ಕೊಪ್ಪಳ: ಎಲ್ಲೆಂದರಲ್ಲಿ ಕಸ, ಕಾಲಿಟ್ಟರೆ ಮಳ್ಳು ಚುಚ್ಚುವ ಆತಂಕ, ಮಳೆ ಬಂದರಂತೂ ಆ ಪ್ರದೇಶವೆಲ್ಲ ಜಲಾವೃತ... ಇಂಥ ಚಿತ್ರಣಗಳು ಜಿಲ್ಲೆಯ ಬಹುತೇಕ ಗ್ರಾಮಗಳ ಸ್ಮಶಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.
ಯಾವುದೇ ಸಮುದಾಯ, ಜಾತಿ, ಲಿಂಗವಿದ್ದರೂ ಮರಣಾನಂತರ ಆ ವ್ಯಕ್ತಿಗೆ ಅತ್ಯಂತ ಗೌರವಯುತವಾಗಿ ಅಂತಿಮ ಸಂಸ್ಕಾರ ನೆರವೇರಿಸಬೇಕು ಎನ್ನುವುದು ಆಯಾ ಕುಟುಂಬಗಳ ಮತ್ತು ಬಂಧುಗಳ ಸಹಜ ಆಸೆ.
ಆದರೆ, ಬಹಳಷ್ಟು ಕಡೆ ಸ್ಮಶಾನಗಳು, ಖಬರಸ್ತಾನಗಳು,ಸಿಮೆಟ್ರಿಯಾಗಳಲ್ಲಿ ಮೂಲ ಸೌಕರ್ಯ ಮತ್ತು ಸ್ವಚ್ಛತೆಯ ಸಮಸ್ಯೆ ಎದ್ದು ಕಾಣುತ್ತದೆ.ಅನೇಕ ಕಡೆ ರುದ್ರಭೂಮಿಗಳಿಗೆ ಸರಿಯಾದ ದಾರಿ ಇಲ್ಲ, ಮುಳ್ಳು ಕಂಟಿಗಳನ್ನು ದಾಟಿಕೊಂಡು ಹೋಗುವ ಅನಿವಾರ್ಯತೆ. ರಾತ್ರಿವೇಳೆ ಸಮಸ್ಯೆ ಹೇಳತೀರದಷ್ಟು. ಜಿಲ್ಲಾ ಕೇಂದ್ರದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 595 ಗ್ರಾಮಗಳಿದ್ದು, 587 ಗ್ರಾಮಗಳಲ್ಲಿ ರುದ್ರಭೂಮಿಗಳು ಇವೆ.
ಪ್ರಗತಿಯಲ್ಲಿ ಕೆಲ ಭೂಮಿ
ಕಾರಟಗಿಯಲ್ಲಿ ರುದ್ರಭೂಮಿಗೆ 11 ಎಕರೆಗೂ ಅಧಿಕ ಜಾಗವಿದ್ದರೂ ಅಂತ್ಯ ಸಂಸ್ಕಾರ ನಡೆಯುವುದು ಅರ್ಧ ಎಕರೆಯಲ್ಲಿ ಮಾತ್ರ. ಉಳಿದ ಭೂಮಿಗೆ ಅತಿಕ್ರಮಣದ ಭೂತ ಕಾಡುತ್ತಿದೆ. ಆ ಜಾಗ ತಿಪ್ಪೆ, ಹುಲ್ಲಿನ ಬಣಿವೆ, ಕೃಷಿ ಚಟುವಟಿಕೆ, ಜಾನುವಾರು ಕಟ್ಟಲು ಬಳಕೆಯಾಗುತ್ತಿದೆ.
36 ಎಕರೆ ಕೆರೆಯ ಸ್ಥಳವು ಅಭಿವೃದ್ದಿ ಕಾರ್ಯಕ್ಕೆ ಬಳಕೆಯಾಗಿ, ಉಳಿದ ಭೂಮಿಯಲ್ಲಿ ಮತ್ತಷ್ಟು ಕಟ್ಟಡ ನಿರ್ಮಿಸುವುದರ ಜೊತೆಗೆ ಕುರುಬರ ಸಮಾಜಕ್ಕೆ 1-20 ಎಕರೆ ಮೀಸಲಿರಿಸಿ, ನೂತನ ನೀಲನಕ್ಷೆ ಸಿದ್ದಪಡಿಸಲಾಗಿದ್ದು, ಜಿಲ್ಲಾಧಿಕಾರಿಗಳ ಮಂಜೂರಾತಿಗೆ ಕಾಯುತ್ತಿದೆ.
ಸರ್ಕಾರದ ‘ಸ್ಮಶಾನ ಮೌನ’ದ ಕುರಿತು ಜನರ ಬೇಗುದಿ ಹೆಚ್ಚಾದ ಪರಿಣಾಮ ಈಚೆಗೆ ಗ್ರಾಮಕ್ಕೊಂದು ಮಾದರಿ ಸ್ಮಶಾನ ನಿರ್ಮಿಸುವ ಕನಸಿಗೆ ಜೀವ ಬಂದಿದೆ. ಜಿಲ್ಲಾಡಳಿತ ಪ್ರತಿ ಗ್ರಾಮದಲ್ಲಿ ಸಮೀಕ್ಷೆ ನಡೆಸಿ ನಿವೇಶನ ಖರೀದಿಗೆ ಮುಂದಾಗಿದೆ.
ಕೆರೆಯಲ್ಲಿ ಶವ ಸಂಸ್ಕಾರ
ಮುನಿರಾಬಾದ್ ವ್ಯಾಪ್ತಿಯ ಬೇವಿನಹಳ್ಳಿ ಗ್ರಾಮ ಮೂರು ಗ್ರಾಮಗಳನ್ನೊಳಗೊಂಡ ಪಂಚಾಯಿತಿಯ ಕೇಂದ್ರ ಸ್ಥಾನವಾಗಿದ್ದು, ಆ ಊರಿನಲ್ಲಿ ಶವಸಂಸ್ಕಾರ ನಡೆಸಲಾಗುತ್ತಿದೆ.
ಕೆಲವು ಬಾರಿ ಮೊದಲು ಹೂಳಿದ್ದ ಶವ ತೆಗೆದು ಅದೇ ಜಾಗದಲ್ಲಿ ಹೂತ ಪ್ರಕರಣಗಳೂ ಇವೆ. ಇಡೀ ಪ್ರದೇಶ ಹಗಲಿನಲ್ಲಿ ಬಯಲು ಶೌಚಾಲಯವಾಗಿ ಬಳಕೆಯಾಗುತ್ತಿದೆ. ಕುಕನೂರು ತಾಲ್ಲೂಕಿನ ನಿಟ್ಟಾಲಿ ಗ್ರಾಮದಲ್ಲಿ ಸ್ಮಶಾನದ ಕೊರತೆ ಕಾರಣ ಹಳ್ಳದಲ್ಲಿ ಶವಸಂಸ್ಕಾರ ಮಾಡಲಾಗುತ್ತಿದೆ ಎನ್ನುತ್ತಾರೆ ಗ್ರಾಮದ ಯುವಕ ಮಲ್ಲಿಕಾರ್ಜುನ ಪೂಜಾರ.
ಶೌಚಾಲಯವಾದ ಸ್ಮಶಾನಗಳು
ಕನಕಗಿರಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಕೆಲ ಸ್ಮಶಾನಗಳು ಬಯಲು ಬಹಿರ್ದೆಸೆ ಕೇಂದ್ರಗಳಾಗಿವೆ. ನರೇಗಾ ಯೋಜನೆಯಲ್ಲಿ ಸ್ಮಶಾನ ಅಭಿವೃದ್ಧಿ ಪಡಿಸಲು ಸರ್ಕಾರ ಒತ್ತು ನೀಡಿದ್ದು ಹಲವಾರು ಗ್ರಾಮದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಅಂದಾಜು 40 ವರ್ಷಗಳ ಹಿಂದಿನ ಜನಸಂಖ್ಯೆಗೆ ತಕ್ಕಂತೆ ಸ್ಮಶಾನ ಭೂಮಿ ಹಂಚಿಕೆ ಮಾಡಲಾಗಿದ್ದು ಈಗ ಸಾಲದಾಗಿದೆ. ಇಂದಿರಾ ಕಾಲೊನಿ, ಲಕ್ಷ್ಮೀದೇವಿ ಕೆರೆ ರಸ್ತೆ ಇತರೆ ಸ್ಥಳದಲ್ಲಿರುವ ಸ್ಮಶಾನಗಳು ಬಹಿರ್ದೆಸೆ ಕೇಂದ್ರಗಳಾಗಿವೆ.
ಸ್ಮಶಾನ ಕೊರತೆ
ತಾವರಗೇರಾ ಪಟ್ಟಣದಲ್ಲಿ 25 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು, ಇಲ್ಲಿವರೆಗೆ ಸರ್ಕಾರಿ ನಿಯಮಾನುಸಾರ ಪಹಣಿಯಲ್ಲಿ ಸ್ಮಶಾನದ ದಾಖಲಾತಿಯಲ್ಲಿ ಇಲ್ಲದಾಗಿದೆ. ವಿವಿಧ ಸಮುದಾಯಗಳಿಗೆ ಅಧಿಕೃತವಾಗಿ ಸ್ಥಳವನ್ನು ಸರ್ಕಾರ ನೀಡಿಲ್ಲ.
ಕೆಲ ಸಮುದಾಯಗಳು ಸಿಂಧನೂರು ರಸ್ತೆಯ ಪಕ್ಕದಲ್ಲಿರುವ ಸರ್ಕಾರಿ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸುತ್ತಿದ್ದಾರೆ. ಭೋವಿ ಸಮಾಜಕ್ಕೆ ಮುಖ್ಯ ರಸ್ತೆ ಪಕ್ಕದಲ್ಲಿ ಸ್ಥಳಾವಕಾಶ ಇದೆ. ವೀರಶೈವ ಲಿಂಗಾಯತ ಎಲ್ಲಾ ಸಮುದಾಯದವರು ಖಾಸಗಿ ವ್ಯಕ್ತಿಗಳ ಬೀಳು ಬಿದ್ದ ಜಮೀನಿನಲ್ಲಿ ಮತ್ತು ಉಪ್ಪಾರ ಸಮಾಜದವರು ನಂದಾಪೂರ ರಸ್ತೆಯ ಪಕ್ಕ, ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ. ಹೀಗೆ ಪಟ್ಟಣ ಪಂಚಾಯತಿ ವ್ಯಾಪ್ತಿಯ ಸ್ಮಶಾನ ಭೂಮಿ ಕೊರತೆಯಿಂದ ವಿವಿಧ ಸಮುದಾಯಗಳು ಬೇರೆ ಬೇರೆ ಸರ್ಕಾರಿ ಸ್ಥಳವನ್ನು ಹುಡುಕಾಡಿ ಶವ ಸಂಸ್ಕಾರ ಮಾಡುತ್ತಿದ್ದಾರೆ.
ಸ್ಮಶಾನ ರಸ್ತೆ ಅಭಿವೃದ್ಧಿ ಅವಶ್ಯ
ಯಲಬುರ್ಗಾ ತಾಲ್ಲೂಕಿನ 85 ಗ್ರಾಮಗಳ ಪೈಕಿ 84 ಗ್ರಾಮಗಳಲ್ಲಿ ಸ್ಮಶಾನಗಳಿದ್ದು, ಶಿರಗುಂಪಿ ಗ್ರಾಮದಲ್ಲಿ ಖಾಸಗಿ ಜಮೀನು ಸ್ವಾಧೀನ ಕಾರ್ಯ ನಡೆಯುತ್ತಿದೆ. 8 ಗ್ರಾಮಗಳಲ್ಲಿ ಖಾಸಗಿ ಜಮೀನು ಖರೀದಿಸಿದ್ದು, ಉಳಿದಂತೆ ಸರ್ಕಾರಿ ಜಮೀನಿನಲ್ಲಿ ಸ್ಮಶಾನ ಭೂಮಿ ನಿರ್ಮಿಸಿದೆ.
ಸಂಕನೂರು ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾರ್ಯಕೈಗೊಳ್ಳುವಂತೆ ಪಂಚಾಯಿತಿಯವರಿಗೆ ಒತ್ತಾಯಿಸುತ್ತಿದ್ದರೂ ಇನ್ನೂ ಕೆಲಸವಾಗಿಲ್ಲ ಎಂಬುದು ಗ್ರಾಮಸ್ಥರು ದೂರು. ಹಾಗೆಯೇ ಪಟ್ಟಣಕ್ಕೆ ಸಂಬಂಧಿಸಿದಂತೆ ಮೂರ್ನಾಲ್ಕು ಸಮುದಾಯದವರು ಮೊಗ್ಗಿಬಸವೇಶ್ವರ ದೇವಸ್ಥಾನದ ಹಿಂದೆ ಇರುವ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಆದರೆ ರಸ್ತೆ ಮಾತ್ರ ಅಭಿವೃದ್ಧಿಯಾಗಿಲ್ಲ.
ಆಗದ ಹದ್ದುಬಸ್ತು
ಕುಷ್ಟಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ 164 ಜನವಸತಿ ಗ್ರಾಮಗಳ ಪೈಕಿ 158 ರಲ್ಲಿ ಸಾರ್ವಜನಿಕ ರುದ್ರಭೂಮಿಗೆ ಕಂದಾಯ ಇಲಾಖೆ ಕ್ರಮಕೈಗೊಂಡಿದ್ದು ತಾರತಮ್ಯವಿಲ್ಲದೆ ಎಲ್ಲ ಸಮುದಾಯಗಳಿಗೆ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೆಸರೂರು, ಎಂ.ಕಲಕೇರಿ, ಮಾವಿನಿಟಗಿ, ಕಡಿವಾಲ, ಬಿಳೇಕಲ್ ಮತ್ತು ಕೊಡಗೇರಾ ಗ್ರಾಮಗಳಿಗೆ ಮಾತ್ರ ಇನ್ನೂ ಸರ್ಕಾರ ಸ್ಮಶಾನ ಭೂಮಿ ಕಲ್ಪಿಸಿಲ್ಲ.
ವಿವಿಧ ಸಮುದಾಯಗಳಿಗೆ ಸೇರಿದ ಒಟ್ಟು 9 ಸ್ಮಶಾನಗಳು, ಎರಡು ಖಬರಸ್ತಾನಗಳು ಇವೆ. ಕ್ರೈಸ್ತ ಕಿಂಗ್ ಶಾಲೆಯ ಬಳಿ, ಹನುಮಸಾಗರ ರಸ್ತೆ ಎಡ ಬಲ ಭಾಗಗಳಲ್ಲಿ, ವಣಗೇರಿ ಹಳೆ ರಸ್ತೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸ್ಮಶಾನಗಳಿಗೆ ದಾರಿ ಕಲ್ಪಿಸಲಾಗಿದೆ. ಕೆಲವುಕಡೆಗಳಲ್ಲಿ ಕಾಂಕ್ರಿಟ್ ರಸ್ತೆಗಳ ಅವಕಾಶ ಕಲ್ಪಿಸಲಾಗಿದೆ. ಬಹುತೇಕ ಸ್ಮಶಾನಗಳಲ್ಲಿ ಪುರಸಭೆ ವತಿಯಿಂದ ಸೋಲಾರ್ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿದೆ.
ಗಂಗಾವತಿಯಲ್ಲಿ ಸಾರ್ವಜನಿಕರ ಪರದಾಟ
ಗಂಗಾವತಿ ತಾಲ್ಲೂಕಿನ ಸಾಣಾಪುರ, ಕರಿಯಮ್ಮನಗಡ್ಡಿ, ರಂಗಾಪುರ, ಕೃಷ್ಣಾಪುರ, ನಾಗರಹಳ್ಳಿ, ಭಟ್ಟರ ನರಸಾಪುರ, ಗುಳದಾಳ, ಕೇಸಕ್ಕಿ ಹಂಚಿನಾಳ, ಗಡ್ಡಿ ಗ್ರಾಮಗಳಲ್ಲಿ ರುದ್ರಭೂಮಿ ಇಲ್ಲದೆ ಸಾರ್ವಜನಿಕರು ಅಂತ್ಯ ಸಂಸ್ಕಾರಕ್ಕೆ ಪರದಾಡಬೇಕಾಗಿದೆ.
ತಾಲ್ಲೂಕು ಆಡಳಿತದ ಪ್ರಕಾರ ಗಂಗಾವತಿ ತಾಲ್ಲೂಕಿನಲ್ಲಿ 58 ರುದ್ರಭೂಮಿಗಳಿದ್ದು, ಕೆಲ ಗ್ರಾಮದಲ್ಲಿ ಕೇವಲ 20 ಗುಂಟೆಯ ಸ್ಥಳಗಳಿವೆ. ಆನೆಗೊಂದಿ, ಬಸಾಪಟ್ಟಣ, ಸಂಗಾಪುರ, ಶ್ರೀರಾಮನಗರ, ವಡ್ಡರಹಟ್ಟಿ ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು, ಇಲ್ಲಿ ರುದ್ರಭೂಮಿ ಸಮಸ್ಯೆಯಿದೆ.
ಹಲವು ಗ್ರಾಮಗಳ ಸಾರ್ವಜನಿಕ ರುದ್ರಭೂಮಿಯಲ್ಲಿ ಕೆಲ ಸಮಾಜದವರು ವಿಭಾಗ ಮಾಡಿಕೊಂಡು ಅಂತ್ಯ ಸಂಸ್ಕಾರ ಮಾಡಿಕೊಂಡು, ನೆನಪಿಗಾಗಿ ಸಮಾಧಿ, ಕಲ್ಲಿನ ಗುರುತು ಹಾಕಿಕೊಂಡಿದ್ದು ಸ್ಮಶಾನದಲ್ಲಿ ಸ್ಥಳವೇ ಇಲ್ಲದಂತಾಗಿದೆ. ಮಳೆಗಾಲದಲ್ಲಿ ಅವು ಅವ್ಯವಸ್ಥೆಯ ತಾಣಗಳಾಗುತ್ತವೆ. ಸಾಣಾಪುರ, ಚಿಕ್ಕಜಂತಕಲ್ ಭಾಗದ ರುದ್ರಭೂಮಿಗಳು ನದಿಪಾತ್ರದಲ್ಲಿದ್ದು ನದಿಗೆ ನೀರು ಬಂದರೆ ಗೌರವದ ಸಂಸ್ಕಾರ ನೀಡಲು ಪರದಾಡಬೇಕಾಗುತ್ತದೆ.
‘ಮೂಲ ಸೌಲಭ್ಯ ಕಲ್ಪಿಸಿ‘
ಕೊಪ್ಪಳ: ‘ನಗರದಲ್ಲಿರುವ ಗಾಯತ್ರಿ ಸಮಾಜದ ಸ್ಮಶಾನದಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಮಳೆಗಾಲದಲ್ಲಿ ಮೊಣಕಾಲು ಎತ್ತರಕ್ಕೆ ನೀರು ನಿಲ್ಲುತ್ತದೆ. ಆದ್ದರಿಂದ ತುರ್ತಾಗಿ ಮೂಲ ಸೌಲಭ್ಯ ಕಲ್ಪಿಸಬೇಕು’ ಎಂದುಕೊಪ್ಪಳದ ಶವದಹನ ಸಂಪ್ರದಾಯ ಆಚರಣೆ ಒಕ್ಕೂಟದ ಅಧ್ಯಕ್ಷ ದಾಮೋದರ ವರ್ಣೆಕರ ಹಾಗೂ ಸಂಚಾಲಕ ಪ್ರಾಣೇಶ ಮಹೇಂದ್ರಕರ ಹೇಳುತ್ತಾರೆ.
‘ದಹನ ಸಂಪ್ರದಾಯ ಪಾಲಿಸುವ ಎಲ್ಲರಿಗೂ ಅಲ್ಲಿ ಅಂತಿಮ ಸಂಸ್ಕಾರ ನಡೆಸಲು ಅವಕಾಶವಿದೆ. 18 ಸಮುದಾಯಗಳು ಜನ ಅಲ್ಲಿ ಅಂತಿಮ ಸಂಸ್ಕಾರ ನಡೆಸುತ್ತಾರೆ. ಆದರೆ, ಬಹಳಷ್ಟು ಜನ ಸ್ಮಶಾನದಲ್ಲಿ ಕಸ ಹಾಗೂ ಸತ್ತ ಪ್ರಾಣಿಗಳ ಶವ ಎಸೆಯುತ್ತಾರೆ. ನಗರಸಭೆ ಸಿಬ್ಬಂದಿ ಸ್ವಚ್ಛ ಮಾಡಿದರೂ ಮತ್ತೆ ಕಸ ಚೆಲ್ಲುತ್ತಾರೆ. ಕನಿಷ್ಠ ಮೂಲ ಸೌಲಭ್ಯಗಳನ್ನಾದರೂ ಒದಗಿಸಬೇಕು’ ಎಂದರು.
ಮುಸ್ಲಿಂ ಸಮಾಜದ ಖಬರಸ್ತಾನಗಳು ಕೆಲ ಕಡೆ ಸುಸಜ್ಜಿತವಾಗಿವೆ. ಇನ್ನು ಕೆಲ ಕಡೆ ನಿರ್ಮಾಣ ಮಾಡಬೇಕಾಗಿದೆ. ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.
ಮೌಲಾನಾ ಮುಫ್ತಿ ನಜೀರ್ ಅಹ್ಮದ್
ಯೂಸೂಫಿಯಾ ಮಸೀದಿ, ಕೊಪ್ಪಳ
ಸಿಮೆಟ್ರಿಯಾ ನಿರ್ಮಾಣಕ್ಕೆ ಸರ್ಕಾರವೇ ಭೂಮಿ ಕೊಟ್ಟಿದೆ. ಅಲ್ಲಿ ನಾವೇ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದೇವೆ. ಪ್ರತಿ ವರ್ಷ ನ. 2ರಂದು ಮೃತರ ಸ್ಮರಣೆಯ ದಿನ ಮಾಡುತ್ತೇವೆ. ಸ್ವಚ್ಛವಾಗಿಟ್ಟುಕೊಳ್ಳಲು ನಮ್ಮ ಸಮಾಜದವರೇ ಸ್ವಯಂ ಸೇವಕರಂತೆ ಕೆಲಸ ಮಾಡುತ್ತಾರೆ.
ಫಾದರ್ ಸೆಬಾಸ್ಟಿಯನ್
ಬೇವಿನಹಳ್ಳಿ ಜನಸಂಖ್ಯೆ ನಾಲ್ಕು ಸಾವಿರಕ್ಕೂ ಹೆಚ್ಚಿದೆ. ಇದಕ್ಕೆ ಅನಗುಣವಾಗಿ ಸ್ಮಶಾನಕ್ಕಾಗಿ ನಾಲ್ಕು ಎಕರೆ ಭೂಮಿ ಮಂಜೂರು ಮಾಡಲು ಮನವಿ ಮಾಡಿದ್ದೇವೆ.
ಯಂಕನಗೌಡ ಪೋ. ಪಾಟೀಲ್, ನಾಗರಾಜ ಬಾದರಬಂಡಿ.
ಗ್ರಾಮ ಪಂಚಾಯಿತಿ ಸದಸ್ಯರು
ಕುಕನೂರು ತಾಲ್ಲೂಕಿನ ಆಡೂರು ಗ್ರಾಮ ಬಿಟ್ಟು ಉಳಿದ 57 ಗ್ರಾಮಗಳಲ್ಲೂ ಸ್ಮಶಾನ ಜಾಗವಿದೆ. ನರೇಗಾ ಕಾಮಗಾರಿಯಿಂದ ತಂತಿಬೇಲಿ, ಸಸಿಗಳ ಪೋಷಣೆ, ಸ್ಮಶಾನದ ನಾಮಫಲಕ ವ್ಯವಸ್ಥೆ ಮಾಡಲಾಗಿದೆ.
ಚಿದಾನಂದ ಗುರುಸ್ವಾಮಿ, ತಹಶೀಲ್ದಾರ್ ಕುಕನೂರು
ಸಾರ್ವಜನಿಕ ರುದ್ರಭೂಮಿಯಲ್ಲಿ ಜಿಲ್ಲಾಧಿಕಾರಿ 5.25 ಎಕರೆ ಭೂಮಿಯನ್ನು ವೀರಶೈವ ಸಮಾಜಕ್ಕೆ ಮಂಜೂರು ಮಾಡಿದ್ದರು. ವಿವಾದ ಶುರುವಾದಾಗ 1.5 ಎಕರೆ ಬಿಟ್ಟುಕೊಡುವಂತೆ ಸೂಚಿಸಿದ್ದರು. ನಾವು ಅದಕ್ಕೆ ಸಿದ್ದರಿದ್ದರೂ, ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಶಶಿಧರಗೌಡ, ಮಾಜಿ ಅಧ್ಯಕ್ಷರು, ವೀರಶೈವ ಯುವಕ ಸಂಘ, ಕಾರಟಗಿ.
ಕೊಪ್ಪಳ ತಾಲ್ಲೂಕಿಗೆ 139 ರುದ್ರಭೂಮಿ ಮಂಜೂರು ಮಾಡಲು ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಜಮೀನು ನೀಡುವ ಭೂ ಮಾಲೀಕರನ್ನೂ ಒಪ್ಪಿಸಲಾಗಿದೆ. ಸರ್ಕಾರದಿಂದ ಹಣ ಬಿಡುಗಡೆಯಾದ ತಕ್ಷಣ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ವಿಠ್ಠಲ ಚೌಗುಲಾ, ಕೊಪ್ಪಳ ತಹಶೀಲ್ದಾರ್
ಪೂರಕ ಮಾಹಿತಿ: ನಾರಾಯಣರಾವ್ ಕುಲಕರ್ಣಿ, ಕೆ. ಮಲ್ಲಿಕಾರ್ಜುನ,ಮೆಹಬೂಬ್‌ಸಾಬ್ ಕನಕಗಿರಿ, ಗುರುರಾಜ ಅಂಗಡಿ, ಉಮಾಶಂಕರ ಹಿರೇಮಠ, ಎನ್. ವಿಜಯ, ಮಂಜುನಾಥ ಎಸ್. ಅಂಗಡಿ, ಮೆಹಬೂಬ್‌ಸಾಬ್ ಕನಕಗಿರಿ, ಕೆ. ಶರಣಬಸವ ನವಲಹಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.