ಅಂಜನಾದ್ರಿ: ಸೂರ್ಯನ ಬೆಳಕಿನ ಕಿರಣಗಳು ಭೂಮಿಗೆ ಬಿದ್ದಿರಲಿಲ್ಲ. ಆಗಲೇ ಅಂಜನಾದ್ರಿ ಬೆಟ್ಟದ ಮೇಲೆ ಸಾವಿರಾರು ಹನುಮ ಭಕ್ತರು ‘ಜೈ ಶ್ರೀರಾಮ್, ಜೈ ಜೈ ಶ್ರೀರಾಮ್’ ಎನ್ನುವ ಘೋಷಣೆಗಳನ್ನು ಮೊಳಗಿಸುತ್ತಿದ್ದರು. ತಮ್ಮ ಕೊರಳಲ್ಲಿದ್ದ ಗಂಧದ ಮಾಲೆಯನ್ನು ವಿಸರ್ಜನೆ ಮಾಡಿ ಆಂಜನೇಯನ ದರ್ಶನ ಪಡೆದರು.
ಇದು ಹನುಮಮಾಲೆ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾನುವಾರ ಬೆಳಗಿನ ಜಾವ ಕಂಡು ಬಂದ ಚಿತ್ರಣ.
575 ಮೆಟ್ಟಿಲುಗಳನ್ನು ಹತ್ತಿದ ಬಳಿಕ ಸಿಗುವ ಅಂಜನಾದ್ರಿಯ ಬೆಟ್ಟದ ಮೇಲೆ ಹನುಮ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಥರಗುಟ್ಟುವ ಚಳಿ ಕೂಡ ಅವರನ್ನು ಕಾಡುತ್ತಿಲ್ಲ. ರಾಮ ನಾಮ ಜಪ ಮಾಡುತ್ತ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಭಕ್ತರು ಮಾಲೆ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಂಜನಾದ್ರಿ ಬೆಟ್ಟ, ಸಮೀಪದಲ್ಲಿ ತುಂಗಭದ್ರಾ ನದಿ ಹಾಗೂ ಅದರ ಸುತ್ತಲಿನ ಹಸಿರು ಪ್ರಕೃತಿ ಸೌಂದರ್ಯಕ್ಕೆ ಸಾಕ್ಷಿಯಂತಿದೆ. ಎದುರಿನ ವ್ಯಕ್ತಿಯೂ ಸರಿಯಾಗಿ ಕಾಣದಷ್ಟು ದಟ್ಟ ಮಂಜಿನ ವಾತಾವರಣವಿದೆ. ಇದರ ನಡುವೆಯೂ ಹನುಮನ ಭಕ್ತರು ಮಾಲೆ ವಿಸರ್ಜನೆ ಮಾಡಿದರು.
ಶನಿವಾರ ರಾತ್ರಿಯೇ ಬೇರೆ ಜಿಲ್ಲೆಗಳಿಂದ ಅಂಜನಾದ್ರಿಗೆ ಬಂದಿರುವ ಭಕ್ತರು ಮಧ್ಯರಾತ್ರಿಯಿಂದಲೇ ಮಾಲೆ ವಿಸರ್ಜನೆಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಭಕ್ತರು 5, 11 ಹಾಗೂ 21 ದಿನಗಳ ಕಾಲ ವ್ರತದ ಸಂಕಲ್ಪ ಮಾಡಿ ತುಳಸಿ ಮಾಲೆ ಧರಿಸುತ್ತಾರೆ. ವ್ರತ ಪೂರ್ಣಗೊಳಿಸಿ ಅಂಜನಾದ್ರಿಯಲ್ಲಿ ಮಾಲೆ ವಿಸರ್ಜನೆ ಮಾಡುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.