ತಾವರಗೇರಾ: ಪಟ್ಟಣದಲ್ಲಿ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಹಳ್ಳ ತುಂಬಿ ಹರಿಯುತ್ತಿದೆ. ಆದರೆ ಪಟ್ಟಣದ ಜನರ ಜೀವನಾಡಿ ರಾಯನಕೆರೆಗೆ ಮಾತ್ರ ನೀರು ಹರಿಯುತ್ತಿಲ್ಲ.
ಕೆರೆಯ ಹಿಂದಿನ ಕಾಲುವೆಯ ಫೀಡರ್ ಕಾಲುವೆ ಗೇಟ್ ಅರ್ಧ ತೆರೆದ ಕಾರಣ ಮಳೆ ನೀರು ಕೆರೆಗೆ ಹರಿಯುತ್ತಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಕೆರೆಗೆ ಹರಿಯದಂತೆ ಮುಚ್ಚಲಾಗಿದೆ. ಹೀಗೆ ಮಳೆ ನೀರಿನಿಂದ ಭರ್ತಿಯಾಗಿ ಜನರು, ಅಂತರ್ಜಲ ಹೆಚ್ಚಳಕ್ಕೆ ಆಸರೆಯಾಗಿದ್ದ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ ಎಂದು ಶ್ಯಾಮಣ್ಣ ಮಡ್ಡೇರ, ವೀರಭದ್ರಪ್ಪ ಬುಡಕುಂಟಿ ಮತ್ತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಮತ್ತು ಎರಡು ದಿನಗಳ ಹಿಂದ ಭಾರಿ ಮಳೆ ಸುರಿದಿದ್ದು, ಕೆರೆಗೆ ಸ್ವಲ್ಪ ನೀರು ಹರಿದು ಬರುತ್ತಿದೆ. ಆದರೆ ಹೆಚ್ಚು ನೀರು ನಂದಾಪುರ ರಸ್ತೆಯಲ್ಲಿ ಬರುವ ಹಳ್ಳದ ಮೂಲಕ ಧುಮುಕಿ ಹರಿಯುತ್ತಿದೆ. ಇದರಿಂದ ರಾಯನಕೆರೆಯಲ್ಲಿ ಸಂಗ್ರಹವಾಗಬೇಕಿದ್ದ ಮಳೆ ನೀರು ಹಳ್ಳದ ಪಾಲಾಗಿದೆ.
ಕೆರೆಗೆ ನೀರು ಹರಿದು ಬರುವ ಕಾಲುವೆ ಫೀಡರ್ ಕಾಲುವೆ ಗೇಟ್ ತೆರೆದಿದ್ದರೆ, ಮಳೆ ನೀರು ಸಂಗ್ರಹವಾಗಿ ಕೆರೆ ಭರ್ತಿಯಾಗುತಿತ್ತು. ಹಿರಿಯ ಅಧಿಕಾರಿಗಳು, ಗುತ್ತಿಗೆದಾರರಿಗೆ ಮುಂಗಾರು ಮಳೆ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದರೆ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರನ ಬೇಜವಾಬ್ದಾರಿತನದಿಂದಾಗಿ ಮಳೆಗಾಲದಲ್ಲಿ ಭರ್ತಿಯಾಗಬೇಕಿದ್ದ ಕೆರೆ ಖಾಲಿಯಾಗಿ ಉಳಿದಿದೆ. ಇನ್ನಾದರೂ ಅಧಿಕಾರಿಗಳು ತುರ್ತು ಕ್ರಮಕೈಗೊಂಡು ರಾಯನಕೆರೆಗೆ ಸಂಪೂರ್ಣ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಯನ ಕೆರೆ ಒಡ್ಡು, ಕಲ್ಲು ಜೋಡಣೆ, ಕೆರೆ ಕೆಳಗಿನ ಕಾಲುವೆ, ಸ್ವಚ್ಛತೆ ಕಾರ್ಯಕ್ಕೆ 2022–23ನೇ ಸಾಲಿನಲ್ಲಿ ₹ 1 ಕೋಟಿ ಮಂಜೂರಾಗಿದೆ. ಗುತ್ತಿಗೆದಾರ ಅಶೋಕ ಬಳ್ಳೊಳ್ಳಿ ಅವರು, ಗುತ್ತಿಗೆ ಪಡೆದಿದ್ದು, ಕಾಮಗಾರಿಗಾಗಿ ಕೆರೆ ಹಿನ್ನಿರಿನ ಕಾಲುವೆ ಗೇಟ್ ಬಂದ್ ಮಾಡಿ, ಮಳೆ ನೀರು ಕೆರೆಗೆ ಹರಿಯದಂತೆ ಒಡ್ಡು ಹಾಕಿದ್ದರು. ಅಲ್ಲದೇ ಮಳೆಗಾಲ ಮಾರ್ಚ್ ಮುಗಿಯುವುದರೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳಿಗೆ ಭರವಸೆ ನೀಡಿದ್ದರು. ಆದರೆ ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ.
ರಾಯನ ಕೆರೆಗೆ ಹರಿದು ಹೋಗುವ ಫೀಡರ್ ಕಾಲುವೆ ನೀರು ಹಲವು ಬಾರಿ ರೈತರ ಜಮೀನುಗಳಿಗೆ ನುಗ್ಗಿ ಅಪಾರ ಹಾನಿಯಾಗಿದೆ. ಆದ್ದರಿಂದ ಕಾಲುವೆಯನ್ನು ವೈಜ್ಞಾನಿಕವಾಗಿ ನಿರ್ಮಿಸಲು 2 ಕಿ.ಮೀ. ದೂರದವರೆಗೆ ಸರ್ವೆ ಕಾರ್ಯ ಮಾಡಲಾಗಿದೆ. ನೀರು ತುಂಬಿಸುವ ಸಲುವಾಗಿ ತಾತ್ಕಾಲಿಕವಾಗಿ ನಿರ್ಮಾಣ ಮತ್ತು ಭೂ ಸ್ವಾಧೀನ ಪಡೆದು, ಸರ್ವೆ ಕೈಗೊಂಡು, ನಕ್ಷೆ ತಯಾರಿಸಿ, ಕಾಲುವೆ ಕಾಮಗಾರಿ ಆರಭಿಸಲು ಕ್ರಿಯಾ ಯೋಜನೆ ತಯಾರಿಸಿರುವ ಬಗ್ಗೆ ಮನವಿ ಸಲ್ಲಿಸಿರುವ ದಾಖಲಾತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ರಾಯನಕೆರೆಗೆ ಮಳೆ ನೀರು ಫೀಡರ್ ಕಾಲುವೆ ಮೂಲಕ ಹರಿಯುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಮತ್ತೊಮ್ಮೆ ಸ್ಥಳ ಪರಿಶೀಲಿಸಿ ಕೆರೆಗೆ ನೀರು ಹರಿಯುವಂತೆ ಕ್ರಮಕೈಗೊಳ್ಳಲಾಗುವುದುಶ್ರೀನಿವಾಸ ರಾವ್,ಎಇ ಸಣ್ಣ ನೀರಾವರಿ ಇಲಾಖೆ ಕುಷ್ಟಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.