ADVERTISEMENT

ಕುಷ್ಟಗಿ | ಕಳಚುತ್ತಿದೆ ಚಾವಣಿ ಪದರು: ಆತಂಕದಲ್ಲಿ ಮಕ್ಕಳು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 5:00 IST
Last Updated 19 ಡಿಸೆಂಬರ್ 2023, 5:00 IST
<div class="paragraphs"><p>ಕುಷ್ಟಗಿ ತಾಲ್ಲೂಕಿನ ಕೆ.ಬೋದೂರು ತಾಂಡಾದಲ್ಲಿನ ಶಾಲಾ ಕಟ್ಟಡದ ಚಾವಣಿಯ ಪದರು ಕಳಚಿರುವುದು</p></div>

ಕುಷ್ಟಗಿ ತಾಲ್ಲೂಕಿನ ಕೆ.ಬೋದೂರು ತಾಂಡಾದಲ್ಲಿನ ಶಾಲಾ ಕಟ್ಟಡದ ಚಾವಣಿಯ ಪದರು ಕಳಚಿರುವುದು

   

ಕುಷ್ಟಗಿ: ತಾಲ್ಲೂಕಿನ ಕೆ.ಬೋದೂರು ತಾಂಡಾದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಠಡಿಯ ಚಾವಣಿಯ ಸಿಮೆಂಟ್‌ ಪದರ ಕಳಚುತ್ತಿದ್ದು ಮಕ್ಕಳು ಮತ್ತು ಶಿಕ್ಷಕರು ಅಭದ್ರತೆಯಲ್ಲಿ ಕಾಲಕಳೆಯುವಂತಾಗಿದೆ.

ಒಂದೂವರೆ ದಶಕದ ಹಿಂದಷ್ಟೇ ಶಾಲಾ ಕೊಠಡಿ ನಿರ್ಮಾಣಗೊಂಡಿದ್ದು ಕಳಪೆ ಕಾಮಗಾರಿಯಿಂದಾಗಿ ಕೆಲ ವರ್ಷಗಳಲ್ಲೇ ಸಿಮೆಂಟ್‌ ಪದರ ಕಳಚುತ್ತಿದೆ. ಇದೇ ಕೊಠಡಿಯಲ್ಲಿ ತರಗತಿ ನಡೆಯುತ್ತಿದ್ದು ಯಾವ ವೇಳೆಯಲ್ಲಿ ಸಿಮೆಂಟ್‌ ಮಕ್ಕಳ ತಲೆಯ ಮೇಲೆ ಬೀಳುತ್ತದೆಯೋ ಎಂಬ ಆತಂಕ ಪಾಲಕರು ಮತ್ತು ಶಿಕ್ಷಕರನ್ನು ಕಾಡುತ್ತಿದೆ.

ADVERTISEMENT

1ರಿಂದ 5ನೇ ತರಗತಿಯವರೆಗೆ 201 ದಾಖಲಾತಿ ಇದ್ದು, ಈ ಪೈಕಿ 170-190ರ ವರೆಗೂ ಮಕ್ಕಳ ಹಾಜರಾತಿ ಇದೆ. ಒಟ್ಟು ಐದು ಕೊಠಡಿಗಳು ಇದ್ದು ನಾಲ್ಕು ಉತ್ತಮ ಸ್ಥಿತಿಯಲ್ಲಿವೆ. ಒಂದರ ಚಾವಣಿ ಪದರು ಉದುರುತ್ತಿರುವುದು ಕಂಡುಬಂದಿದೆ. ಬಿಸಿಯೂಟದ ಆಹಾರ ಸಾಮಗ್ರಿ ಮತ್ತು ಶಾಲೆಯ ಕಚೇರಿಗೆ ಒಂದು ಕಟ್ಟಡ ಬಳಕೆಯಾಗುತ್ತಿದೆ. ಅಭದ್ರ ಚಾವಣಿ ಸೇರಿ ಉಳಿದ ನಾಲ್ಕು ಕೊಠಡಿಗಳಲ್ಲಿ ಐದೂ ತರಗತಿಗಳ ಮಕ್ಕಳನ್ನು ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ.

ಪ್ರಸ್ತಾವನೆ: ಅಭದ್ರತೆಯಲ್ಲಿರುವ ಕೊಠಡಿಯನ್ನು ಈಗಾಗಲೇ ಎರಡು ಮೂರು ಬಾರಿ ದುರಸ್ತಿ ಮಾಡಲಾಗಿದೆ. ಹಾಗಾಗಿ ಎರಡು ಹೊಸ ಕೊಠಡಿಗಳ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಇನ್ನೂ ಮಂಜೂರಾಗಿಲ್ಲ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಿರಿಯ ಶಾಲೆ ದಾಖಲಾತಿಯಲ್ಲಿ ಹಿರಿಮೆ

ತಾಲ್ಲೂಕಿನ ಕೆಲ ಹಿರಿಯ ಪ್ರಾಥಮಿಕ ಶಾಲೆಗಳಾದರೂ ಕಡಿಮೆ ಮಕ್ಕಳ ದಾಖಲಾತಿ ಹೊಂದಿರುವ ಶಾಲೆಗಳಿವೆ. ಆದರೆ ಕೆ.ಬೋದೂರು ತಾಂಡಾದಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿದ್ದರೂ 200 ಮಕ್ಕಳ ದಾಖಲಾತಿ ಇದೆ. ಮಕ್ಕಳ ಹಾಜರಾತಿ ಪ್ರಮಾಣವೂ ಉತ್ತಮವಾಗಿದೆ. ಎಲ್ಲ ಮಕ್ಕಳು ಪರಿಶಿಷ್ಟ (ಲಂಬಾಣಿ) ಸಮುದಾಯಕ್ಕೆ ಸೇರಿದ ಕೂಲಿಕಾರರ ಮಕ್ಕಳಾಗಿದ್ದು ಮಕ್ಕಳನ್ನು ಶಾಲೆಗೆ ಕಳಿಸಬೇಕೆಂಬ ಆಸಕ್ತಿ ಹೆಚ್ಚಿನ ಪಾಲಕರಲ್ಲಿದೆ. ಈ ಶಾಲೆಯ ಮಕ್ಕಳ ಬಹುತೇಕ ಪಾಲಕರು ಕಬ್ಬು ಕಟಾವಿಗೆ ದೂರದ ಸ್ಥಳಗಳಿಗೆ ಗುಳೆ ಹೋಗುತ್ತಿದ್ದರೂ ಮಕ್ಕಳನ್ನು ಮಾತ್ರ ಶಾಲೆಗೆ ಕಳಿಸುತ್ತಿರುವುದು ಇಲ್ಲಿಯ ಮತ್ತೊಂದು ವಿಶೇಷವಾಗಿದೆ. ಆದರೆ ಚಾವಣಿ ಪದರ ಕಳಚುವ ಭಯದಿಂದ ಸಣ್ಣ ಮಕ್ಕಳನ್ನು ಶಾಲೆಗೆ ಕಳಿಸಲು ಕೆಲ ಪಾಲಕರು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಎಸ್‌ಡಿಎಂಸಿ ಉಪಾಧ್ಯಕ್ಷ ಅಮರೇಶ ರಾಠೋಡ.

ಹೊಸ ಕಟ್ಟಡಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಚಾವಣಿ ಪದರು ಕಳಚುವ ಕೊಠಡಿಯಲ್ಲಿ ತರಗತಿ ನಡೆಸುತ್ತೇವೆ.
ವೀರಭದ್ರಗೌಡ, ಮುಖ್ಯಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.