ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ಪೋಲಾಗಿರುವ ಕಾರಣ ಜಲಾನಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಹೇರಳವಾಗಿ ಬೆಳೆಯುವ ಭತ್ತದ ಕೃಷಿ ಮೇಲೂ ಇದರ ಪರಿಣಾಮ ಬೀರಲಿದೆ. ಕಳೆದ ವರ್ಷದಂತೆ ಈ ವರ್ಷವೂ ಅಕ್ಕಿ ಬೆಲೆ ಏರಿಕೆಯಾಗುವ ಆತಂಕ ಶುರುವಾಗಿದೆ.
ಜಲಾಶಯದ ನೀರು ನೆಚ್ಚಿಕೊಂಡು ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಗಳಲ್ಲಿ ಹಾಗೂ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣದ ಬಹಳಷ್ಟು ಭಾಗದಲ್ಲಿ ಭತ್ತ ಬೆಳೆಯಲಾಗುತ್ತದೆ. ಕೊಪ್ಪಳ ಜಿಲ್ಲೆಯೊಂದರಲ್ಲಿಯೇ 60 ಸಾವಿರ ಎಕರೆ ಪ್ರದೇಶದಲ್ಲಿ ಪ್ರತಿವರ್ಷವೂ ಭತ್ತದ ಸಸಿ ನಾಟಿ ನಡೆಯುತ್ತದೆ.
ಇದೇ ಜಲಾಶಯದ ನೀರು ನೆಚ್ಚಿಕೊಂಡು ಬಹುತೇಕ ರೈತರು ವರ್ಷಕ್ಕೆ ಎರಡು ಫಸಲು ಬೆಳೆಯುತ್ತಾರೆ. ಕಳೆದ ವರ್ಷ ಮಳೆ ಕೊರತೆಯಿಂದಾಗಿ ಎರಡನೇ ಬೆಳೆ ಬಂದಿರಲಿಲ್ಲ. ಈ ಬಾರಿ ಕ್ರಸ್ಟ್‌ಗೇಟ್ ಒಡೆದು 60 ಟಿಎಂಸಿ ಅಡಿ ನೀರು ಹೊರಬಿಡಬೇಕಾದ ಕಾರಣ ಈ ಬಾರಿಯೂ ಎರಡನೇ ಬೆಳೆಗೆ ನೀರು ಲಭಿಸುವುದು ಖಚಿತವಿಲ್ಲ.
ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ 3.19 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿದೆ. ಕಳೆದ ವರ್ಷ ಪಾಲಿಶ್ ಮಾಡಿದ ಅಕ್ಕಿಯ ಬೆಲೆ ಗಗನಕ್ಕೇರಿದ್ದವು. ಈ ಪ್ರದೇಶದಲ್ಲಿ ಬೆಳೆಯುವ ಜನಪ್ರಿಯ ಸೋನಾ ಮಸೂರಿ ಅಕ್ಕಿ ಕಳೆದ ವರ್ಷದ ಜನವರಿಯಲ್ಲಿ ಪ್ರತಿ ಕ್ವಿಂಟಲ್‌ಗೆ ₹3,300 ಇತ್ತು. ಈ ವರ್ಷದ ಜನವರಿ ಅಂತ್ಯಕ್ಕೆ ₹5,400ಕ್ಕೆ ಏರಿಕೆಯಾಗಿತ್ತು. ಈ ಬಾರಿಯೂ ಎರಡನೇ ಬೆಳೆಗೆ ನೀರು ಸಿಗದಿದ್ದರೆ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಆತಂಕ ಕಾಡುತ್ತಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಜಲಾಶಯದಲ್ಲಿ ಸುಮಾರು 89.08 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಈ ಬಾರಿ ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆಯಾಗಿ ಅವಧಿಗಿಂತಲೂ ಮೊದಲೇ ಜಲಾಶಯ ತುಂಬಿದ್ದರಿಂದ ಅನ್ನದಾತರು ಹರ್ಷಗೊಂಡಿದ್ದರು. ಆದರೆ, ಗೇಟ್ ಒಡೆಯುವ ಮೂಲಕ ರೈತರನ್ನು ಮತ್ತೆ ಸಂಕಷ್ಟಕ್ಕೆ ದೂಡಿದೆ.
‘ಜಲಾಶಯದಲ್ಲಿ ಪೂರ್ಣಪ್ರಮಾಣದಲ್ಲಿ ನೀರು ಇದ್ದರೆ ಮಾತ್ರ ವರ್ಷಕ್ಕೆ ಎರಡು ಭತ್ತ ಬೆಳೆಯಲು ಸಾಧ್ಯವಾಗುತ್ತದೆ. ಈಗಿನ ಸ್ಥಿತಿಯಲ್ಲಿ ಒಂದು ಬೆಳೆ ಬಂದರೆ ಅದೇ ಹೆಚ್ಚು ಎನ್ನುವಂತಾಗಿದೆ. ಆರಂಭದಲ್ಲಿ ಜಲಾಶಯ ತುಂಬಿದ್ದಾಗ ಸಂಭ್ರಮದಲ್ಲಿದ್ದೆವು. ಈಗ ಅದೆಲ್ಲವೂ ಕಳೆದು ಹೋಗಿದೆ’ ಎಂದು ಗಂಗಾವತಿ ತಾಲ್ಲೂಕಿನ ಹೊಸಕೇರಾ ಗ್ರಾಮದ ರೈತ ಪಾಮಣ್ಣ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.