ADVERTISEMENT

ಕೊಪ್ಪಳ: ಬ್ಯಾಂಕ್‌ ಮುಂಭಾಗದಲ್ಲಿ ₹ 50 ಸಾವಿರ ಕಳ್ಳತನ

ಕಳ್ಳರ ಕೈ ಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 15:52 IST
Last Updated 7 ಏಪ್ರಿಲ್ 2024, 15:52 IST

ಕೊಪ್ಪಳ: ಬ್ಯಾಂಕ್‌ನಿಂದ ಹಣ ಪಡೆದುಕೊಂಡು ಮನೆಗೆ ಹೋಗಲು ಬ್ಯಾಂಕ್‌ನಿಂದ ಹೊರಗೆ ಬಂದು ನಿಂತಿದ್ದ ಇಲ್ಲಿನ ಅಮೀನ್‌ ಓಣಿಯ ನಿವಾಸಿ ಸಂಗಮೇಶ ವನ್ನೂರ ಬಳಿಯಿದ್ದ ₹50 ಸಾವಿರ ಕಳ್ಳರು ದೋಚಿದ್ದಾರೆ.

ಸಂಗಮೇಶ ಉದ್ಯಮಿಯಾಗಿದ್ದು, ಪತ್ನಿ ಶಿವಲೀಲಾ ಅವರ ಖಾತೆಯಿಂದ ₹1 ಲಕ್ಷ ತೆಗೆದುಕೊಳ್ಳಲು ಈಶ್ವರ ಪಾರ್ಕ್‌ ಸಮೀಪದಲ್ಲಿರುವ ಬ್ಯಾಂಕ್‌ ಆಫ್‌ ಬರೋಡಾಕ್ಕೆ ಬಂದಿದ್ದರು. 

ಬ್ಯಾಂಕ್‌ ಸಿಬ್ಬಂದಿಯಿಂದ ಹಣ ಪಡೆದುಕೊಳ್ಳುವಾಗ ಪ‍ದೇ ಪದೇ ಫೋನ್‌ ಕರೆಗಳು ಬಂದಿದ್ದರೂ ಫೋನ್‌ ಸ್ವೀಕರಿಸದೆ ಹಣದ ಮೇಲೆ ನಿಗಾ ವಹಿಸಿದ್ದರು. ಬ್ಯಾಂಕ್‌ನಿಂದ ಹೊರಗಡೆ ಬಂದು ಮಿಸ್‌ ಕಾಲ್ಡ್‌ ಆಗಿದ್ದ ನಂಬರ್‌ಗಳಿಗೆ ವಾಪಸ್‌ ಕರೆ ಮಾಡುತ್ತಿದ್ದ ವೇಳೆ ಹಣದ ಬ್ಯಾಗ್‌ ನೋಡಿಕೊಂಡಾಗ ಅದರಲ್ಲಿದ್ದ ₹50 ಸಾವಿರ ಕಳ್ಳತನವಾಗಿತ್ತು. ಇದರಿಂದ ಗಾಬರಿಯಾದ ಅವರು ಬ್ಯಾಂಕ್‌ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಆಗ ಬ್ಯಾಂಕ್‌ನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಸಂಗಮೇಶ ಹಣ ಪಡೆದು ಹೋಗುವಾಗ ಇಬ್ಬರು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದು, ಬ್ಯಾಂಕ್‌ ಹೊರಗಡೆ ನಿಂತಿದ್ದಾಗ ಅವರಿಗೆ ಅಂಟಿಕೊಂಡು ನಿಂತಿದ್ದ ದೃಶ್ಯಾವಳಿಗಳು ದಾಖಲಾಗಿವೆ.     

ಬೆಟ್ಟಿಂಗ್‌: ಐಪಿಎಲ್‌ ಕ್ರಿಕೆಟ್‌ ಟೂರ್ನಿಯ ಗುಜರಾತ್‌ ಟೈಟನ್ಸ್ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳ ನಡುವಿನ ಪಂದ್ಯದ ವೇಳೆ ಇಲ್ಲಿನ ಭಾಗ್ಯನಗರದಲ್ಲಿ ಬೆಟ್ಟಿಂಗ್‌ ಆಡುತ್ತಿದ್ದ ಆರೋಪದ ಮೇಲೆ ಶ್ರೀಧರ ಪವಾರ್‌ ಎನ್ನುವವರ ಮೇಲೆ ಇಲ್ಲಿನ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕ್ರಿಕೆಟ್ ಪಂದ್ಯವನ್ನು ಮೊಬೈಲ್‌ನಲ್ಲಿ ನೋಡಿಕೊಂಡು ಬೆಟ್ಟಿಂಗ್‌ ಆಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಫೋನ್‌ ಹಾಗೂ ₹2,300 ವಶಕ್ಕೆ ಪಡೆದುಕೊಂಡಿದ್ದಾರೆ.

ಇಲ್ಲಿನ ಲೇಬರ್‌ ವೃತ್ತದ ಬಳಿಕ ಐಪಿಎಲ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮತ್ತೊಮ್ಮ ವ್ಯಕ್ತಿಯ ಮೇಲೆ ದಾಳಿ ಮಾಡಿರುವ ಪೊಲೀಸರು ಹೋಟೆಲ್‌ ಸಿಬ್ಬಂದಿ ಹನುಮಂತ ಸಾ ಮೇರವಾಡೆ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಬೆಟ್ಟಿಂಗ್‌ ಆಡಲು ಬಳಸಿದ್ದ ಫೋನ್‌ ಮತ್ತು ₹2,200 ನಗದು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.