ADVERTISEMENT

ಕೊಪ್ಪಳ | ಪಟ್ಟಣ ಪಂಚಾಯಿತಿ ಚುನಾವಣೆ: ಇನ್ನೂ ನಿಗದಿಯಾಗದ ಮುಹೂರ್ತ

ಪಟ್ಟಣ ಪಂಚಾಯಿತಿ ಮೀಸಲಾತಿ ಘೋಷಣೆಯಾಗಿ 45 ದಿನ

ಮೆಹಬೂಬ ಹುಸೇನ
Published 21 ಸೆಪ್ಟೆಂಬರ್ 2024, 5:47 IST
Last Updated 21 ಸೆಪ್ಟೆಂಬರ್ 2024, 5:47 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ಕನಕಗಿರಿ: ಜಿಲ್ಲೆಯ ಪಟ್ಟಣ ಪಂಚಾಯಿತಿ,‌ ಪುರಸಭೆ ಹಾಗೂ ನಗರಸಭೆಯ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಘೋಷಣೆಯಾಗಿ ಒಂದೂವರೆ ತಿಂಗಳು ಕಳೆದರೂ ಇಲ್ಲಿನ ಪಟ್ಟಣ‌ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ‌ ಚುನಾವಣೆಗೆ‌ ಇನ್ನೂ ಮುಹೂರ್ತ ನಿಗದಿಯಾಗದಿರುವುದು ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಪಟ್ಟಣ ಪಂಚಾಯಿತಿ ಸದಸ್ಯ ಸ್ಥಾ‌ನಗಳಿಗೆ ಚುನಾವಣೆ ನಡೆದು 2 ವರ್ಷ 9 ತಿಂಗಳ ನಂತರ ಸರ್ಕಾರ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಅ’ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಘೋಷಣೆ ಮಾಡಿದೆ.

17 ಸದಸ್ಯರ ಪೈಕಿ 12 ಜನ ಕಾಂಗ್ರೆಸ್ ಹಾಗೂ ಉಳಿದ ಐದು‌ ಸದಸ್ಯರು ಬಿಜೆಪಿಯವರಿದ್ದಾರೆ. ವಿಶೇಷ ಅಂದರೆ ಈ ಎರಡು ಹುದ್ದೆಗಳಿಗೆ ಸ್ಪರ್ಧಿಸುವಂತಹ ಮೀಸಲಾತಿಯುಳ್ಳವರು ಬಿಜೆಪಿಯಲ್ಲಿ ಇಲ್ಲ. ಎರಡೂ ಸ್ಥಾನಗಳು ಸರಳವಾಗಿ ಕೈ ವಶವಾಗಲಿವೆ. ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡದ ಕಾಂಗ್ರೆಸ್ ಸದಸ್ಯ ಕಂಠಿರಂಗಪ್ಪ ನಾಯಕ ಅವರು ಒಬ್ಬರೇ ಇರುವ ಕಾರಣ ಅವಿರೋಧ ಆಯ್ಕೆಯಾಗುವುದು‌
ನಿಶ್ಚಿತವಾಗಿದೆ. ಇನ್ನು ಅಧ್ಯಕ್ಷ ಸ್ಥಾ‌ನಕ್ಕೆ ಹುಸೇನಬೀ ಚಳ್ಳಮರದ, ಸೈನಾಜ ಬೇಗ್ಂ ಗುಡಿಹಿಂದಲ, ತನುಜಾ ರಾಮಚಂದ್ರ ಹಾಗೂ ಹುಸೇನಬೀ ಸಂತ್ರಾಸ್ ಎಂಬ ಸದಸ್ಯೆಯರು ಸ್ಪರ್ಧೆಯಲ್ಲಿದ್ದಾರೆ. ಇವರಲ್ಲಿ ಮೂವರು ಅಲ್ಪಸಂಖ್ಯಾತರು ಹಾಗೂ ಒಬ್ಬ ಗಂಗಾಮತ ಸಮಾಜದ ಮಹಿಳೆ ಇದ್ದಾರೆ.

ಮುಸುಕಿನ‌ ಗುದ್ದಾಟ: ಅಧ್ಯಕ್ಷ ಸ್ಥಾನದ ಮೀಸಲಾತಿ ಕಾಂಗ್ರೆಸ್‌ನಲ್ಲಿ ಮುಸುಕಿನ‌ ಗುದ್ದಾಟಕ್ಕೆ ಕಾರಣವಾಗಿದ್ದು, ಎರಡು ಬಣಗಳಾಗಿ ರೂಪುಗೊಂಡಿವೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಎರಡು ಬಣಗಳಲ್ಲಿ ಗುರುತಿಸಿಕೊಂಡಿದ್ದು ಹಿರಿಯ ಮುಖಂಡರ ಬಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಣ ರಾಜಕೀಯ ಸಚಿವ ಶಿವರಾಜ ತಂಗಡಗಿ ಅವರಿಗೆ ತಲೆನೋವು ತಂದಿದೆ.

ಪಟ್ಟಣದಲ್ಲಿ ಅಲ್ಪಸಂಖ್ಯಾತರ ಮತಗಳು ಗಣನೀಯ ಸಂಖ್ಯೆಯಲ್ಲಿದ್ದು 35 ವರ್ಷಗಳಿಂದಲೂ ಮುಸ್ಲಿಂರು ಅಧ್ಯಕ್ಷರಾಗಿಲ್ಲ. ಈಗ ಅವಕಾಶ‌ ಬಂದಿದೆ. ಸಮಾಜಕ್ಕೆ ಆದ್ಯತೆ ನೀಡಿ ಎಂದು ಸಚಿವ ತಂಗಡಗಿ ಹಾಗೂ ಕಾಂಗ್ರೆಸ್ ಮುಖಂಡರಲ್ಲಿ ಸಮಾಜದವರು ಮನವಿ ಸಲ್ಲಿಸಿದ್ದಾರೆ.

ಇತ್ತ ತನುಶ್ರೀ ಅವರ‌ ಪತಿ ಟಿ.‌ಜೆ.ರಾಮಚಂದ್ರ ಅವರು ತಂಗಡಗಿ ಬೆಂಬಲಿಗರಾಗಿದ್ದು ಪಕ್ಷಕ್ಕಿಂತ ತಂಗಡಗಿ ನಡೆಯನ್ನು ಬೆಂಬಲಿಸಿದವರು. ತಂಗಡಗಿ ಸೇರಿದಂತೆ ಸಮಾಜ ಬಾಂಧವರ‌ ಮೂಲಕ ಒತ್ತಡ ಹಾಕಿದ್ದಾರೆ. ಪೈಪೋಟಿ ನಡೆದ ಪರಿಣಾಮ ಯಾರನ್ನು ಅಭ್ಯರ್ಥಿ ಮಾಡಬೇಕೆಂಬುದು ಕಗ್ಗಂಟಾಗಿ ಪರಿಣಮಿಸಿದ್ದು ಆಯ್ಕೆ ಪ್ರಕ್ರಿಯೆ‌ ವಿಳಂಬವಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಹದಿನೈದು ತಿಂಗಳ ಸೂತ್ರ:

ಆಕಾಂಕ್ಷಿಗಳು ನಾಲ್ಕು ಜನರಿರುವ ಕಾರಣ ಇಬ್ಬರಿಗೆ ತಲಾ ಹದಿನೈದು‌ ತಿಂಗಳ ಅಧಿಕಾರ ನೀಡಬೇಕೆಂಬ ಸೂತ್ರವನ್ನು ಸಚಿವರು ಹೆಣೆದಿದ್ದಾರೆ ಎಂದು ಹೇಳಲಾಗುತ್ತಿದ್ದು ಯಾರು ಮೊದಲು ಎಂಬ ಪ್ರಶ್ನೆ ಸದಸ್ಯರಿಗೆ ಕಾಡುತ್ತಿದೆ.

ಅಧಿಕಾರ‌ ನೀಡಿ:

ಎರಡು ಹುದ್ದೆಗಳಿಗೆ ಸ್ಪರ್ಧಿಸಲು ಬಿಜೆಪಿಯಲ್ಲಿ ಮೀಸಲಾತಿ ಹೊಂದಿದ ಸದಸ್ಯರು‌ ಇಲ್ಲ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿರುವುದು ಏಕೆ ಎಂದು ಬಿಜೆಪಿ ಸದಸ್ಯ ಹನುಮಂತಪ್ಪ ಬಸರಿಗಿಡದ ಪ್ರಶ್ನಿಸಿದ್ದಾರೆ.

ಹಿಂದೇಟು ಏಕೆ?

ಎರಡೂ ಹುದ್ದೆಗಳಿಗೆ ಸ್ಪರ್ಧಿಸಲು ಬಿಜೆಪಿಯಲ್ಲಿ ಮೀಸಲಾತಿ ಹೊಂದಿದ ಸದಸ್ಯರು‌ ಇಲ್ಲ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿರುವುದು ಏಕೆ ಎಂದು ಬಿಜೆಪಿ ಸದಸ್ಯ ಹನುಮಂತಪ್ಪ ಬಸರಿಗಿಡದ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.