ADVERTISEMENT

ಕೊಪ್ಪಳ: ‘ಗರಡಿ’ಗಳಿಗೆ ಬೇಕಿದೆ ಪೈಲ್ವಾನರ ಗತ್ತು

ಪ್ರಮೋದ
Published 18 ಡಿಸೆಂಬರ್ 2023, 7:38 IST
Last Updated 18 ಡಿಸೆಂಬರ್ 2023, 7:38 IST
ದುರಸ್ತಿಗೆ ಕಾದಿರುವ ಕೊಪ್ಪಳದ ಗೌರಿ ಅಂಗಳ ಬಡಾವಣೆಯ ಗರಡಿ ಮನೆಯ ನೋಟ
ದುರಸ್ತಿಗೆ ಕಾದಿರುವ ಕೊಪ್ಪಳದ ಗೌರಿ ಅಂಗಳ ಬಡಾವಣೆಯ ಗರಡಿ ಮನೆಯ ನೋಟ   

ಕೊಪ್ಪಳ: ವಿಜಯನಗರ ಸಾಮ್ರಾಜ್ಯದ ಪ್ರಮುಖ ಭಾಗವೇ ಆಗಿದ್ದ ಜಿಲ್ಲೆಯಲ್ಲಿಯೂ ಕುಸ್ತಿ ಸಲುವಾಗಿ ಸಾಕಷ್ಟು ಗರಡಿ ಮನೆಗಳಿದ್ದವು. ಹೆಸರಾಂತ ಪೈಲ್ವಾನರು ಪ್ರತಿಷ್ಠಿತ ಮೈಸೂರು ದಸರಾದಲ್ಲಿ ಘಟಾನುಘಟಿಗಳನ್ನು ‘ಚಿತ್‌’ ಮಾಡಿದ್ದರು.

ಇಂಥ ಭವ್ಯ ಪರಂಪರೆ ಹಾಗೂ ಇತಿಹಾಸ ಹೊಂದಿರುವ ಕುಸ್ತಿ ಕಲಿಗಳ ‘ಅಖಾಡ’ಗಳು ಕಾಲಕ್ರಮೇಣ ಜಿಲ್ಲೆಯಲ್ಲಿ ಸ್ಮಾರಕಗಳಂತಾಗಿವೆ. ಅವುಗಳ ಪುನರುಜ್ಜೀವನಕ್ಕೆ ಮತ್ತು ಹೊಸ ಪೈಲ್ವಾನರ ಹುಟ್ಟಿಗೆ ಹೊಸ ಕಾರ್ಯಗಳಾಗಬೇಕಾದ ತುರ್ತು ಅಗತ್ಯವಿದೆ.

ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಸರದಾರ ಗಲ್ಲಿ, ತೆಗ್ಗಿನ ಕೇರಿ, ಮಿಟ್ಟಿಕೇರಿ ಹಾಗೂ ದಿಡ್ಡಿಕೇರಿ ಸೇರಿದಂತೆ ಆರು ಕಡೆ ಗರಡಿ ಮನೆಗಳಿವೆ. ಮಿಟ್ಟಿಕೇರಾ ಓಣಿ ಹಾಗೂ ತೆಗ್ಗಿನಕೇರಾ ಓಣಿ ಗರಡಿಗಳು ಮಾತ್ರ ಯೋಗ್ಯ ಸ್ಥಿತಿಯಲ್ಲಿವೆ. ಇನ್ನುಳಿದ ಅಖಾಡಗಳು ನೆಲಕಚ್ಚಿವೆ. ಸ್ಪರ್ಧಾತ್ಮಕತೆ ಅನಿವಾರ್ಯತೆಗೆ ತಕ್ಕಂತೆ ಈಗಿನ ಯುವಜನತೆಗೆ ಆದ್ಯತೆಯೂ ಬದಲಾಗಿರುವ ಕಾರಣ ಕ್ರಿಕೆಟ್‌, ಕುಸ್ತಿ ಹಾಗೂ ಮೊಬೈಲ್‌ ಮುಂಚೂಣಿಗೆ ಬಂದು ಸಾಂಪ್ರದಾಯಿಕ ಕುಸ್ತಿ ‘ಚಿತ್‌’ ಆಗಿದೆ. ಹೀಗಾಗಿ ಚಟುವಟಿಕೆಗಳು ಇಲ್ಲವೇ ಇಲ್ಲ.

ADVERTISEMENT

ದಕ್ಷಿಣ ಭಾರತದ ಕುಂಭಮೇಳ ಎಂದೇ ಹೆಸರಾದ ಗವಿಸಿದ್ಧೇಶ್ವರ ಜಾತ್ರೆ, ದಸರಾ, ಮೊಹರಂ, ಗೊಂಡಬಾಳದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಕರಿಯಮ್ಮನ ಜಾತ್ರೆ, ಕೊಪ್ಪಳ ತಾಲ್ಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಮುಂಗೈ ಕುಸ್ತಿ ಮತ್ತು ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ರಂಗನಾಥ ಸ್ವಾಮಿ ಜಾತ್ರೆಯ ಅಂಗವಾಗಿ ಇತ್ತೀಚಿನ ವರ್ಷಗಳಲ್ಲಿ ಕುಸ್ತಿ ಸ್ಪರ್ಧೆಗಳು ನಡೆದಿದ್ದವು.

ಬೆಳಗಾವಿ, ಧಾರವಾಡ, ದಾವಣಗೆರೆ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯನಗರ ಸಾಮ್ರಾಜ್ಯದ ನೆರೆ ಜಿಲ್ಲೆಯಾದ ಕೊಪ್ಪಳದಲ್ಲಿ ಹಲವು ದಶಕಗಳಿಂದ ಕುಸ್ತಿ ನೆನಪಾಗಿ ಮಾತ್ರ ಉಳಿದಿದೆ. ಕೊಪ್ಪಳದ ಹೆಸರಾಂತ ಪೈಲ್ವಾನ್‌ ಭೀಮಸಿ ಗಾಳಿ ತಮ್ಮ ಯವ್ವನದ ದಿನಗಳಲ್ಲಿ ಸುಮಾರು ಎರಡು ದಶಕಗಳ ಕಾಲ ಸುಮಾರು 300ಕ್ಕೂ ಹೆಚ್ಚು ಕುಸ್ತಿಗಳನ್ನು ಆಡಿದ್ದಾರೆ. ಅವರಿಗೀಗ 69 ವರ್ಷ ವಯಸ್ಸಾದರೂ ಎಲ್ಲಿಯೇ ಸ್ಪರ್ಧೆಗಳು ನಡೆದರೂ ಕುಸ್ತಿ ಹಿಡಿಸುತ್ತಾರೆ.

1977ರಲ್ಲಿ ಮೈಸೂರಿನಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಜಿಲ್ಲೆಯನ್ನು ಪ್ರತಿನಿಧಿಸಿ ಕುಸ್ತಿಯಾಡಿದ್ದರು. ದಸರಾ, ಮೊಹರಂ ಹಾಗೂ ಜಾತ್ರೆ ಸೇರಿದಂತೆ ವಿವಿಧೆಡೆ ಕಾರ್ಯಕ್ರಮಗಳು ನಡೆದರೆ ಈಗಲೂ ಹೋಗುತ್ತಾರೆ. ಪೈಲ್ವಾನರಾದ ಫಕೀರಪ್ಪ ಹೊಸಮನಿ ಹಾಗೂ ಖಾದರಸಾಬ್ ಕುದುರಿಮೋತಿ ಕೂಡ ಅಖಾಡದಲ್ಲಿ ಸಾಧನೆ ಮೆರೆದವರು. 

ಕ್ರೀಡಾ ಇಲಾಖೆಯ ಆಸಕ್ತಿ: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಪೈಲ್ವಾನರು ಮತ್ತು ಕುಸ್ತಿ ಸಂಘದ ಸದಸ್ಯರು ಇತ್ತೀಚೆಗೆ ನಗರದಲ್ಲಿ ಅವಶೇಷಗಳಂತೆ ಉಳಿದಿರುವ ಗರಡಿ ಮನೆಗಳಿಗೆ ಭೇಟಿ ನೀಡಿ ಅವುಗಳ ಪರಿಸ್ಥಿತಿ ಪರಿಶೀಲಿಸಿದ್ದರು.

ಹಲವು ಗರಡಿ ಮನೆಗಳ ಕಟ್ಟಡಗಳು ದುಸ್ಥಿತಿಗೆ ತಲುಪಿದ್ದರೆ, ಇನ್ನೂ ಕೆಲವು ಅಖಾಡಗಳಿಗೆ ಮೂಲ ಸಲಕರಣೆಗಳು ಬೇಕಾಗಿವೆ. ನವ ಪೈಲ್ವಾನರಿಲ್ಲದೇ ಖಾಲಿ ಮನೆಗಳಂತಿವೆ. ಗೌರಿ ಅಂಗಳದ ಗರಡಿಮನೆಯ ಚಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸೈಲಾನಪೂರ ಓಣಿಯ ಸಂಗಟಿ ಗರಡಿ ಮನೆಯನ್ನು ಅಲ್ಲಿಯ ಲಕ್ಷ್ಮಣ್ ಎಂಬುವರು ಹೊಲ ಮಾರಿ ಸ್ವಂತ ಹಣದಿಂದ ಅಖಾಡ ತಯಾರು ಮಾಡಿದ್ದಾರೆ.

ಧ್ವನಿ ಎತ್ತಿದ ಸಂಘ: ಇತ್ತೀಚೆಗೆ ಸ್ವಯಂ ಆಸಕ್ತಿಯಿಂದ ಗರಡಿ ಮನೆಗಳ ಪುನಶ್ಚೇತನಕ್ಕೆ ಕ್ರಮ ವಹಿಸುವಂತೆ ಕ್ರೀಡಾಪ್ರೇಮಿಗಳು ಮತ್ತು ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘದವರು ಧ್ವನಿ ಎತ್ತಿದ್ದಾರೆ. ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ.

‘ಹಲವು ವರ್ಷಗಳ ಹಿಂದೆ ಹಳ್ಳಿಗೊಂದು, ಗಲ್ಲಿಗೊಂದು ಗರಡಿ ಮನೆಗಳನ್ನು ನಿರ್ಮಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಗಿತ್ತು. ಪೈಲ್ವಾನರಿಗೆ ಮಾಸಾಶನ ನೀಡಬೇಕು, ಜಿಲ್ಲೆಯಲ್ಲಿ ನಿರಂತರವಾಗಿ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಬೇಕು ಹಾಗೂ ಕುಸಿದು ಬಿದ್ದಿರುವ ಗರಡಿ ಮನೆಗಳ ಪುನರುಜ್ಜೀವನಕ್ಕೆ ಕ್ರಮ ವಹಿಸಬೇಕು’ ಎಂದು ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘದ ಗೌರವಾಧ್ಯಕ್ಷ ಎಸ್‌.ಎ.ಗಫಾರ್‌ ಆಗ್ರಹಿಸಿದರು.

ಕೊಪ್ಪಳದಲ್ಲಿ ದುರಸ್ತಿಗೆ ಕಾದಿರುವ ಗರಡಿ ಮನೆ
ಕೊಪ್ಪಳದ ದಿಡ್ಡಿಕೇರಾ ಓಣಿಯ ಗರಡಿ ಮನೆ ಹಾಳಾಗಿರುವುದು
ಕೊಪ್ಪಳದ ಗರಡಿ ಮನೆಗಳ ಅವ್ಯವಸ್ಥೆಯನ್ನು ಪರಿಶೀಲಿಸಿದ್ದೇನೆ. ಅವುಗಳ ದುರಸ್ತಿ ಹಾಗೂ ಪೈಲ್ವಾನರಿಗೆ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
ವಿಠ್ಠಲ ಜಾಬಗೌಡರ ಸಹಾಯಕ ನಿರ್ದೇಶಕ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕೊಪ್ಪಳ
ಸರ್ಕಾರದ ನೆರವು ಅಗತ್ಯ
’ ಕೊಪ್ಪಳ ಜಿಲ್ಲೆಯಲ್ಲಿ ಕುಸ್ತಿ ಮತ್ತೆ ಮುಂಚೂಣಿಗೆ ಬರಲು ಸರ್ಕಾರದ ನೆರವು ಅಗತ್ಯವಾಗಿದೆ. ದುರಸ್ತಿಗೆ ಕಾದಿರುವ ಅಖಾಡಗಳನ್ನು ಆದ್ಯತೆ ಮೇರೆಗೆ ಸರಿಪಡಿಸಿ ಸೌಲಭ್ಯಗಳನ್ನು ಒದಗಿಸಬೇಕು. ಆಗ ಮಾತ್ರ ದುಶ್ಚಟದ ದಾಸರಾಗಿರುವ ಯುವಜನತೆಯನ್ನು ಕುಸ್ತಿ ಮೂಲಕ ಸರಿದಾರಿಗೆ ತರಲು ಸಾಧ್ಯವಾಗುತ್ತದೆ. ಬೆಳಗಾವಿ ಹಾಗೂ ದಾವಣಗೆರೆ ಭಾಗದಲ್ಲಿ ನಿರಂತರವಾಗಿ ದೊಡ್ಡಮಟ್ಟದಲ್ಲಿ ನಡೆಯುವ ಕುಸ್ತಿ ಸ್ಪರ್ಧೆಗಳು ನಮ್ಮಲ್ಲಿಯೂ ಆಯೋಜಿಸಬೇಕಾಗಿದೆ. ಮುಂದಿನ ತಿಂಗಳು ನಡೆಯುವ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಕುಸ್ತಿ ಸ್ಪರ್ಧೆ ಹಮ್ಮಿಕೊಳ್ಳಲಾಗುವುದು ಎಂದು ಹಿರಿಯ ಪೈಲ್ವಾನ ಭೀಮಸಿ ಗಾಳಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.