ADVERTISEMENT

ಪ್ರೌಢಶಾಲೆ, ಆರೋಗ್ಯ ಕೇಂದ್ರ ಮಂಜೂರಿಗೆ ಯತ್ನ

ಅಭಯ ಹಸ್ತ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 16:23 IST
Last Updated 7 ಆಗಸ್ಟ್ 2023, 16:23 IST
ಕನಕಗಿರಿ‌ ಸಮೀಪದ ಜೀರಾಳ ಗ್ರಾಮದಲ್ಲಿ ಸೋಮವಾರ ನಡೆದ ಅಭಯ ಹಸ್ತ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು
ಕನಕಗಿರಿ‌ ಸಮೀಪದ ಜೀರಾಳ ಗ್ರಾಮದಲ್ಲಿ ಸೋಮವಾರ ನಡೆದ ಅಭಯ ಹಸ್ತ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು   

ಕನಕಗಿರಿ: ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಚರಂಡಿ, ಶಾಲಾ ಕಟ್ಟಡ ನಿರ್ಮಾಣ, ಅಂಗನವಾಡಿ ಕೇಂದ್ರಗಳ ದುರಸ್ತಿ, ನಿವೇಶನ ಹಕ್ಕುಪತ್ರ ವಿತರಣೆ ಸೇರಿದಂತೆ ಇತರೆ ಮೂಲಸೌಕರ್ಯ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.

ತಾಲ್ಲೂಕಿನ ಜೀರಾಳ, ಹೊಸ ಕಲ್ಗುಡಿ, ಹಳೇ ಕಲ್ಗುಡಿ ಗ್ರಾಮ ಹಾಗೂ ಕಲ್ಗುಡಿ ಕ್ಯಾಂಪ್‌ನಲ್ಲಿ ಸೋಮವಾರ ನಡೆದ ಅಭಯ ಹಸ್ತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚುನಾವಣೆ ಸಮಯದಲ್ಲಿ ನೀಡಿದ ಪ್ರತಿ ಭರವಸೆ ಹಾಗೂ ಜನರ ಬೇಡಿಕೆಗಳನ್ನು ತಪ್ಪದೇ ಈಡೇರಿಸಲಾಗುವುದು. ಹೀಗಾಗಿ ಪ್ರತಿ ಗ್ರಾಮಗಳಿಗೂ ಖುದ್ದಾಗಿ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಲಾಗುತ್ತಿದೆ ಎಂದರು.

ADVERTISEMENT

ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಜೀರಾಳ‌ ಗ್ರಾಮದಲ್ಲಿ ಶೀಘ್ರವಾಗಿ ಪ್ರೌಢಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಿ ಮಾಡಲು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಕ್ರಮ‌ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೊಸ ಕಲ್ಗುಡಿ ಗ್ರಾಮದ ಜನರಿಗೆ ಹಲವು ವರ್ಷ ಕಳೆದರೂ ಇನ್ನೂ ಹಕ್ಕುಪತ್ರ ನೀಡಿಲ್ಲ. ಈ ಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಸಚಿವರ ಗಮನಕ್ಕೆ ತಂದರು. ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿದ ತಂಗಡಗಿ, ಹಕ್ಕುಪತ್ರ ವಿತರಿಸದ ಬಗ್ಗೆ ಅಧಿಕಾರಿಯಿಂದ ಮಾಹಿತಿ ಪಡೆದುಕೊಂಡು ಒಂದು ತಿಂಗಳೊಳಗೆ ಹಕ್ಕುಪತ್ರ ವಿತರಿಸಬೇಕು ಎಂದು ನಿರ್ದೇಶಿಸಿದರು. ಇದೇ ವೇಳೆ ಗ್ರಾಮದ ಸುತ್ತ ಎರಡು ಕಿ.ಮೀ ಒಳಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ತಿಳಿಸಿದರು.

ಕಲ್ಗುಡಿ ಕ್ಯಾಂಪ್ ಬಳಿ ಕಾಲುವೆಯ ತಗ್ಗು ಪ್ರದೇಶದಲ್ಲಿರುವ ಅಂದಾಜು 25 ಕುಟುಂಬಗಳಿಗೆ ನಿವೇಶನ ನೀಡಲಾಗುವುದು. ನಿವೇಶನಕ್ಕೆ ಅಗತ್ಯವಿರುವ ಒಂದು ಎಕರೆ ಜಾಗ ಒದಗಿಸಿದರೆ ಮಾರುಕಟ್ಟೆಯ ದರ ನೀಡಲಾಗುವುದು. ಜಾಗ ದೊರೆತರೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ತಂಗಡಗಿ ಭರವಸೆ ನೀಡಿದರು.

ಹಳೇ ಕಲ್ಗುಡಿ ಗ್ರಾಮದಲ್ಲಿ ಕಾಲುವೆ ಬಳಿ‌ ಗೇಟ್ ನಿರ್ಮಾಣ ಮಾಡದ ಪರಿಣಾಮ ಆಟವಾಡಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟಿದ್ದರು. ಹೀಗಾಗಿ ಗೇಟ್ ‌ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರಿಗೆ ಗ್ರಾಮಸ್ಥರು ಮನವಿ‌ ಮಾಡಿದರು. ಕೂಡಲೇ ಗೇಟ್ ಅಳವಡಿಸುವಂತೆ ನೀರಾವರಿ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಜೀರಾಳ ಗ್ರಾಮದ ಪರಿಸರದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಬಸವರಾಜ ಕಟ್ಟಿಮನಿ, ಉಪಾಧ್ಯಕ್ಷ ಶರಣಮ್ಮ ಭಜಂತ್ರಿ, ಜಿ.ಪಂ ಮಾಜಿ ಸದಸ್ಯ ಹನುಮೇಶ ನಾಯಕ, ತಹಶೀಲ್ದಾರ್ ವಿಶ್ವನಾಥ ಮುರುಡಿ, ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ಚಂದ್ರಶೇಖರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಗಂಗಾಧರ ಸ್ವಾಮಿ, ಪ್ರಮುಖರಾದ ಸಿದ್ದಪ್ಪ ನೀರ್ಲೂಟಿ, ವೀರೇಶ ಸಮಗಂಡಿ, ಮಲ್ಲನಗೌಡ, ಪಿಡಿಒ ಲಕ್ಷ್ಮಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.