ADVERTISEMENT

ಕುಷ್ಟಗಿ | ನ್ಯಾಯಾಲಯ ಸಂಕೀರ್ಣದ ಮುಂದೆ ಶೌಚ ತ್ಯಾಜ್ಯ

ನಾರಾಯಣರಾವ ಕುಲಕರ್ಣಿ
Published 23 ಜೂನ್ 2024, 5:13 IST
Last Updated 23 ಜೂನ್ 2024, 5:13 IST
<div class="paragraphs"><p><strong>ಕುಷ್ಟಗಿ ನ್ಯಾಯಾಲಯ ಸಂಕೀರ್ಣದ ಮುಂದೆಯೇ ಅಲ್ಲಿಯ ಶೌಚಾಲಯಗಳ ತ್ಯಾಜ್ಯ ಸಂಗ್ರಹವಾಗಿರುವುದಕ್ಕೆ ವಕೀಲರು ಬೇಸರ ವ್ಯಕ್ತಪಡಿಸಿದರು.</strong></p></div>

ಕುಷ್ಟಗಿ ನ್ಯಾಯಾಲಯ ಸಂಕೀರ್ಣದ ಮುಂದೆಯೇ ಅಲ್ಲಿಯ ಶೌಚಾಲಯಗಳ ತ್ಯಾಜ್ಯ ಸಂಗ್ರಹವಾಗಿರುವುದಕ್ಕೆ ವಕೀಲರು ಬೇಸರ ವ್ಯಕ್ತಪಡಿಸಿದರು.

   

ಕುಷ್ಟಗಿ: ಇಲ್ಲಿಯ ನ್ಯಾಯಾಲಯ ಸಂಕೀರ್ಣದ ಮುಂದೆಯೇ ಅಲ್ಲಿಯ ಶೌಚಾಲಯಗಳ ತ್ಯಾಜ್ಯ ಮಡುಗಟ್ಟಿದ್ದು ಅದರಿಂದ ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರು ನಿತ್ಯ ತೊಂದರೆ ಅನುಭವಿಸುತ್ತಿರುವುದು ಕಂಡುಬಂದಿದೆ.

ವಕೀಲರ ಸಂಘ, ಉಪಾಹಾರ ಗೃಹದ ಮತ್ತು ನ್ಯಾಯಾಲಯಗಳ ಒಳಗೆ ಪ್ರವೇಶಿಸುವ ಎರಡನೇ ಮುಖ್ಯದ್ವಾರದ ಬಳಿ ಇಂಥ ಅಸಹನೀಯ ದೃಶ್ಯ ಕಣ್ಣಿಗೆ ರಾಚುತ್ತಿದೆ. ಅಷ್ಟೇ ಅಲ್ಲ ಸುತ್ತಲಿನ ವಾತಾವರಣ ಮಲಿನವಾಗಿದೆ. ಬರಲು, ಹೋಗಲು ಬೇರೆ ದಾರಿ ಇಲ್ಲದ ಕಾರಣ ವಕೀಲರು, ಸಾರ್ವಜನಿಕರು ಮತ್ತು ಕಕ್ಷಿದಾರರು ಶೌಚಾಲಯದ ಕೊಳಚೆ ತುಳಿಯುತ್ತ ಮೂಗು ಮುಚ್ಚಿಕೊಂಡೇ ಸಂಚರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ADVERTISEMENT

‘ಈ ತ್ಯಾಜ್ಯ ಸಂಗ್ರವಾಗಿರುವ ಜಾಗದಲ್ಲಿಯೇ ನ್ಯಾಯಾಲಯ ಸಂಕೀರ್ಣದ ಉಪಾಹಾರ ಗೃಹ ಇದ್ದು ಚಹಾ, ಉಪಾಹಾರ, ಊಟಕ್ಕೆ ಅಲ್ಲಿಗೆ ಹೋಗುವುದನ್ನೇ ಬಿಟ್ಟಿದ್ದೇವೆ. ನ್ಯಾಯಾಲಯಕ್ಕೆ ಬರುವವರು ಈ ಹೊಲಸನ್ನು ಮೈಗೆ ಅಂಟಿಸಿಕೊಂಡೇ ಹೋಗುವಂತಾಗಿದೆ’ ಎಂದು ವಕೀಲರು ಮತ್ತು ಸಿಬ್ಬಂದಿ ಅಳಲು ತೋಡಿಕೊಂಡರು.

ಆಗಿದ್ದೇನು: ಕೆಲ ವರ್ಷಗಳ ಹಿಂದಷ್ಟೇ ಈ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೊಂಡಿದೆ. ಕಟ್ಟಡ ನಿರ್ಮಾಣದ ವೇಳೆ ಶೌಚಾಲಯದ ತ್ಯಾಜ್ಯ ಹರಿದುಹೋಗುವುದಕ್ಕೆ ಸೂಕ್ತ ರೀತಿಯಲ್ಲಿ ಕಾಮಗಾರಿ ನಡೆಸಿಲ್ಲ. ಚೇಂಬರ್‌ಗಳು (ಬ್ಲಾಕ್) ಕಟ್ಟಿಕೊಂಡಿವೆ. ಅನೇಕ ಬಾರಿ ಹೊರಕ್ಕೆ ತೆಗೆದುಹಾಕಲಾಗುತ್ತಿದ್ದರೂ ಚೇಂಬರ್‌ ದುರಸ್ತಿಯಾಗದ ಕಾರಣ ತ್ಯಾಜ್ಯ ಉಕ್ಕಿ ನ್ಯಾಯಾಲಯದ ಮುಂದೆ ಸಂಗ್ರಹವಾಗುತ್ತಿದೆ. ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ವಕೀಲರು ‘ಪ್ರಜಾವಾಣಿ’ ಬಳಿ ದೂರಿದರು.

ಶಾಸಕಗೆ ಮನವಿ: ‘ಈಚೆಗೆ ಶಾಸಕ ದೊಡ್ಡನಗೌಡ ಪಾಟೀಲ ವಕೀಲರ ಸಂಘಕ್ಕೆ ಭೇಟಿ ನೀಡಿದಾಗ ಈ ದುರವಸ್ಥೆಯನ್ನು ಅವರ ಗಮನಕ್ಕೆ ತಂದಿದ್ದೇವೆ. ದುರಸ್ತಿಗೆ ಕ್ರಮಕೈಗೊಳ್ಳುವಂತೆಯೂ ಮನವಿ ಮಾಡಿದ್ದೆವು. ಆದರೆ ಈವರೆಗೂ ಯಾವುದೇ ಕೆಲಸ ನಡೆದಿಲ್ಲ’ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ವಿಜಯಮಹಾಂತೇಶ ಕುಷ್ಟಗಿ, ಉಪಾಧ್ಯಕ್ಷ ಪರಶುರಾಮ ದೊಡ್ಡಮನಿ, ವಕೀಲ ಫಕೀರಪ್ಪ ಚಳಗೇರಿ, ಶಶಿಕುಮಾರ ಶೆಟ್ಟರ, ಪಿ.ರಮೇಶ್, ಪ್ರಭು ಸೂಡಿ ಇತರೆ ವಕೀಲರು ಅಸಮಾಧಾನ ಹೊರಹಾಕಿದರು.

ದುರಸ್ತಿಗೆ ಹಣವಿಲ್ಲ; ಕೈಚೆಲ್ಲಿದ ಪಿಡಬ್ಲೂಡಿ

ನ್ಯಾಯಾಲಯದ ಮುಂದೆ ಕೊಳಚೆ ನೀರು ಸಂಗ್ರಹವಾಗುತ್ತಿರುವುದು ಮತ್ತು ನ್ಯಾಯಾಧೀಶರ ವಾಹನ ನಿಲುಗಡೆ ಸ್ಥಳದಲ್ಲಿ ಮಳೆನೀರು ನಿಲ್ಲುತ್ತಿದ್ದು ದುರಸ್ತಿಗೆ ತುರ್ತುಕ್ರಮ ಕೈಗೊಳ್ಳಲು ನ್ಯಾಯಾಲಯದಿಂದ ಜೂನ್ 13 ರಂದು ಲೋಕೋಪಯೋಗಿ ಇಲಾಖೆಗೆ ಎರಡು ಪ್ರತ್ಯೇಕ ಪತ್ರಗಳನ್ನು ಬರೆಯಲಾಗಿತ್ತು. ಆದರೆ ದುರಸ್ತಿಗೆ ಅನುದಾನ ಲಭ್ಯವಿಲ್ಲ ಎಂದು ಜೂನ್‌ 20ರಂದು ನ್ಯಾಯಾಲಯಕ್ಕೆ ಬರೆದ ಪತ್ರದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ವಿವರಿಸಿದ ಎಇಇ ರಾಜಪ್ಪ, ಈಗಾಗಲೇ ಎರಡು ಮೂರು ಬಾರಿ ಸ್ವಚ್ಛಗೊಳಿಸಿದ್ದರೂ ಪುನಃ ತ್ಯಾಜ್ಯ ಸಂಗ್ರಹವಾಗುತ್ತಿದೆ. ಅನುದಾನ ಬಿಡುಗಡೆಯಾದರೆ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು. ಅಲ್ಲದೆ ನ್ಯಾಯಾಲಯದ ನಿರ್ವಹಣೆ ಜವಾಬ್ದಾರಿ ಲೋಕೋಪಯೋಗಿ ಇಲಾಖೆಯದ್ದಲ್ಲ, ಸಣ್ಣಪುಟ್ಟ ದುರಸ್ತಿ ಕೆಲಸಗಳನ್ನು ನ್ಯಾಯಾಲಯದವರೇ ಮಾಡಿಸಿಕೊಳ್ಳಬಹುದಾಗಿದೆ’ ಎಂದು ಹೇಳಿದರು.

ಶೌಚಾಲಯ ತ್ಯಾಜ್ಯದಲ್ಲಿಯೇ ನಿತ್ಯ ಕಾರ್ಯನಿರ್ವಹಿಸುತ್ತಿದ್ದೇವೆ, ನ್ಯಾಯಾಲಯದ ಸ್ಥಿತಿಯೇ ಹೀಗಾದರೆ ಬೇರೆಯವರ ಪಾಡೇನು. ಯಾರ ಬಳಿ ನ್ಯಾಯಕ್ಕೆ ಅಂಗಲಾಚಬೇಕು ಎಂಬುದೇ ತಿಳಿಯುತ್ತಿಲ್ಲ.
ವಿಜಯ ಮಹಾಂತೇಶ ಕುಷ್ಟಗಿ, ವಕೀಲರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.