ADVERTISEMENT

ತರಹೇವಾರಿ ಹಣ್ಣು, ಜೇನಿನ ಸವಿ

ತೋಟಗಾರಿಕಾ ಇಲಾಖೆಯಿಂದ ಮಾ. 9ರ ತನಕ ಮೇಳ ಆಯೋಜನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 6:38 IST
Last Updated 7 ಮಾರ್ಚ್ 2024, 6:38 IST
ಕೊಪ್ಪಳದಲ್ಲಿ ಬುಧವಾರ ಆರಂಭವಾದ ಹಣ್ಣು ಮತ್ತು ಜೇನು ಮೇಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಪಾಲ್ಗೊಂಡಿದ್ದರು
ಕೊಪ್ಪಳದಲ್ಲಿ ಬುಧವಾರ ಆರಂಭವಾದ ಹಣ್ಣು ಮತ್ತು ಜೇನು ಮೇಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಪಾಲ್ಗೊಂಡಿದ್ದರು   

ಕೊಪ್ಪಳ: ರೈತರಿಂದ ನೇರವಾಗಿ ಗ್ರಾಹಕರ ಫಸಲು ತಲುಪಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಇಲ್ಲಿನ ತನ್ನ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ಹಣ್ಣು ಮತ್ತು ಜೇನು ಹಬ್ಬದಲ್ಲಿ ತರಹೇವಾರಿ ಹಣ್ಣುಗಳಿವೆ.

ಮಾ. 9ರ ತನಕ ಮೇಳ ನಡೆಯಲಿದ್ದು ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಅಣಬೆ ಹೀಗೆ ಅನೇಕ ಹಣ್ಣುಗಳು ಇವೆ. ಹಣ್ಣುಗಳು, ಜೇನು ಮತ್ತು ಅದರ ಉತ್ಪನ್ನಗಳು ಖರೀದಿಗೆ ಜನರ ಆಸಕ್ತಿ ತೋರಿಸುತ್ತಿದ್ದು ಕಂಡು ಬಂದಿತು.

ರೈತರು ತಾವು ಬೆಳೆದ ಫಸಲು ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಮೂಲಕ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದು, ಮೇಳದಲ್ಲಿ ಹಣ್ಣುಗಳ ಜೊತೆಗೆ ಸಾವಯವ ಬೆಲ್ಲವೂ ಮಾರಾಟಕ್ಕಿದೆ. ಮೇಲೆ ಹಳದಿ ಒಳಗೆ ಕೆಂಪು ಬಣ್ಣ ಹೊಂದಿರುವ ವಿಶಾಲ್‌ ಬ್ರ್ಯಾಂಡ್‌ನ ಕಲ್ಲಂಗಡಿ ಹಣ್ಣು ಎಲ್ಲರ ಗಮನ ಸೆಳೆಯುತ್ತಿದೆ. ಮಳಿಗೆ ಹಾಕಲು ರೈತ ಉತ್ಪಾದಕ ಸಂಸ್ಥೆಗಳಿಗೆ ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ. 147ಕ್ಕೂ ಹೆಚ್ಚು ಬೆಳೆಗಾರರು, ಹತ್ತು ರೈತ ಉತ್ಪಾದಕ ಸಂಸ್ಥೆ ಮತ್ತು ಹಾಪ್‌ಕಾಮ್ಸ್‌ನವರು ಪಾಲ್ಗೊಂಡಿದ್ದಾರೆ.

ADVERTISEMENT

ತರಹೇವಾರಿ ದ್ರಾಕ್ಷಿ ತಳಿ, ಸೋನಾಕಾ, ಬೆಂಗಳೂರು ಬ್ಲ್ಯೂ, ಥಾಮ್ಸನ್ ಸೀಡಲೆಸ್, ಮಾಣಿಕ್ ಚಮನ್, ರೆಡ್ ಗ್ಲೊ, ಬೆಣ್ಣೆ ಹಣ್ಣು, ಕಿತ್ತಲೆ, ಅಂಜೂರ, ಗ್ರೀನ್ ಅಪಲ್, ನೇಂದ್ರನ್ ಬಾಳೆ, ಕೆಂಪು ಬಾಳೆ, ಡ್ರ್ಯಾಗನ್ ಫ್ರೂಟ್ ಪ್ರಮುಖವಾಗಿವೆ.

ಚಾಲನೆ: ಶಾಸಕ ರಾಘವೇಂದ್ರ ಹಿಟ್ನಾಳ ಬುಧವಾರ ಮೇಳಕ್ಕೆ ಚಾಲನೆ ನೀಡಿದರೆ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ ಹಣ್ಣುಗಳನ್ನು ವೀಕ್ಷಿಸಿ ಅವುಗಳ ಬಗ್ಗೆ ಮಾಹಿತಿ ಕಲೆಹಾಕಿದರು. ಮೇಳದ ಬಗ್ಗೆ ಸಾಮಾಜಿಕ ತಾಣದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಸೇರಿದಂತೆ ಅನೇಕರು ಮೇಳಕ್ಕೆ ಭೇಟಿ ನೀಡಿದರು.

ಮೇಳದಲ್ಲಿರುವ ತರಹೇವಾರಿ ಹಣ್ಣುಗಳು

ಗಮನ ಸೆಳೆದ ಕೃಷಿ ಡ್ರೋನ್

ಕೃಷಿ ಬೆಳೆಗಳಲ್ಲಿ ರಸಾಯನಿಕ ಔಷಧಿಗಳ ಸಿಂಪಡಿಸಲು ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಮತ್ತು ಬೆಂಗಳೂರಿನ ಎರೋ ಸ್ಪೇಸ್ ಕಂಪನಿ ಸಿದ್ಧಪಡಿಸಿದ ಕೃಷಿ ಡ್ರೋನ್ ಗಮನ ಸೆಳೆಯಿತು. ಉನ್ನತ ಕೃಷಿ ಸಂಶೋಧನಾ ಕೇಂದ್ರ ಸಂಸ್ಥೆಯಿಂದ ಅಧ್ಯಯನ ಮಾಡಲಾದ ಡ್ರೋನ್ ಕೃಷಿಕರಿಗೆ ಶೇ. 50ರಷ್ಟು ಹಣ ಉಳಿತಾಯ ಮಾಡಿ ಕೆಲಸವನ್ನೂ ಸುಲಭ ಮಾಡುತ್ತದೆ. ಐದು ನಿಮಿಷದಲ್ಲಿ ಒಂದು ಎಕರೆಗೆ ಔಷಧಿ ಸಿಂಪಡಿಸಬಹುದು ಎಂದು  ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ಅವಿನಾಶ ಕುಲಕರ್ಣಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.