ಕೊಪ್ಪಳ: ಒಂದು ವಾರದ ಅವಧಿಯಲ್ಲಿ ಜಿಲ್ಲೆಯ ಹಲವು ಕಡೆ ಅಲ್ಪ ಪ್ರಮಾಣದಲ್ಲಿ ಮಳೆ ಸುರಿದರೂ ಬಿಸಿಲಿನ ಪ್ರಮಾಣ ಕೂಡ ದಾಖಲೆ ಲೆಕ್ಕದಲ್ಲಿ ಏರಿಕೆಯಾಗುತ್ತಲೆ ಇದೆ.
ಜನರು ಬಿಸಿಲು, ಅರೆಝಳ ಕಡಿಮೆ ಮಾಡಿಕೊಳ್ಳಲು ತಂಪು ಪಾನೀಯ, ಎಳೆನೀರು, ಮಜ್ಜಿಗೆ ಮೊರೆ ಹೋಗುತ್ತಿದ್ದಾರೆ. ಬಿಸಿಲಿನ ಪರಿಣಾಮ ರಾಜಕೀಯ ಪಕ್ಷಗಳು ಮತ್ತು ಚುನಾವಣೆಯ ಮೇಲೂ ಆಗಿದ್ದು ಕಾರ್ಯಕರ್ತರು ಹುಮ್ಮಸ್ಸಿನಿಂದ ರಾಜಕೀಯ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಅನಿವಾರ್ಯವಾಗಿ ಆಯಾ ಪಕ್ಷಗಳ ಕಾರ್ಯಕರ್ತರಷ್ಟೇ ಕಾಣಿಸಿಕೊಳ್ಳುತ್ತಿದ್ದಾರೆ.
ನಗರದಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಮತ್ತು ಕಾಂಗ್ರೆಸ್ ಸಮಾವೇಶಗಳ ವೇಳೆ ಜನ ಮರದ ನೆರಳಿನಲ್ಲಿ ಆಶ್ರಯ ಪಡೆದಿದ್ದು, ನೀರು ಹಾಗೂ ಮಜ್ಜಿಗೆಗಾಗಿ ಮುಗಿಬೀಳುತ್ತಿರುವ ಚಿತ್ರಣ ಸಾಮಾನ್ಯವಾಗಿದೆ.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿಯಂತೆ ಏ. 18ರಿಂದ ಬೆಳಿಗ್ಗೆ 8.30ರಿಂದ 19ರ ತನಕದ ಅವಧಿಯಲ್ಲಿ 43.1 ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಜಿಲ್ಲೆಯ ಈ ವರ್ಷದ ಹೆಚ್ಚಿನ ತಾಪವಾಗಿದೆ.
ಗಂಗಾವತಿ ತಾಲ್ಲೂಕಿನ ಆನೆಗೊಂದಿ, ಸಂಗಾಪುರ, ಮಲ್ಲಾಪುರ, ಸಾಣಾಪುರ ಭಾಗದಲ್ಲಿ 43.1, ಕಾರಟಗಿ ವ್ಯಾಪ್ತಿಯ ಬೇವಿನಹಾಳ, ಚೆಲ್ಲೂರ, ಹುಳ್ಕಿಹಾಳ, ಮರ್ಲಾನಹಳ್ಳಿ, ಯರಡೋಣ, ಬೂದಗುಂಪಾ, ಮೈಲಾಪುರದಲ್ಲಿ 42.6 ಮತ್ತು ಗಂಗಾವತಿ ತಾಲ್ಲೂಕಿನ ಚಿಕ್ಕಬೆಣಕಲ್, ವೆಂಕಟಗಿರಿ, ಕೆಸರಟ್ಟಿ, ಬಸವಪಟ್ಟಣ ಮತ್ತು ವಡ್ಡರಹಟ್ಟಿ ವ್ಯಾಪ್ತಿಯಲ್ಲಿ 42.3ರಷ್ಟು ಬಿಸಿಲಿನ ತಾಪವಿತ್ತು. ಏ. 16ರಿಂದ 17ರ ಅವಧಿಯಲ್ಲಿ 42.7 ಉಷ್ಣಾಂಶ ದಾಖಲಾಗಿದ್ದು ಈ ವರ್ಷದ ಹಿಂದಿನ ಗರಿಷ್ಠ ಬಿಸಿಲಾಗಿತ್ತು. ಈಗ ಈ ’ದಾಖಲೆ’ಯೂ ಸೂರ್ಯನ ತಾಪಕ್ಕೆ ಕರಗಿ ಹೋಗಿದೆ.!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.