ADVERTISEMENT

ಕೊಪ್ಪಳ| ‘ಗಾಂಧಿ ಪುರಸ್ಕಾರ’ ಗ್ರಾಮಗಳ ಕಥೆ, ವ್ಯಥೆ

ಸಮಗ್ರ ಅಭಿವೃದ್ಧಿ ಕಾಣದ ಗ್ರಾಮ ಪಂಚಾಯಿತಿಗಳು, ಆದರೂ ಪ್ರಶಸ್ತಿ ಗರಿ; ಅಭಿವೃದ್ಧಿಗೆ ಬೇಕಿದೆ ದೂರದೃಷ್ಟಿ

ಪ್ರಮೋದ
Published 3 ಅಕ್ಟೋಬರ್ 2022, 19:30 IST
Last Updated 3 ಅಕ್ಟೋಬರ್ 2022, 19:30 IST
ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣದ ಹಂತದಲ್ಲಿರುವ ದ್ರವ ತ್ಯಾಜ್ಯ ನಿರ್ವಹಣೆ ಯೋಜನಾ ಘಟಕ
ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣದ ಹಂತದಲ್ಲಿರುವ ದ್ರವ ತ್ಯಾಜ್ಯ ನಿರ್ವಹಣೆ ಯೋಜನಾ ಘಟಕ   

ಕೊಪ್ಪಳ: ಜಿಲ್ಲಾ ಕೇಂದ್ರದಿಂದ ಕೇವಲ 18 ಕಿ.ಮೀ. ದೂರದಲ್ಲಿರುವ ತಾಲ್ಲೂಕಿನ ಹಿಟ್ನಾಳ ಗ್ರಾಮದಲ್ಲಿ ಒಂದು ಸುತ್ತು ಹಾಕಿದರೆ ಮೊದಲು ಮಿರಮಿರನೆ ಹೊಳೆಯುವ ಕಾಂಕ್ರೀಟ್‌ ರಸ್ತೆಗಳು ಕಣ್ಣಿಗೆ ರಾಚುತ್ತವೆ.

ದೊಡ್ಡದಾದ ಗ್ರಾಮ ಪಂಚಾಯಿತಿ ಕಾರ್ಯಾಲಯ, ಸೆಗಣಿ ಗೊಬ್ಬರ ಹಾಕಲು ಕಾಲುವೆ ಪಕ್ಕದಲ್ಲಿ ವ್ಯವಸ್ಥೆ, ಮಾರುಕಟ್ಟೆ ಸೌಲಭ್ಯ, ದೊಡ್ಡದಾದ ಚರಂಡಿ ಹೀಗೆ ಎಲ್ಲವೂ ಗಮನ ಸೆಳೆಯುತ್ತವೆ. ಸುತ್ತು ಹಾಕುತ್ತ ಮುಂದೆ ಸಾಗಿದರೆ ಅಲ್ಲಿನ ಅವ್ಯವಸ್ಥೆ ಮತ್ತು ಅಸ್ವಚ್ಛತೆಯ ಹೊಲಸು ವಾಸನೆ ಮೂಗಿಗೆ ರಾಚುತ್ತದೆ.

ಒಂದನೇ ವಾರ್ಡ್‌ನಲ್ಲಿರುವ ಖಾಲಿ ಜಾಗದಲ್ಲಿ ಸೆಗಣಿ ಹಾಗೂ ಕಸ ಹಾಕುತ್ತಾರೆ. ಕಸದ ತೊಟ್ಟೆಯಂತಾಗಿರುವ ಜಾಗದ ಅಕ್ಕಪಕ್ಕದಲ್ಲಿಯೇ ಮನೆಗಳಿವೆ. 20ಕ್ಕೂ ಹೆಚ್ಚು ಮಕ್ಕಳಿರುವ ಅಂಗನವಾಡಿ ಕೇಂದ್ರ ‘ಕಸದ ತೊಟ್ಟಿ’ಗೆ ಅಂಟಿಕೊಂಡೇ ಇದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಸ್ವಗ್ರಾಮವೂ ಆದ ಇಲ್ಲಿ ಗಬ್ಬುವಾಸನೆ, ಸೊಳ್ಳೆಗಳ ಹಾವಳಿ ಮಾಮೂಲು. ಹೀಗಾಗಿ ಇಲ್ಲಿರುವ ಮನೆಗಳ ಸದಸ್ಯರು ಮೇಲಿಂದ ಮೇಲೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವುದು, ಅನಾರೋಗ್ಯದಿಂದ ಬಳಲುವುದು ಸಾಮಾನ್ಯವಾಗಿ ಬಿಟ್ಟಿದೆ. ಮಳೆ ಬಂದರಂತೂ ಚರಂಡಿಯೇ ಮನೆಗೆ ಬಂದಂತೆ!

ADVERTISEMENT

ಈ ವಾರ್ಡ್‌ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಕುಟುಂಬಗಳ ಮಹಿಳೆಯರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಸಾರ್ವಜನಿಕ ಶೌಚಾಲಯ ಕಟ್ಟಲಾಗಿದೆ. ಆದರೆ, ಒಳಗಡೆ ಹೋಗಲೂ ಸಾಧ್ಯವಾಗದಷ್ಟು ಕೆಟ್ಟ ವಾಸನೆ ಅಲ್ಲಿ ಬರುತ್ತದೆ. ಹೀಗಾಗಿ ಬಯಲು ಶೌಚವೇ ನಮಗೆ ಗತಿ. ಕತ್ತಲಾಗುವುದನ್ನೇ ಕಾದು ನೋಡಿ ಹೊಲಗಳ ಕಡೆ ಶೌಚಾಲಯಕ್ಕಾಗಿ ಹೋಗಬೇಕಾಗಿದೆ ಎಂದು ಅಲ್ಲಿನ ಮಹಿಳೆಯರು ಗ್ರಾಮಕ್ಕೆ ಭೇಟಿ ನೀಡಿದ್ದ ’ಪ್ರಜಾವಾಣಿ’ ತಂಡದ ಎದುರು ನೋವು ತೋಡಿಕೊಂಡರು.

ನಿಮ್ಮ ಊರಿಗೆ ‘ಗಾಂಧಿ ಗ್ರಾಮ ‍ಪುರಸ್ಕಾರ’ ಬಂದಿದೆಯಲ್ಲ ಎನ್ನುವ ಪ್ರಶ್ನೆಗೆ ‘ಊರು ಪ್ರವೇಶಿಸಿದಾಗ ಕಾಣುವ ಕಾಂಕ್ರೀಟ್‌ ರಸ್ತೆಗಳನ್ನೇ ದೊಡ್ಡ ಅಭಿವೃದ್ಧಿ ಎಂದುಕೊಂಡು ಪ್ರಶಸ್ತಿಗೆ ಅರ್ಜಿ ಹಾಕಿದ್ದಾರೆ. ನಾವಿಲ್ಲಿ ಕಸದ ತೊಟ್ಟೆಯ ನಡುವೆ ಬದುಕುತ್ತಿದ್ದೇವೆ. ಪ್ರಶಸ್ತಿ ಕೊಡುವವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರೆ ವಾಸ್ತವ ಏನೆಂಬುದು ಗೊತ್ತಾಗುತ್ತಿತ್ತು’ ಎಂದು ಮೊದಲ ವಾರ್ಡ್‌ನ ಜನ ಆಕ್ರೋಶ ಹೊರಹಾಕಿದರು.

ಈ ಕುರಿತು ಗ್ರಾಪಂ ಅಧ್ಯಕ್ಷೆ ಶರಣವ್ವ ‘ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಅದಕ್ಕಾಗಿ ಪ್ರಶಸ್ತಿ ಕೊಟ್ಟಿದ್ದಾರೆ. ಮೊದಲ ವಾರ್ಡ್‌ನಲ್ಲಿ ಖಾಲಿ ಜಾಗದಲ್ಲಿ ಕಸ ಹಾಕಲಾಗಿತ್ತು. ಅದನ್ನು ಸ್ವಚ್ಛಗೊಳಿಸಲಾಗಿದೆ. ಉಳಿದವುಗಳನ್ನೂ ಸ್ವಚ್ಛ ಮಾಡಲಾಗುವುದು’ ಎಂದರು.

ಕಿಶನ್‌ರಾವ್‌ ಕುಲಕರ್ಣಿ

ಹನುಮಸಾಗರ: ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಹನುಮಸಾಗರ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿದೆ.

ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ ಇಲ್ಲಿ ನಾಲ್ಕಾರು ವರ್ಷಗಳಿಂದ ಅಚ್ಚುಕಟ್ಟಾಗಿ ಎರಡು ವಾಹನಗಳ ಮೂಲಕ ಕಸ ವಿಲೇವಾರಿ ನಡೆಯುತ್ತಿದೆ. ಸಾರ್ವಜನಿಕರಿಗೆ ಸ್ವಚ್ಛತೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳು, ಕುಡಿಯುವ ನೀರಿನ ವ್ಯವಸ್ಥೆ ಉತ್ತಮವಾಗಿರುವುದು ಕಂಡು ಬರುತ್ತಿದೆ.

ವಿವಿಧ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ, ಹೈಟೆಕ್ ಆಟದ ಮೈದಾನ, ಮನೆಗಳಿಗೆ ವೈಯಕ್ತಿಕ ಶೌಚಾಲಯ, ಮಕ್ಕಳ ಸ್ನೇಹಿ ಅಂಗನವಾಡಿ ಕಟ್ಟಡ, ಸ್ಮಶಾನ ಅಭಿವೃದ್ಧಿ, ಜಲಮೂಲಗಳ ಸಂರಕ್ಷಣೆ, ಬಾಪೂಜಿ ಸೇವಾ ಕೇಂದ್ರದ ಮೂಲಕ ಉತ್ತಮ ಸೇವೆಗಳು, ನರೇಗಾ ಯೋಜನೆಯಲ್ಲಿ ಕೆರೆ ನಿರ್ವಹಣೆಯಂತಹ ಅನೇಕ ಕಾರ್ಯಗಳನ್ನು ಇಲ್ಲಿನ ಗ್ರಾಮ ಪಂಚಾಯಿತಿ ಯಶಸ್ವಿಯಾಗಿ ನಿರ್ವಹಿಸಿದೆ.

ಗ್ರಾಮದಿಂದ ಹೊರ ಬರುವ ಚರಂಡಿ ನೀರನ್ನು ಶುದ್ಧಿಕರಿಸಿ ಭೂಮಿಯಲ್ಲಿ ಇಂಗುವಂತೆ ದ್ರವ ತ್ಯಾಜ್ಯ ನಿರ್ವಹಣೆ ಯೋಜನೆಗಾಗಿ ಸ್ವಚ್ಛಭಾರತ ಮಿಷನ್ ಹಾಗೂ ನರೇಗಾ ಯೋಜನೆಯಡಿಯಲ್ಲಿ ಸುಮಾರು ₹50 ಲಕ್ಷ ವೆಚ್ಚದಲ್ಲಿ ಗ್ರಾಮದ ಹೊರಭಾಗದಲ್ಲಿ ಕಾಮಗಾರಿ ನಡೆದಿದೆ. ಆರಂಭದಲ್ಲಿ ನೀರಿನೊಂದಿಗೆ ಕೊಚ್ಚಿ ಬರುವ ಪ್ಲಾಸ್ಟಿಕ್ ಹಾಗೂ ಕಸವನ್ನು ಸ್ಕ್ರೀನಿಂಗ್ ಮಾಡುವ ವ್ಯವಸ್ಥೆ ಇದೆ. ಮುಂದೆ ಇದೇ ನೀರು ಸೆಲ್ಟರ್ ಮ್ಯಾನೇಜಮೆಂಟ್ ಮೂಲಕ ನಿರ್ವಹಣಾ ಘಟಕದಲ್ಲಿ ಸಂಗ್ರಹವಾಗಿ ಇಂಗುತ್ತದೆ.

ಸವಾಲುಗಳು: ಸಾರ್ವಜನಿಕರು ಈಗಲೂ ಫ್ಲೋರೈಡ್‍ಯುಕ್ತ ನೀರು ಕುಡಿಯುತ್ತಿದ್ದಾರೆ. ಬಹುಗ್ರಾಮ ಕುಡಿಯುವ ನೀರಿನ ಪೂರೈಕೆ ವಿಳಂಬವಾಗಿದ್ದು ಸದ್ಯ ಘಟಕಕ್ಕೆ ಪೂರೈಕೆಯಾಗುತ್ತಿರುವ ಕೃಷ್ಣಾ ನದಿ ನೀರನ್ನೇ ನಲ್ಲಿಗಳಿಗೆ ಪೂರೈಸುವುದು, ವೈಜ್ಞಾನಿಕ ಚರಂಡಿ ನಿರ್ಮಾಣ, ಗುಣಮಟ್ಟದ ಕಾಮಗಾರಿ, ಕಸವಿಲೇವಾರಿ ಮಾಡಲು ಸ್ಥಳೀಯವಾಗಿ ಘನತ್ಯಾಜ್ಯ ವಿಲೇವಾರಿ ಘಟಕ, ಶೌಚಾಲಯ ನಿರ್ಮಾಣದ ಬಳಿಕ ಅವುಗಳ ಮೇಲ್ವಿಚಾರಣೆ ಆಗಬೇಕಿದೆ.

ಮುಷ್ಟೂರು: ಅಭಿವೃದ್ಧಿಗೆ ಮುನ್ನುಡಿ

ಕೆ. ಮಲ್ಲಿಕಾರ್ಜುನ

ಕಾರಟಗಿ: ವಿಭಜಿತ ಗಂಗಾವತಿ ತಾಲ್ಲೂಕಿನ ಮುಷ್ಟೂರು ಗ್ರಾ.ಪಂ. ಕ್ರಿಯಾಶೀಲ ಅಭಿವೃದ್ದಿ ಕೆಲಸದ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಿ, ಜನರ ಅಗತ್ಯ ಸೌಕರ್ಯ ಕಲ್ಪಿಸಲು ಮತ್ತು ಸೇವಾ ಕಾರ್ಯಗಳಲ್ಲಿ ಆದ್ಯತೆ ನೀಡಿದೆ.

ತಾಲ್ಲೂಕಿನಲ್ಲೇ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಿದ ಮೊದಲ ಪಂಚಾಯಿತಿ ಇದಾಗಿದೆ. ಕಸ ವಿಂಗಡಣೆ ಜೊತೆಗೆ ಕಸದ ವಿಲೇವಾರಿಗೆ ವಾಹನದ ವ್ಯವಸ್ಥೆ, ಸಿಬ್ಬಂದಿ ಮನಗೆದ್ದು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಪ್ರಥಮಾದ್ಯತೆ ನೀಡಿದೆ. ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದು, ಕಟ್ಟಡ ನಿರ್ಮಿಸಿಕೊಡಲು ಮುಂದಾಗಿದೆ.

ಕೋವಿಡ್‌ ಸಂರ್ಭದಲ್ಲಿ ಕೇಂದ್ರ ತೆರೆದು, ಸ್ವಚ್ಛತೆಯ ಜೊತೆಗೆ ಷರತ್ತುಗಳನ್ನು ಪಾಲಿಸಿ ಕೋವಿಡ್‌ ಪೀಡಿತರ ಆರೈಕೆಯನ್ನು ಅಚ್ಚುಕಟ್ಟಾಗಿ ಮಾಡಿ ಗಮನ ಸೆಳೆದಿದೆ. ಅಭಿವೃದ್ದಿ, ಕ್ರಿಯಾಶೀಲತೆ, ನಿರ್ವಹಣೆ, ಸೇವೆ ಮೊದಲಾದ ಅಂಶಗಳನ್ನು ಪರಿಗಣಿಸಿ ಪುರಸ್ಕಾರ
ಘೋಷಣೆಯಾಗಿದೆ.

ಪಂಚಾಯಿತಿ ಎಂದರೆ ಬರಿ ಕಿರಿ, ಕಿರಿ ಅಧಿಕ. ಅನಾವಶ್ಯಕವಾಗಿ ಕೆಲವರು ಮಾಹಿತಿ ಹಕ್ಕು ಚಲಾಯಿಸುವುದು, ಅಭಿವೃದ್ದಿಗೆ ತಡೆಯಾಗುವುದು ಹೀಗೆ ಎಲ್ಲಾ ರೀತಿಯ ಅಡ್ಡಿಯಾಗುವುದಕ್ಕೆ ಖ್ಯಾತಿ ಪಡೆದಿತ್ತು. ಆದಿಲ್‌ ಪಾಶಾ ಅಧ್ಯಕ್ಷರಾದ ಬಳಿಕ ವಾತಾವರಣ ಬದಲಾಗಿದೆ ಎನ್ನುತ್ತಾರೆ ಗ್ರಾಮಸ್ಥ ದೇವಣ್ಣ.

ಎಲ್ಲರೂ ಅಭಿವೃದ್ದಿ ವಾತಾವರಣ ಕಲ್ಪಿಸಿದ್ದಾರೆ. ಜನರಿಗೆ ಮುಖ್ಯವಾಗಿ ಗಾಳಿ, ಬೆಳಕು, ನೀರು, ರಸ್ತೆ ಸೌಲಭ್ಯ ಕಲ್ಪಿಸುವುದು ಕರ್ತವ್ಯ ಎಂದರಿತು ಕೆಲಸ ಮಾಡಲು ಗ್ರಾ.ಪಂ. ಮುಂದಾದರೆ ನಮಗೆ ಸಾಕು. ಈಚೆಗೆ ಪಂಚಾಯಿತಿ ಜನರಿಗೆ ಸ್ಪಂದಿಸಿ, ಕೆಲಸ ಮಾಡುತ್ತಿದೆ ಎನ್ನುತ್ತಾರೆ ಗ್ರಾಮದ ಯುವಕರಾದ ನಾಗರಾಜ್‌, ವೀರೇಶ.

ಕೊಳೆಗೇರಿಯಂತಿರುವ ಗ್ರಾಮಕ್ಕೆ ಗಾಂಧಿ ಪುರಸ್ಕಾರ!

ಉಮಾಶಂಕರ ಹಿರೇಮಠ

ಯಲಬುರ್ಗಾ: ಪ್ರಶಸ್ತಿಗೆ ಬೇಕಾದ ಅರ್ಹತೆಯಾಗಲಿ, ಮಾನದಂಡಗಳಾಗಲಿ ಇಲ್ಲದ ಕೊಳೆಗೇರಿ ಪ್ರದೇಶದಂತಿರುವ ತುಮ್ಮರಗುದ್ದಿ ಗ್ರಾಮಕ್ಕೆ ಗಾಂಧಿ ಪುರಸ್ಕಾರಕ್ಕೆ ಗೌರವ ಲಭಿಸಿದೆ!

ಗ್ರಾಮದಲ್ಲಿ ಅಚ್ಚಾಕಟ್ಟಾದ ಚರಂಡಿಯಾಗಲಿ, ಸಿಮೆಂಟ್ ರಸ್ತೆಯಾಗಲಿ, ಶೌಚಾಲಯವಾಗಲಿ ಶುದ್ಧ ನೀರಿನ ಘಟಕವಾಗಲಿ ಯಾವೊಂದು ಸರಿಯಿಲ್ಲ. ತಾಲ್ಲೂಕು ಕೇಂದ್ರ ಯಲಬುರ್ಗಾದಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ತುಮ್ಮರಗುದ್ದಿಯು ಪಂಚಾಯಿತಿ ಕಟ್ಟಡದ ಹಿಂದೆ ಇರುವ ಶುದ್ಧನೀರಿನ ಘಟಕ ಸಾರ್ವಜನಿಕ ಮೂತ್ರಾಲಯವಾಗಿದೆ. ಕಚೇರಿ ಪಕ್ಕದ ರಸ್ತೆಯು ಸಾರ್ವಜನಿಕ ಬಯಲು ಶೌಚಾಲಯವಾಗಿದೆ.

ಗ್ರಾಮದ ಶೇ 90ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬಯಲು ಬಹಿರ್ದೆಸೆಗೆ ಹೋಗುವ ಈ ಗ್ರಾಮದ ದಾಸರ ಕಾಲೊನಿಯಲ್ಲಿ ಮೂಗು ಮುಚ್ಚಿಕೊಂಡೇ ಹೋಗಬೇಕು. ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿದ್ದ ಕೆರೆಯ ಮುಂದಿನ ಓಣಿಯಲ್ಲಿ ರಸ್ತೆಯಿಲ್ಲದೇ ಮಣ್ಣಿನ ರಾಡಿಯಲ್ಲಿಯೇ ಸಂಚಾರ ಅನಿವಾರ್ಯವಾಗಿದೆ. ಈಚೆಗೆ ನಿರ್ಮಾಣವಾದ ಸಿಮೆಂಟ್ ರಸ್ತೆಯ ಮೇಲೆಯೇ ಸಾಕಷ್ಟು ನೀರು ನಿಂತು ದುರ್ನಾತ ಬೀರುವ ಹಾಗೂ ಸೊಳ್ಳೆಗಳ ಉತ್ಪತ್ತಿ ತಾಣವಾಗಿವೆ.

ಚರಂಡಿಯಿಲ್ಲದೆ ರಸ್ತೆ ಪಕ್ಕದಲ್ಲಿಯೇ ತೆರೆದ ಕಾಲುವೆಯಂತಿರುವ ಜಾಗದಲ್ಲಿಯೇ ದಿನಬಳಕೆ ನೀರು ಹರಿಯುತ್ತಿದ್ದು, ಅವುಗಳು ಹೋಗಿ ತಗ್ಗು ಪ್ರದೇಶದಲ್ಲಿ ನಿಂತು ಗ್ರಾಮಸ್ಥರ ಅನಾರೋಗ್ಯಕ್ಕೆ ಕಾರಣವಾಗುತ್ತಿವೆ. ಸರಿಯಾದ ನಿರ್ವಹಣೆಯಾಗಲಿ, ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಹಾಗೂ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳಲ್ಲಿಯೂ ಕೂಡಾ ಅಭಿವೃದ್ಧಿ ಪರಿಕಲ್ಪನೆ ಇಲ್ಲದಿರುವುದೇ ಗ್ರಾಮಗಳು ಕೊಳಗೇರಿಯಂತಾಗುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ಸ್ವಚ್ಛತೆ ಬಗ್ಗೆ ಸಾಕಷ್ಟು ಪ್ರಚಾರಗಿಟ್ಟಿಸಿಕೊಳ್ಳುತ್ತಿರುವ ಅಧಿಕಾರಿಗಳು ಕೇವಲ ಬಾರಿಗೆ ಹಿಡಿದು ಪೋಟೊ ತೆಗೆಯಿಸಿಕೊಳ್ಳಲು ಮಾತ್ರ ಸೀಮಿತರಾಗಿದ್ದಾರೆ. ಅಧಿಕಾರಿಗಳು ಗ್ರಾಮದ ಎಲ್ಲಾ ಕಡೆ ಓಡಾಡಿದರೆ ವಾಸ್ತವ ಅರ್ಥವಾಗುತ್ತದೆ. ಗ್ರಾಮಸ್ಥರ ಸಹಕಾರ ಬಯಸುವ ಅಧಿಕಾರಿಗಳು ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗದಾಗಿದೆ’ ಎಂದು ಗ್ರಾಮದ ಪರಸಪ್ಪ ಕೋಡಿಕೊಪ್ಪ, ಕಳಕೇಶ, ಶರಣಬಸಪ್ಪ ಪ್ರಶ್ನಿಸಿದರು.

***

ಸದಸ್ಯರ ಸಹಕಾರ, ಅಭಿವೃದ್ಧಿ ಅಧಿಕಾರಿಗಳ ದೂರದೃಷ್ಟಿಕೋನದಿಂದ ಪ್ರಶಸ್ತಿ ಲಭಿಸಿದೆ. ಗ್ರಾಮಾಭಿವೃದ್ಧಿ ಉದ್ದೇಶ ಇಟ್ಟುಕೊಂಡು ಮಾಡಿರುವ ನಮ್ಮ ಕೆಲಸಗಳು ಪ್ರಶಸ್ತಿ ದೊರಕುವಷ್ಟರ ಮಟ್ಟಿಗೆ ಬೆಳಕು ಕಂಡಿರುವುದು ಸಂತಸ ತಂದಿದೆ.

ಶಂಕ್ರಮ್ಮ ನಿರ್ವಾಣಿ, ಗ್ರಾ.ಪಂ ಅಧ್ಯಕ್ಷರು, ಹನುಮಸಾಗರ

***
ತಾಲ್ಲೂಕಿನಲ್ಲಿಯೇ ನಮ್ಮದು ದೊಡ್ಡ ಪಂಚಾಯಿತಿಯಾಗಿದೆ. ಇದನ್ನು ಮಾದರಿಯಾಗಿಸುವ ಗುರಿ ಹೊಂದಲಾಗಿದೆ. ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಆತ್ಮತೃಪ್ತಿ ನಮಗಿದೆ.

- ನಿಂಗಪ್ಪ ಮೂಲಿಮನಿ, ಪಿಡಿಒ, ಹನುಮಸಾಗರ

***
10 ವರ್ಷಗಳ ಹಿಂದೆ ಆಗದ ಕೆಲಸ ಈಗ ಮಾಡಿದ ತೃಪ್ತಿ ನನಗಿದೆ. ಎಲ್ಲಾ ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರು ಸಹಕರಿಸುತ್ತಿರುವುದರಿಂದ ಇದೆಲ್ಲ ಸಾಧ್ಯವಾಗಿದೆಯಲ್ಲದೇ ಮತ್ತಷ್ಟು ಅಭಿವೃದ್ದಿಗೆ ಉತ್ಸಾಹ, ಉತ್ತೇಜನ ದೊರಕಿದೆ.

- ಆದಿಲ್‌ ಪಾಶಾ, ಅಧ್ಯಕ್ಷ, ಮುಷ್ಟೂರ ಗ್ರಾ.ಪಂ.

***

ಮೇಲಧಿಕಾರಿಗಳು, ಸಿಬ್ಬಂದಿ ಮುಖ್ಯವಾಗಿ ಜನರ ಸಹಕಾರದೊಂದಿಗೆ ಕೆಲಸ ಮಾಡಿದ ತೃಪ್ತಿಯಲ್ಲಿದ್ದ ನಮಗೆ 3 ತಾಲ್ಲೂಕಿನಲ್ಲಿಯೇ ನಮ್ಮ ಪಂಚಾಯಿತಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ನಮ್ಮೆಲ್ಲರ ಉತ್ಸಾಹ ಇಮ್ಮಡಿಗೊಳಿಸಿದೆ.

- ಗುರುದೇವಮ್ಮ, ಅಭಿವೃದ್ದಿ ಅಧಿಕಾರಿ

***
20 ವರ್ಷಗಳಿಂದ ಒಂದನೇ ವಾರ್ಡ್‌ನಲ್ಲಿದ್ದೇನೆ. ನಿತ್ಯ ಮನೆ ಎದುರು ಇರುವ ತಿಪ್ಪೆ ನೋಡಿಕೊಂಡೇ ಬದುಕಬೇಕು. ಹಾವು, ಚೇಳು ಬರುವುದು, ಅನಾರೋಗ್ಯ ಕಾಡುವುದು ಮಾಮೂಲಾಗಿದೆ.

- ಶಾಂತಮ್ಮ, ಹಿಟ್ನಾಳ ಗ್ರಾಮದ ನಿವಾಸಿ

***
ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೇಳಿ ಸಾಕಾಗಿದೆ. ಏನೂ ಪ್ರಯೋಜನವಾಗುವುದಿಲ್ಲ ಎನ್ನುವುದೂ ಖಾತ್ರಿಯಾಗಿದೆ.

- ಯಮನೂರುಸಾಬ್‌, ಹಿಟ್ನಾಳ ಗ್ರಾಮದ ನಿವಾಸಿ

***
ಬಯಲು ಬಹಿರ್ದೆಸೆ ಬಗ್ಗೆ ಸಾಕಷ್ಟು ಅರಿವು ಮೂಡಿಸಲಾಗುತ್ತಿದೆ, ಕಚೇರಿ ಪಕ್ಕದಲ್ಲಿಯೇ ಮಲ ಮೂತ್ರ ಮಾಡುತ್ತಿದ್ದಾರೆ, ಬದಲಾವಣೆಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ.

- ಸೋಮಪ್ಪ ಪೂಜಾರ, ಪಿಡಿಒ, ತುಮ್ಮರಗುದ್ದಿ

***
ಶೌಚಾಲಯ ಕಟ್ಟಿಸಿಕೊಂಡು ಉಪಯೋಗಿಸಿಕೊಳ್ಳುವುದು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಹೇಳುತ್ತಿದ್ದೇವೆ, ಆದರೂ ಯಾರು ಕೇಳುತ್ತಿಲ್ಲ, ಜನರಲ್ಲಿಯೇ ತಿಳಿವಳಿಕೆ ಬರಬೇಕಾಗಿದೆ.

- ನಿಂಗವ್ವ ಬಾಳಪ್ಪ ತಳವಾರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ, ತುಮ್ಮರಗುದ್ದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.