ಕೊಪ್ಪಳ: ಚೀನಾದಲ್ಲಿ ಬಾಧಿಸುತ್ತಿರುವ ಕೋವಿಡ್–19 ಸೋಂಕಿನಿಂದಆಹಾರ ಸಾಮಗ್ರಿ, ಆಟೋಮೊಬೈಲ್ ಬಿಡಿಭಾಗಗಳು ಸೇರಿ ವಿವಿಧ ವಸ್ತುಗಳ ವಹಿವಾಟಿಗೆ ತೊಂದರೆಯಾಗಿದೆ. ಆದರೆ, ಭಾಗ್ಯನಗರದ ಕೇಶೋದ್ಯಮಕ್ಕೆ ಮಾತ್ರ ಯಾವುದೇ ತೊಂದರೆಯಾಗಿಲ್ಲ.
ನಗರದಿಂದ ಸ್ವಲ್ಪ ದೂರದಲ್ಲಿರುವ ಭಾಗ್ಯನಗರ ಪಟ್ಟಣವು ಕೇಶೋದ್ಯಮಕ್ಕೆ ಪ್ರಸಿದ್ಧಿ ಪಡೆದಿದೆ. ರಾಜ್ಯ ಹಾಗೂ ಹೊರ ರಾಜ್ಯದಿಂದ ಕಚ್ಚಾ ಕೇಶ ಸಂಗ್ರಹಿಸಿ, ಸಂಸ್ಕರಿಸಿ ಚೀನಾ ಸೇರಿ ಇಂಡೊನೇಷ್ಯಾ, ಬರ್ಮಾ, ಅಮೆರಿಕ ಸೇರಿದಂತೆ ವಿವಿಧೆಡೆ ರಫ್ತು ಮಾಡಲಾಗುತ್ತದೆ.ವಿಗ್ ಸೇರಿ ಇತರ ನಮೂನೆ ಕೇಶ ವಿನ್ಯಾಸಕ್ಕೆ ಭಾಗ್ಯನಗರ ಕೇಶ ಬಳಕೆಯಾಗುತ್ತದೆ.
1960ರಲ್ಲಿ 5 ರಿಂದ 6 ಕೇಶ ಸಂಸ್ಕರಣಾ ಘಟಕಗಳು ಆರಂಭಗೊಂಡವು. ನಂತರ 300ಕ್ಕೂ ಹೆಚ್ಚು ಕೇಶ ಸಂಸ್ಕರಣಾ ಘಟಕಗಳು ತಲೆ ಎತ್ತಿದ್ದವು. ಇದರಿಂದ 25 ಸಾವಿರಕ್ಕೂ ಹೆಚ್ಚು ಜನರು ತಮ್ಮ ಬದುಕನ್ನು ಕಟ್ಟಿಕೊಂಡರು. ಆದರೆ ಕಚ್ಚಾ ಕೇಶದ ಕೊರತೆ, ಜಿಎಸ್‌ಟಿ, ಜಿಡಿಪಿ ಕುಸಿತದಂತಹ ಸಮಸ್ಯೆಯಿಂದ ಪ್ರಸ್ತುತ 4 ಕೂದಲು ಸಂಸ್ಕರಣಾ ಘಟಕಗಳಿವೆ.
ವಿಜಯಪುರ ಜಿಲ್ಲೆಯಿಂದ ಚೀನಾಕ್ಕೆ ರಫ್ತಾಗುತ್ತಿದ್ದ ಒಣದ್ರಾಕ್ಷಿ, ಚಿಕ್ಕಬಳ್ಳಾಪುರದ ಗುಲಾಬಿ ಸೇರಿದಂತೆ ವಿವಿಧೆಡೆ ತಯಾರು ಆಗುತ್ತಿದ್ದ ಆಟೊಮೊಬೈಲ್ ಬಿಡಿ ಭಾಗಗಳನ್ನು ಚೀನಾಕ್ಕೆ ರಫ್ತು ಮಾಡಲಾಗುತಿತ್ತು. ಆದರೆ, ಕೋವಿಡ್–19 ಸೋಂಕಿನಿಂದ ಈ ವಹಿವಾಟಿಗೆ ಧಕ್ಕೆಯಾಗಿದೆ. ಆದರೆ, ಕೇಶೋದ್ಯಮಕ್ಕೆ ಪೆಟ್ಟು ಬಿದ್ದಿಲ್ಲ.
‘ಚೀನಾದೊಂದಿಗೆ ಪ್ರತಿ ವರ್ಷ ₹ 200 ಕೋಟಿ ವಹಿವಾಟು ಮಾಡುತ್ತೇವೆ. ಕೋವಿಡ್–19 ಸೋಂಕಿನಿಂದ ಕೇಶೋದ್ಯಮಕ್ಕೆ ಪೆಟ್ಟು ಬಿದ್ದಿಲ್ಲ’ ಎಂದು ಭಾಗ್ಯನಗರದ ಕೇಶೋದ್ಯಮಿ ಶ್ರೀನಿವಾಸ್ ಗುಪ್ತಾ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.