ಕೊಪ್ಪಳ: ‘ಚೈತ್ರಾ ಕುಂದಾಪುರ ಮಾಡಿದ ರೀತಿಯ ವಂಚನೆಯ ಪ್ರಕರಣಗಳು ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ನಡೆಯುತ್ತಿವೆ’ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ರಾಜಕೀಯ ಪಕ್ಷಗಳಲ್ಲಿ ವಂಚನೆ ಹೊಸದೇನಲ್ಲ. ಆದರೆ, ಬಿಜೆಪಿಯಲ್ಲಿ ನಾನು ಕಂಡಿರುವ ಹಾಗೆ ಹಣ ಪಡೆದು ಟಿಕೆಟ್ ನೀಡುವ ಸಂಸ್ಕೃತಿ ಇಲ್ಲ. ಇದೇ ಮೊದಲು ಬಾರಿ ಬಿಜೆಪಿಯಲ್ಲಿ ಈ ರೀತಿ ಮಾತುಗಳನ್ನು ಕೇಳುತ್ತಿದ್ದೇನೆ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸುತ್ತಾರೆ’ ಎಂದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದೇ ಎನ್ನುವ ಪ್ರಶ್ನೆಗೆ ‘ಡಿಸೆಂಬರ್ ಅಥವಾ ಜನವರಿಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಾಗಲೇ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ತೊಡಗಿದ್ದೇನೆ’ ಎಂದು ಹೇಳಿದರು.
‘ಅಂಜನಾದ್ರಿ ಅಭಿವೃದ್ಧಿಗೆ ಹಿಂದಿನ ಸರ್ಕಾರ ಅನುದಾನ ಘೋಷಿಸಿತ್ತು. ನಾನು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನಂತರ ಈಗ ಅಭಿವೃದ್ದಿ ಕಾರ್ಯಗಳು ನಡೆದಿವೆ. ಹಿಟ್ನಾಳದಿಂದ ಮರಳಿ ತನಕ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ₹1,800 ಕೋಟಿ ಟೆಂಡರ್ ಕರೆಯಲಾಗುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಆನೆಗೊಂದಿ ಭಾಗದ ಅಭಿವೃದ್ಧಿಗೆ ₹40 ಕೋಟಿ ನೀಡಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.