ADVERTISEMENT

ಕೊಪ್ಪಳ: ವಾಣಿಜ್ಯ ಮಳಿಗೆಗಳಿಗೆ ಹತ್ತಿದ ಬೆಂಕಿ ಮೂರು ತಾಸಿನ ಬಳಿಕ ತಹಬದಿಗೆ

​ಪ್ರಜಾವಾಣಿ ವಾರ್ತೆ
Published 20 ಮೇ 2024, 15:21 IST
Last Updated 20 ಮೇ 2024, 15:21 IST
   

ಕೊಪ್ಪಳ: ನಗರದ ವರ್ಣೇಕರ್‌ ಕಾಂಪ್ಲೆಕ್ಸ್‌ ಮುಂಭಾಗದಿಂದ ರೈಲು ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿರುವ ವಾಣಿಜ್ಯ ಮಳಿಗೆಗಳಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ದೊಡ್ಡ ಅಗ್ನಿ ಅವಘಡ ಜನರಲ್ಲಿ ಭಾರಿ ಆತಂಕ ಮೂಡಿಸಿ ಭಯಭೀತರನ್ನಾಗಿ ಮಾಡಿತ್ತು.

ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಮೂರು ತಾಸಿನ ಕಾರ್ಯಾಚರಣೆ ನಡೆಸಿದ ಬಳಿಕ ಬೆಂಕಿ ಹಾಗೂ ದಟ್ಟ ಹೊಗೆ ತಹಬದಿಗೆ ಬಂದಿತು. ಮೊದಲು ರಾಯಲ್ ಪೇಂಟ್ಸ್‌ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಂಗಡಿಯಲ್ಲಿದ್ದ ಸಾಮಗ್ರಿಗಳಿಗೆ ಹೊತ್ತಿಕೊಂಡ ಬೆಂಕಿ ವೇಗವಾಗಿ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿತು. ಒಂದು ಹಂತದಲ್ಲಿ ಕೆಲ ಸಾಮಗ್ರಿ ಸ್ಫೋಟಗೊಂಡಿದ್ದರಿಂದ ಜನ ಆತಂಕಗೊಂಡರು. ಪ್ರಾಥಮಿಕ ಮಾಹಿತಿ ಪ್ರಕಾರ ರಾಯಲ್‌ ಪೇಂಟ್ಸ್‌ ಮೋಹನ್‌ ಮೇಘರಾಜ್‌ ಎಂಬುವರಿಗೆ ಸೇರಿದ್ದು ಎಂದು ಗೊತ್ತಾಗಿದೆ.

ಮನೆಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡುವ ಪ್ಲೇವುಡ್‌, ಎಂಎಸ್‌ಐಎಲ್‌, ಹೋಲ್‌ಸೇಲ್‌ ದರದ ಬಟ್ಟೆ ಮಾರಾಟದ ಅಂಗಡಿ, ದೇವು ಫಿಷ್‌ ಸೆಂಟರ್‌ ಸೇರಿದಂತೆ ಹಲವು ಅಂಗಡಿಗಳು ಬೆಂಕಿಗೆ ಆಹುತಿಯಾದವು. ಕ್ಷಣಕ್ಷಣಕ್ಕೂ ಬೆಂಕಿಯ ಕೆನ್ನಾಲಗೆ ವ್ಯಾಪಿಸುತ್ತಲೇ ಹೋದರೂ ಆರಂಭದಲ್ಲಿ ಎರಡು ಅಗ್ನಿಶಾಮಕ ವಾಹನಗಳು ಮಾತ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ತೀವ್ರತೆ ಹೆಚ್ಚಾಗಿದ್ದರಿಂದ ಬೆಂಕಿ ನಂದಿಸುವ ಕಾರ್ಯ ಚುರುಕು ಪಡೆದುಕೊಂಡಿತು. ವಾಹನಗಳ ಸಂಖ್ಯೆಯೂ ಹೆಚ್ಚಾಯಿತು.

ADVERTISEMENT

ಜಿಲ್ಲೆಯ ವಿವಿಧೆಡೆ ಇದ್ದ ಅಗ್ನಿಶಾಮಕದಳ ವಾಹನ, ನಗರಸಭೆಯ ನೀರು ಪೂರೈಕೆಯ ಟ್ಯಾಂಕರ್‌ಗಳು, ಸುತ್ತಮುತ್ತಲಿನ ವಿವಿಧ ಖಾಸಗಿ ಕಂಪನಿಗಳು ಅಗ್ನಿಶಾಮಕ ವಾಹನಗಳು ಬಂದು ಕಾರ್ಯಾಚರಣೆ ನಡೆಸಿದ್ದರಿಂದ ಬೆಂಕಿ ಮತ್ತಷ್ಟು ವ್ಯಾಪಿಸಿ ಹಾನಿಯಾಗುವುದು ನಿಯಂತ್ರಣವಾಯಿತು.

ಸಾರ್ವಜನಿಕರ ನೆರವು:

ಪೇಂಟ್‌ ಅಂಗಡಿಯ ಸಮೀಪದಲ್ಲಿಯೇ ಮೋಟಾರು ಬ್ಯಾಟರಿಗಳು ಮತ್ತು ಎಸ್‌ಬಿಐ ಎಟಿಎಂ ಯಂತ್ರದ ಕೇಂದ್ರವಿತ್ತು. ಘಟನೆ ತಿಳಿಯುತ್ತಿದ್ದಂತೆ ಎಟಿಎಂ ಹಣ ಜಮಾವಣೆ ಮಾಡುವ ಎಜೆನ್ಸಿ ಸಿಬ್ಬಂದಿ ಬಂದು ಹಣ ತೆಗೆದುಕೊಂಡು ಹೋದರು. ಬ್ಯಾಟರಿ ಅಂಗಡಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಯಿತ್ತು. ಬೆಂಕಿಯ ಕಿಡಿ ತಗುಲಿದ್ದರೂ ಇನ್ನಷ್ಟು ಅಪಾಯ ಸಂಭವಿಸುತ್ತಿತ್ತು.

ಆದ್ದರಿಂದ ಅಂಗಡಿಯ ಸಿಬ್ಬಂದಿ ಮತ್ತು ಸಾರ್ವಜನಿಕರು ತಂಡವಾಗಿ ಬ್ಯಾಟರಿಗಳನ್ನು ಅಂಗಡಿಯಿಂದ ಹೊರಗೆ ತಂದು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಿದರು. ಘಟನೆಯನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಅವರನ್ನು ಚೆದುರಿಸಲು ಪೊಲೀಸರು ಪರದಾಡಬೇಕಾಯಿತು. ಕೇಂದ್ರೀಯ ಬಸ್‌ ನಿಲ್ದಾಣದ ಸಮೀಪದಲ್ಲಿಯೇ ಈ ಮಳಿಗೆಗಳು ಇರುವ ಕಾರಣ ಬಸ್‌ ನಿಲ್ದಾಣ ಮುಂಭಾಗ, ಭಾಗ್ಯನಗರದ ಸೇತುವೆ ಮತ್ತು ವರ್ಣೇಕರ್‌ ಕಾಂಪ್ಲೆಕ್ಸ್‌ ಮೇಲಿನಿಂದ ಅಗ್ನಿ ಅವಘಡ ನೋಡುತ್ತಿದ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಹೆಚ್ಚುವರಿ ಎಸ್‌.ಪಿ. ಹೇಮಂತಕುಮಾರ್‌, ಕೊಪ್ಪಳ ತಹಶೀಲ್ದಾರ್‌ ವಿಠ್ಠಲ ಚೌಗುಲಾ, ಇಒ ದುಂಡಪ್ಪ ತುರಾದಿ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ ಸೇರಿದಂತೆ ಅನೇಕರು ಘಟನಾ ಸ್ಥಳದಲ್ಲಿದ್ದರು.

ಕಣ್ಣೀರಿಟ್ಟ ಮಾಲೀಕರು
ಅಗ್ನಿ ಅವಘಡದಲ್ಲಿ ಸಾಕಷ್ಟು ನಷ್ಟವಾದ ಕಾರಣ ಅಂಗಡಿಗಳ ಮಾಲೀಕರು ಕಣ್ಣೀರಿಟ್ಟರು. ತಮ್ಮ ಕಣ್ಣೆದುರು ಸಾಮಗ್ರಿ ಸುಟ್ಟು ಕರಕಲಾಗುತ್ತಿದ್ದರೂ ನೋಡಿಕೊಂಡು ಅಸಹಾಯಕರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಣ್ಣೀರು ಹಾಕುತ್ತಿದ್ದವರನ್ನು ಸ್ನೇಹಿತರು ಸಮಾಧಾನ ಪಡಿಸುತ್ತಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಪೂರ್ಣ ಬೆಂಕಿ ಹಾಗೂ ದಟ್ಟ ಹೊಗೆ ನಿಲ್ಲಿಸುವ ತನಕ ಕಾರ್ಯಾಚರಣೆ ನಡೆಸಿದಾಗ ರಾತ್ರಿ ಆಗಿತ್ತು. ಹಾನಿಯ ಪ್ರಮಾಣ ಎಷ್ಟು ಎನ್ನುವುದು ಖಚಿತವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.