ಕೊಪ್ಪಳ: ‘ವಾಲ್ಮೀಕಿ ನಿಗಮದ ಹಗರಣದಲ್ಲಿ ಸಮುದಾಯದ ಜನರ ಹಣವನ್ನೇ ನುಂಗಿ ನೀರು ಕುಡಿದಿರುವ ಕಾಂಗ್ರೆಸ್‌ನವರು ಯಾವ ಮುಖ ಹೊತ್ತು ಉಪಚುನಾವಣೆಯಲ್ಲಿ ಜನರ ಬಳಿ ಮತ ಕೇಳುತ್ತಾರೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮೂರೂ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳೇ ಗೆಲುವು ಪಡೆಯುತ್ತಾರೆ. ಕಾಂಗ್ರೆಸ್‌ನವರು ಯಾವ ಮುಖ ಇಟ್ಟುಕೊಂಡು ಮತಕೇಳಲು ಸಂಡೂರಿಗೆ ಬರುತ್ತಾರೊ ಗೊತ್ತಿಲ್ಲ. ಅವರಿಗೆ ಮಾನ, ಮರ್ಯಾದೆ ಇದ್ದಿದ್ದರೆ ಮತಕ್ಕಾಗಿ ಬರುತ್ತಿರಲಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ವಾಲ್ಮೀಕಿ ನಿಗಮದ ಹಣದಲ್ಲಿ ಖುದ್ದು ಇಲಾಖೆಯ ಸಚಿವರೇ ಜೈಲಿಗೆ ಹೋಗಿ ಬಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ರಾಜಕೀಯ ಬದುಕಿನಲ್ಲಿ ಒಂದೇ ಒಂದು ಕಪ್ಪುಚುಕ್ಕೆಯೇ ಇಲ್ಲ ಎನ್ನುತ್ತಾರೆ. ಆದರೆ ಈಗ ಪುಸ್ತಕ ತೆರೆದರೆ ಕಪ್ಪು ಚುಕ್ಕೆಗಳಷ್ಟೇ ಕಾಣುತ್ತವೆ’ ಎಂದರು.
ವಕ್ಫ್ ಮಂಡಳಿ ಆಸ್ತಿ ವಿಚಾರವಾಗಿ ಪ್ರತಿಕ್ರಿಯಿಸಿ ‘400ರಿಂದ 500 ವರ್ಷಗಳಿಂದ ಉಳುಮೆ ಮಾಡಿದ ಭೂಮಿ ವಕ್ಪ್ ಬೋರ್ಡ್‌ಗೆ ಸೇರಿಕೊಂಡಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಏನೊ ಮಾಡಲು ಹೋಗಿ ಜಾರಿ ಬಿದ್ದ ಜಾಣ ಆಗಿದ್ದಾರೆ. ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತಿತ್ತು. ಇದು ಹಿಂದೂ ಹಾಗೂ ಮುಸ್ಲಿಮರ ನಡುವಿನ ವಿವಾದವಲ್ಲ. ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ’ ಎಂದರು.
ಬಿಜೆಪಿ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಗಣೇಶ ಹೊರತಟ್ನಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.