ADVERTISEMENT

ಕೊಪ್ಪಳ | ತುಂಗಭದ್ರೆಯ ಚೆಲುವಿಗೆ ಮನಸೋತ ಪ್ರವಾಸಿಗರು

ಗುರುರಾಜ ಅಂಗಡಿ
Published 1 ಆಗಸ್ಟ್ 2024, 6:02 IST
Last Updated 1 ಆಗಸ್ಟ್ 2024, 6:02 IST
ಮುನಿರಾಬಾದ್‌ನ ತುಂಗಭದ್ರಾ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ಕ್ರಸ್ಟ್ ಗೇಟುಗಳ ಮೂಲಕ ಹರಿಸಲಾಗುತ್ತಿದ್ದು ಪ್ರವಾಸಿಗರು ನೀರಿನ ಸೊಬಗನ್ನು ಕಣ್ಣು ತುಂಬಿಕೊಂಡರು
ಮುನಿರಾಬಾದ್‌ನ ತುಂಗಭದ್ರಾ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ಕ್ರಸ್ಟ್ ಗೇಟುಗಳ ಮೂಲಕ ಹರಿಸಲಾಗುತ್ತಿದ್ದು ಪ್ರವಾಸಿಗರು ನೀರಿನ ಸೊಬಗನ್ನು ಕಣ್ಣು ತುಂಬಿಕೊಂಡರು   

ಮುನಿರಾಬಾದ್: ಇಲ್ಲಿನ ತುಂಗಭದ್ರಾ ಜಲಾಶಯವು ನಿರಂತರ ಮಳೆಯಿಂದ ಭರ್ತಿಯಾಗಿದ್ದು, ಹೆಚ್ಚುವರಿ ನೀರು ನದಿಗೆ ಹರಿಸಲಾಗುತ್ತಿದೆ.

ಜಲಾಶಯದಿಂದ ಧುಮ್ಮಿಕ್ಕುವ ನೀರು ಮತ್ತು ನೊರೆಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ.

ಜಲಾಶಯ ಹಿನ್ನೀರಿನ ಲೇಕ್ ವ್ಯೂ ಪ್ರವಾಸಿ ಮಂದಿರದ ಬಳಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬಂದರು. ತೆರೆ ಬರುವ ವೇಳೆ ಮತ್ತು ಗಾಳಿಯ ಪರಿಣಾಮ ಸಿಡಿಯುವ ನೀರ ಸಿಂಚನಕ್ಕೆ ಮೈವೊಡ್ಡಿ ಮಕ್ಕಳು ಸಮೇತ ಪ್ರವಾಸಿಗರು ಪುಳಕಗೊಂಡರು. ಅಲ್ಲಿನ ಸಿಬ್ಬಂದಿಯ ಎಚ್ಚರಿಕೆ ಹೊರತಾಗಿಯೂ ಕೆಲವರು ದಡದಲ್ಲಿ ನಿಂತು ಸ್ನಾನ ಮಾಡಿದ್ದು ಕಂಡುಬಂತು.

ADVERTISEMENT

ಜಲಾಶಯದ ಮುಂಭಾಗದಲ್ಲಿ ಇರುವ ಹಳೆ ಸೇತುವೆ ನೀರಿನಲ್ಲಿ ಮುಳುಗಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಿ, ಮುಳ್ಳು ಮತ್ತು ಬ್ಯಾರಿಕೇಡ್ ಹಾಕಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಅಲ್ಲೂ ಕೂಡ ಪ್ರವಾಸಿಗರು ಕಂಡುಬಂದರು.

ಜಲಾಶಯ ಮುಂಭಾಗದ ಭತ್ತದ ಗದ್ದೆಯ ಹತ್ತಿರ ಕೆಲವು ಪ್ರವಾಸಿಗರು ಜಲಾಶಯದ ಮುಂಭಾಗಕ್ಕೆ ತೆರಳಿ ನೀರಿನ ವೈಭವವನ್ನು ಕಣ್ತುಂಬಿಕೊಂಡರು. ಕೆಲವು ಪ್ರವಾಸಿಗರು ಜಲಾಶಯದ ಕ್ರಸ್ಟ್ ಗೇಟ್ ಮೇಲ್ಭಾಗದಲ್ಲಿ ಹೋಗುವ ಅವಕಾಶ ಪಡೆದರೆ, ಇನ್ನು ಹಲವರು ಪ್ರವೇಶ ಸಿಗದೇ ವಾಪಸ್ ಹೋದ ಘಟನೆಯು ನಡೆಯಿತು.

ಹುಲಿಗಿಯ ಹುಲಿಗೆಮ್ಮ ದೇವಸ್ಥಾನ ಬಳಿಯ ಸ್ನಾನ ಘಟ್ಟ ಮುಳುಗಡೆಯಾಗಿದೆ. ದೇವಿಯ ದರ್ಶನಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರನ್ನು ದೇವಸ್ಥಾನ ಸಿಬ್ಬಂದಿ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಎಚ್ಚರಿಕೆ ನೀಡಿ ವಾಪಸ್ ಕಳಿಸುತ್ತಿರುವುದು ಕಂಡುಬಂತು.

ಸಮೀಪದ ಶಿವಪುರ ತುಂಗಭದ್ರಾ ತೀರದ ಮಾರ್ಕಂಡೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹರಿಯುವ ನೀರು ಸುಮಾರು 5 ಅಡಿ ಅಂತರದಲ್ಲಿ ದೇವಸ್ಥಾನ ಕಂಡುಬಂತು. ಹುಲಿಗೆಮ್ಮ ದೇವಸ್ಥಾನ ಹಾಗೂ ಮಾರ್ಕಂಡೇಶ್ವರ ದೇವಸ್ಥಾನದ ಬಳಿ ಹಲವು ಭಕ್ತರು ತುಂಬಿದ ನದಿಗೆ ಗಂಗಾ ಪೂಜೆ ನೆರವೇರಿಸಿದರು.

ಮುನಿರಾಬಾದ್‌ನ ತುಂಗಭದ್ರ ಜಲಾಶಯದ ಹೆಚ್ಚುವರಿ ನೀರು ಶಿವಪುರ ಮಾರ್ಕಂಡೇಶ್ವರ ದೇವಸ್ಥಾನದ ಹತ್ತಿರಕ್ಕೆ ನೀರು ತಲುಪಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.