ಮುನಿರಾಬಾದ್: ಈ ಭಾಗದ ಜೀವನಾಡಿ ತುಂಗಭದ್ರಾ ನದಿ ಹರಿದಲ್ಲೆಲ್ಲ ಹಸಿರಿನ ಮುದ್ರೆ ಒತ್ತಿದ್ದು, ಈ ಭಾಗದ ಜನರ ಹಸಿವನ್ನು ನೀಗಿಸಿದ್ದಾಳೆ.
ಅಂತರರಾಜ್ಯ ನೀರಾವರಿ ಯೋಜನೆಯಾದ ತುಂಗಭದ್ರಾ ಜಲಾಶಯದಿಂದ ಕಾಲುವೆಗಳ ಮೂಲಕ ಹರಿಯುವ ನೀರು ಅಚ್ಚುಕಟ್ಟು ಪ್ರದೇಶದ ಜಮೀನುಗಳಲ್ಲಿ ಹಸಿರಿನ ವಾತಾವರಣವಿದೆ. ಜಲಾಶಯವು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಕ್ಕೆ ನೀರಾವರಿ ಮತ್ತು ಕುಡಿಯುವ ನೀರಿನ ಉದ್ದೇಶಕ್ಕೆ ಆಸರೆಯಾಗಿದೆ. ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಹತ್ತಾರು ಕಬ್ಬಿಣ ಮತ್ತು ಉಕ್ಕು ಹಾಗೂ ಸಿಮೆಂಟ್ ಕಾರ್ಖಾನೆಗಳಿಗೆ ನೀರಿನ ಮೂಲವಾಗಿದೆ.
ಜಲಾಶಯದಿಂದ ಕಾಲುವೆಯ ಮೂಲಕ ಅಚ್ಚುಕಟ್ಟು ಪ್ರದೇಶಕ್ಕೆ ಹರಿಯುವ ತುಂಗಭದ್ರಾ ನೀರು ಹರಿದಲ್ಲೆಲ್ಲ ಹಸಿರು ಭತ್ತದ ಗದ್ದೆಗಳಿಗೆ ಜನ್ಮ ನೀಡಿದ್ದು, ನೈಸರ್ಗಿಕ ದೃಶ್ಯ ಕಾವ್ಯದಂತಿದೆ.
ಮುನಿರಾಬಾದ್ ಸಮೀಪ ಹೊಸ ಲಿಂಗಾಪುರದಿಂದ ಬೂದುಗುಂಪ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿ 50ರ ಎಡ ಮತ್ತು ಬಲಭಾಗದಲ್ಲಿ ಹಸಿರು ಹೊದ್ದ ಹೊಲಗಳ ದೃಶ್ಯ ಕಣ್ತುಂಬಿಸಿಕೊಳ್ಳಬಹುದು.
ಹೊಸ ಲಿಂಗಾಪುರ ಮತ್ತು ಹೊಸಹಳ್ಳಿ ಬಳಿ ತೆಂಗಿನ ಮರಗಳ ಹಿನ್ನೆಲೆಯಲ್ಲಿ ಕಂಡುಬರುವ ಸೂರ್ಯೋದಯ ಮತ್ತು ಸೂರ್ಯಾಸ್ತಮಾನದ ದೃಶ್ಯ, ಹೊಸಹಳ್ಳಿ ಕ್ರಾಸ್, ಹಿಟ್ನಾಳ ರೈಲ್ವೆ ಮೇಲ್ಸೇತುವೆ ಮತ್ತು ಶಹಾಪುರ ಗ್ರಾಮದ ಬಳಿ ಕಾಣಸಿಗುವ ದೃಶ್ಯ ನಯನ ಮನೋಹರವಾಗಿದೆ.
ಹೆದ್ದಾರಿಯಲ್ಲಿ ಹೋಗುವ ಸಾರ್ವಜನಿಕರು ಮತ್ತು ಪ್ರವಾಸಿಗರು ಕೆಲ ಹೊತ್ತು ನಿಂತು, ಸೆಲ್ಫಿ ಮತ್ತು ಫೋಟೋ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಹಸಿರು ಹಿನ್ನೆಲೆಯ ತಾಣವಾಗಿದ್ದು, ಹೆದ್ದಾರಿಯ ಎರಡೂ ಬದಿ ಮಲೆನಾಡಿನ ದೃಶ್ಯ ಕಂಡು ಬರುತ್ತದೆ.
‘ತುಂಗಭದ್ರಾ ಯೋಜನೆಯ ಕಾಲುವೆ ಮೂಲಕ ನೀರಾವರಿಗೊಳಪಟ್ಟ ಜಮೀನುಗಳಲ್ಲಿ ಭತ್ತದ ಪೈರು ಹಸಿರು ಬಣ್ಣದಿಂದ ಕಂಗೊಳಿಸುತ್ತಿದ್ದು, ಜಲಾಶಯದ ಪಕ್ಕದಲ್ಲಿರುವ ಜಪಾನ್ ಮಾದರಿಯ ಉದ್ಯಾನ ವಿವಿಧ ಜಾತಿಯ ಹೂವಿನ ಗಿಡ, ಮರ ಮತ್ತು ಬಳ್ಳಿಗಳಿಂದ ಆಕರ್ಷಕವಾದ ಉದ್ಯಾನದ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ’ ಎಂದು ಕೊಪ್ಪಳ ಪ್ರವಾಸಿಗರಾದ ಮೌನೇಶಪ್ಪ ಪತ್ತಾರ ಮತ್ತು ಸಾಹೇಬ ಗೌಡ ಹಳೆಮನೆ ಹೇಳುತ್ತಾರೆ.
ತುಂಗಭದ್ರಾ ಯೋಜನಾ ವ್ಯಾಪ್ತಿಯ ಕೊಪ್ಪಳ ರಾಯಚೂರು ಬಳ್ಳಾರಿ ಮತ್ತು ವಿಜಯನಗರ ಸೇರಿದಂತೆ ಒಟ್ಟು 9.26 ಲಕ್ಷ ಎಕರೆ ನೀರಾವರಿಗೊಳಪಟ್ಟಿದ್ದು ಕುಡಿಯುವ ನೀರಿಗೂ ಜಲಾಶಯದಿಂದ ನೀರು ಪೂರೈಸಲಾಗುತ್ತಿದೆ.ಬಸಪ್ಪ ಜಾನಕರ್ ಕಾರ್ಯನಿರ್ವಾಹಕ ಎಂಜಿನಿಯರ್ ತುಂಗಭದ್ರಾ ಯೋಜನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.