸಂಬಂಧಿಸಿದ ಪ್ರಕರಣದಡಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಿಗೆ ಧಾರವಾಡ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಮರುದಿನ ಗ್ರಾಮದ ಜನರ ಮುಖದಲ್ಲಿ ಸಂತಸ ಮೂಡಿದ ದೃಶ್ಯಗಳು ಕಂಡು ಬಂದವು.

ಗುರುವಾರ ಗ್ರಾಮಕ್ಕೆ ಭೇಟಿ ನೀಡಿದಾಗ ಜಾಮೀನಿನ ಮೂಲಕ ತಮ್ಮ ಪತಿ, ಅಣ್ಣ, ತಮ್ಮ ಊರಿಗೆ ಬರುತ್ತಾರೆ ಎನ್ನುವ ವಿಷಯ ತಿಳಿದು ಅವರ ಕುಟುಂಬದವರು ಸಂತಸದಲ್ಲಿದ್ದರು. ಮಕ್ಕಳು ಮನೆಗಳಲ್ಲಿ, ನೆರೆಹೊರೆಯವರ ಬಳಿ ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತಾ, ಜಾಮೀನು ಲಭಿಸಿದ್ದಕ್ಕೆ ಖುಷಿ ವ್ಯಕ್ತಪಡಿಸಿದರು.

ಗ್ರಾಮದ ಅಂಗಡಿ, ಶಾಲೆ ಸಮೀಪ, ಮನೆಯ ಮುಂಭಾಗ, ಅಪ್ಪು ವೃತ್ತ ಸೇರಿ ಗ್ರಾಮದ ವಿವಿಧ ಸ್ಥಳಗಳಲ್ಲಿ ಯುವಕರು, ಹಿರಿಯರು ಒಟ್ಟಾಗಿ ಕುಳಿತುಕೊಂಡು ಜಾಮೀನು ಮಂಜೂರು ವಿಚಾರ, ₹50 ಸಾವಿರ ಬಾಂಡ್‌ ನೀಡಿದರೆ ಜೈಲಿನಿಂದ ಬಿಡುಗಡೆಯಾಗುವ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದರು. ಅಪರಾಧಿಗಳ ಕುಟುಂಬದವರಲ್ಲಿ ಜಾಮೀನು ವಿಚಾರ ಖುಷಿ ತಂದಿತ್ತು.

ADVERTISEMENT

ಜಾಮೀನು ಮಂಜೂರಾತಿ ಬಳಿಕವೂ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸರು ಗ್ರಾಮದ ಎಲ್ಲ ಬಡಾವಣೆಗಳಲ್ಲಿ ಓಡಾಡುತ್ತಿದ್ದ ಚಿತ್ರಣ ಕಂಡುಬಂದಿತು.

ಪ್ರಬಲ ಸಮುದಾಯದ ಮಹಿಳೆ ಪಾರ್ವತಿ ಮಾಧ್ಯಮಗಳ ಜೊತೆ ಮಾತನಾಡಿ ‘ಮರಕುಂಬಿ ಪ್ರಕರಣದ ಬಗ್ಗೆ ಜಿಲ್ಲಾ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ಧಾರವಾಡ ಹೈಕೋರ್ಟ್ ಪೀಠಕ್ಕೆ ಜಾಮೀನು ಕೋರಿ ಸಲ್ಲಿಸಿದ ಅರ್ಜಿಗೆ ಮಾನ್ಯತೆ ಲಭಿಸಿದ್ದು ಖುಷಿ ನೀಡಿದೆ. ಮನೆಯಲ್ಲಿ ಸದಸ್ಯರೇ ಇಲ್ಲದ ಕಾರಣ ನಿರ್ವಹಣೆಯೂ ಕಷ್ಟವಾಗಿತ್ತು’ ಎಂದರು.

ಜಮೀನುಗಳಲ್ಲಿ ಭತ್ತ ನಾಟಿ ಮಾಡಲಾಗಿದೆ, ಕೃಷಿ ಚಟುವಟಿಕೆ ಮಾಡುವ ಮನೆಯ ಯಜಮಾನರು ಜೈಲಿನಲ್ಲಿರುವ ಕಾರಣ, ಭತ್ತ ಕಟಾವು, ಒಣಗಿಸುವ ಕೆಲಸಕ್ಕೆ ತವರು ಮನೆಯವರನ್ನು ಕರೆಯಿಸಿಕೊಂಡು ಕೆಲಸ ಮಾಡಲಾಗುತ್ತಿದೆ ಎಂದರು.

ಮತ್ತೊಬ್ಬ ವೃದ್ದೆ ಮಾತನಾಡಿ ‘ಮನೆ ನಡೆಯುವುದೇ ಕಷ್ಟವಾಗಿದ್ದು, ದುಡಿಯುವ ಮಗ ಜೈಲಿನಲ್ಲಿದ್ದಾನೆ. ನನಗೆ ₹50 ಸಾವಿರ ಹಣ ಹೊಂದಿಸುವುದೇ ಕಷ್ಟವಾಗಿದೆ’ ಎಂದು ಅಳಲು ತೋಡಿಕೊಂಡರು.

ಕಳೆದ ತಿಂಗಳು ಕೊಪ್ಪಳ ಜಿಲ್ಲಾ ನ್ಯಾಯಾಲಯದ ಆದೇಶದ ಬಳಿಕ 98 ಜನರಿಗೆ ಜೀವಾವಧಿ ಹಾಗೂ ಮೂವರಿಗೆ ಐದು ವರ್ಷ ಶಿಕ್ಷೆ ವಿಧಿಸಲಾಗಿತ್ತು. ಇದಾದ ಬಳಿಕ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಜನರ ಸುಳಿವೇ ಕಾಣುತ್ತಿರಲಿಲ್ಲ. 

ಬೆಳಿಕಿನ ಹಬ್ಬ ದೀಪಾವಳಿ ಸಂಭ್ರಮದಿಂದ ಆಚರಿಸಬೇಕಾಗಿದ್ದ ಗ್ರಾಮಸ್ಥರು, ತಮ್ಮ ಕುಟುಂಬದ ಸದಸ್ಯರು ಜೈಲಿನಲ್ಲಿರುವ ಕಾರಣಕ್ಕೆ ಹಬ್ಬವನ್ನೇ ಆಚರಿಸಿರಲಿಲ್ಲ. ಜೈಲಿನಲ್ಲಿರುವ ಬಹುತೇಕರು ಭತ್ತನಾಟಿ ಮಾಡಿದ ಕಾರಣ, ಬೆಳೆ ನಿರ್ವಹಣೆಗೆ ಮಹಿಳೆಯರು, ವೃದ್ದರು ತಮ್ಮ ಸಂಬಂಧಿಕರ, ಆತ್ಮೀಯರ ನೆರವಿನಿಂದ ಭತ್ತದ ಬೆಳೆಗಳಿಗೆ ಔಷಧಿ ಸಿಂಪರಣೆ ಮಾಡಿಸಿಕೊಳ್ಳುವ ಜತೆಗೆ ಭತ್ತ ಕಟಾವು, ಭತ್ತ ಒಣಗಿಸುವ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು.

ಸವರ್ಣೀಯರ ಮನೆಯಲ್ಲಿನ ಹಿರಿಯರು ಮಕ್ಕಳನ್ನೆ ನೆನದು, ಅವರ ಬರುವಿಕೆಗಾಗಿ ಕಾಯುತ್ತಾ, ದಿನ ಕಳೆಯುವುದು ಗ್ರಾಮದಲ್ಲಿ ಸಾಮಾನ್ಯವಾಗಿರುತ್ತಿತ್ತು.

‘ಮನೆ ನಿರ್ವಹಣೆ ಮಾಡಬೇಕಾದ ಪುರುಷರು ಜೈಲಿನಲ್ಲಿದ್ದರೆ, ಮನೆ ನಡೆಯುವುದಾದರೂ ಹೇಗೆ? ಈ ಬಾರಿ ದೀಪಾವಳಿ ಸಹ ಆಚರಣೆ ಮಾಡಲಿಲ್ಲ. ಮನೆಯವರ ಬರುವಿಕೆಗಾಗಿ ತುದುಗಾಲಲ್ಲಿ ನಿಂತಿದ್ದೇವೆ’ ಎಂದು ಪ್ರಬಲ ಸಮುದಾಯ ಕುಟುಂಬದ ಸದಸ್ಯೆ ಶಶಿಕಲಾ ಹೇಳಿದರು.

ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ಗುರುವಾರ ಕಂಡುಬಂದ ಜನರ ಓಡಾಟದ ಚಿತ್ರಣ

ಆದೇಶ ಬಂದ ಬಳಿಕ ಬಿಡುಗಡೆ: ಲತಾ

ಬಳ್ಳಾರಿ: ಮರಕುಂಬಿ ಹಿಂಸಾಚಾರ ಪ್ರಕರಣದಲ್ಲಿ ಜಾಮೀನು ಪಡೆದಿರುವ 99 ಅಪರಾಧಿಗಳ ಬಿಡುಗಡೆ ಆದೇಶ ಇನ್ನಷ್ಟೇ ಬಳ್ಳಾರಿ ಕೇಂದ್ರ ಕಾರಾಗೃಹ ಅಧಿಕಾರಿಗಳ ಕೈ ಸೇರಬೇಕಿದೆ. ಅದು ಬಂದ ಕೂಡಲೇ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಕಾರಾಗೃಹದ ಅಧೀಕ್ಷಕಿ ಲತಾ ತಿಳಿಸಿದ್ದಾರೆ. 

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು ಜಾಮೀನು ಪಡೆದವರು ಕೋರ್ಟ್‌ ತಿಳಿಸಿರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಭದ್ರತೆ ಮತ್ತು ₹50 ಸಾವಿರ ಬಾಂಡ್‌ ಸಲ್ಲಿಸಬೇಕಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕೈದಿಗಳ ಬಿಡುಗಡೆಗೆ ಕೋರ್ಟ್‌ನಿಂದ ಆದೇಶ ಹೊರಡಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಪ್ರಕರಣದ ಒಟ್ಟು 101 ಅಪರಾಧಿಗಳ ಪೈಕಿ ಒಬ್ಬ ಅಪರಾಧಿ ಶಿಕ್ಷೆ ಪ್ರಕಟವಾದ ದಿನವೇ ಮೃತಪಟ್ಟಿದ್ದ. ಇನ್ನು 100 ಮಂದಿಯನ್ನು ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಈ ಪೈಕಿ ಪ್ರಕರಣದ ‘ಎ 1’ ಆರೋಪಿ ಜಾಮೀನಿಗೆ ಅರ್ಜಿಯನ್ನೇ ಸಲ್ಲಿಸಿರಲಿಲ್ಲ. ಸದ್ಯ 99 ಮಂದಿಗೆ ಜಾಮೀನು ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.