ಕೊಪ್ಪಳ: ಇಲ್ಲಿನ ಐತಿಹಾಸಿಕ ಗವಿಸಿದ್ದೇಶ್ವರ ಮಠದ 17ನೇ ಪೀಠಾಧಿಪತಿಯಾಗಿದ್ದ ಶಿವಶಾಂತವೀರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಅಂಗವಾಗಿ ಬುಧವಾರ ಬೆಳಿಗ್ಗೆ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಂದ ಪಾದಯಾತ್ರೆ ನಡೆಯಿತು. ಸ್ವಾಮೀಜಿ ಜೊತೆಗೆ ಸಾವಿರಾರು ಭಕ್ತರು ಹೆಜ್ಜೆ ಹಾಕಿದರು.
ಮಠದ ಭಕ್ತರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮಳೆಮಲ್ಲೇಶ್ವರ ಬೆಟ್ಟದ ಮೇಲಿನಿಂದ ಪಾದಯಾತ್ರೆ ಆರಂಭಿಸಿ ಗವಿಮಠದ ತನಕ ಸಾಗಿದರು. ಈಗಿನ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಪಾದಯಾತ್ರೆಯಲ್ಲಿ ಸಾಗಿಬಂದ ಮಾರ್ಗದುದ್ದಕ್ಕೂ ಭಕ್ತರು ಹೂಮಳೆಗೆರೆದು ಭಕ್ತಿ ಸಮರ್ಪಿಸಿದರು. ಮಾರ್ಗದುದ್ದಕ್ಕೂ ಶಿವಶಾಂತವೀರ ಸ್ವಾಮೀಜಿ ಅವರ ಸ್ಮರಣೆ ಮಾಡಿದರು.
ಬಿಸಿಲಿನ ಕಾವು ಏರಿದ ಕಾರಣ ಭಕ್ತರೇ ಸ್ವಯಂಪ್ರೇರಿತರಾಗಿ ಮಾರ್ಗದುದ್ದಕ್ಕೂ ಕುಡಿಯುವ ನೀರು, ಚಾಕೊಲೆಟ್, ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು.
ಭಕ್ತರ ದಂಡು: ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಬೆಳಗಿನ ಜಾವದಿಂದಲೆ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ದಿನಪೂರ್ತಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.