ADVERTISEMENT

ತುಂಗಭದ್ರೆ ಸ್ವಚ್ಛತೆಗೆ ಮುಂದಾದ ಯುವಪಡೆ

ಅನಿಲ್ ಬಾಚನಹಳ್ಳಿ
Published 2 ಮಾರ್ಚ್ 2020, 10:20 IST
Last Updated 2 ಮಾರ್ಚ್ 2020, 10:20 IST
ಕೊಪ್ಪಳದ ಧಾರ್ಮಿಕ ಕ್ಷೇತ್ರವಾದ ಹುಲಿಗೆಮ್ಮ ದೇವಸ್ಥಾನಕ್ಕೆ ಹೊಂದಿಕೊಂಡಿರುವ ತುಂಗಭದ್ರಾ ನದಿಯನ್ನು ಭಾನುವಾರ ಸ್ವಚ್ಛಗೊಳಿಸುತ್ತಿರುವ ಯುವ ಬ್ರಿಗೇಡ್‌ನ ಕಾರ್ಯಕರ್ತರು
ಕೊಪ್ಪಳದ ಧಾರ್ಮಿಕ ಕ್ಷೇತ್ರವಾದ ಹುಲಿಗೆಮ್ಮ ದೇವಸ್ಥಾನಕ್ಕೆ ಹೊಂದಿಕೊಂಡಿರುವ ತುಂಗಭದ್ರಾ ನದಿಯನ್ನು ಭಾನುವಾರ ಸ್ವಚ್ಛಗೊಳಿಸುತ್ತಿರುವ ಯುವ ಬ್ರಿಗೇಡ್‌ನ ಕಾರ್ಯಕರ್ತರು   

ಕೊಪ್ಪಳ: ತ್ರಿವಳಿ ಜಿಲ್ಲೆಗಳ ಜೀವನಾಡಿಯಾದ ತುಂಗಭದ್ರಾ ನದಿ ಸ್ವಚ್ಛತಾ ಕಾರ್ಯಕ್ಕೆ ಯುವ ಬ್ರಿಗೇಡ್‌ನ ಕಾರ್ಯಕರ್ತರು ಮುಂದಾಗಿದ್ದು, ಈಗಾಗಲೇ ಮೊದಲನೇ ಹಂತದ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ.

ಯುವ ಬ್ರಿಗೇಡ್‌ನ ‘ನನ್ನ ಕನಸಿನ ಕರ್ನಾಟಕ’ ಪರಿಕಲ್ಪನೆಯಲ್ಲಿ ನದಿಗಳ ಸ್ವಚ್ಛತಾ ಕಾರ್ಯ ಕೂಡಾ ಒಂದಾಗಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಇರುವ ನದಿಗಳನ್ನು ಈಗಾಗಲೇ ಸ್ವಚ್ಛಗೊಳಿಸುವ ಮೂಲಕ ಯುವ ಬ್ರಿಗೇಡ್‌ ಜನಮೆಚ್ಚುಗೆ ಪಡೆದಿದೆ. ಇದೇ ಮಾದರಿಯಲ್ಲಿ ಜಿಲ್ಲೆಯ ಧಾರ್ಮಿಕ ಕ್ಷೇತ್ರವಾದ ಹುಲಿಗೆಮ್ಮ ದೇವಸ್ಥಾನಕ್ಕೆ ಹೊಂದಿಕೊಂಡಿರುವ ತುಂಗಭದ್ರಾ ನದಿಯನ್ನು ಸ್ವಚ್ಛಗೊಳಿಸಲು ಯುವಕರು ಪಣತೊಟ್ಟಿದ್ದಾರೆ.

ಈಗಾಗಲೇ ಭಾನುವಾರ ಮೊದಲನೇ ಹಂತದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಯುವ ಬ್ರಿಗೇಡ್‌ನ ಸುಮಾರು 60ರಿಂದ 70 ಜನ ಕಾರ್ಯಕರ್ತರು ಭಾಗವಹಿಸಿದ್ದರು. ಇದರಿಂದಾಗಿ 5ರಿಂದ 6 ಟ್ರ್ಯಾಕ್ಟರ್‌ ಬಟ್ಟೆ ಸೇರಿದಂತೆ ವಿವಿಧ ರೀತಿಯ ತ್ಯಾಜ್ಯವನ್ನು ಹೊರ ತೆಗೆದಿದ್ದಾರೆ. ಭಾನುವಾರ ಬೆಳಿಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ಸ್ವಚ್ಛತಾ ಕಾರ್ಯ ನಡೆದಿದ್ದು, ಇದಕ್ಕೆ ಹುಲಿಗೆಮ್ಮ ದೇವಿ ದೇವಸ್ಥಾನ ಸಮಿತಿಯವರೂ ಕೂಡಾ ಹೆಚ್ಚಿನ ಸಹಕಾರ ನೀಡಿದ್ದಾರೆ ಎನ್ನುತ್ತಾರೆ ಯುವ ಬ್ರಿಗೇಡ್‌ನ ಜಿಲ್ಲಾ ಸಂಚಾಲಕ ವೀರೇಶ.

ADVERTISEMENT

ನದಿ ಸ್ವಚ್ಛತಾ ಕಾರ್ಯ ಒಂದೇ ಬಾರಿ ಮುಗಿಯುವುದಿಲ್ಲ. ಏಕೆಂದರೆ ನಾವು ಇಂದು ತೆಗೆದ ಬಟ್ಟೆ ಸೇರಿ ವಿವಿಧ ತ್ಯಾಜ್ಯ, ಮತ್ತೆ ನಾಳೆಯೇ ಅದು ನದಿಯಲ್ಲಿ ಸಂಗ್ರಹವಾಗುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಯುವ ಬ್ರಿಗೇಡ್‌ನ ರಾಜ್ಯದ ಎಲ್ಲ ಕಾರ್ಯಕರ್ತರು ಭಾಗವಹಿಸಿ, ಎರಡು ದಿನಗಳ ಕಾಲ ವಾಸ್ತವ್ಯ ಹೂಡಿ, ನದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇವೆ. ತುಂಗಭದ್ರಾ ನದಿಯನ್ನು ಸ್ವಚ್ಛಗೊಳಿಸಿ, ನದಿಗಳನ್ನು ಉಳಿಸಲಾಗುತ್ತದೆ. ಈ ಮೂಲಕ ‘ಕನಸಿನ ಕರ್ನಾಟಕ’ ನಿರ್ಮಾಣ ಮಾಡುತ್ತೇವೆ ಎನ್ನುತ್ತಾರೆ ರಾಜ್ಯ ಸಂಚಾಲಕ ಕಿರಣ್‌ರಾಮ್‌.

ಎರಡು ದಿನದ ಸ್ವಚ್ಛತಾ ಕಾರ್ಯದ ಬಳಿಕ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ,ನದಿಯ ದಡದಲ್ಲಿ ಶೌಚಾಲಯ ನಿರ್ಮಾಣ, ಬಟ್ಟೆ ಬದಲಾವಣೆಗೆ ವ್ಯವಸ್ಥೆ, ಬಟ್ಟೆ ಬಿಡಲು ಸ್ಥಳಾವಕಾಶ, ನಾಮಫಲಕ, ಸಾರ್ವಜನಿಕರಿಗೆ ಜನಜಾಗೃತಿ ಸೇರಿದಂತೆ ವಿವಿಧ ರೀತಿಯ ವ್ಯವಸ್ಥೆ ಕೈಗೊಳ್ಳಲು ಸೂಚಿಸುತ್ತೇವೆ. ಕ್ಷೇತ್ರ ಹಾಗೂ ನದಿ ಸ್ವಚ್ಛವಾಗಿರಿಸಲು ಪೂರಕವಾದ ವಾತವರಣ ನಿರ್ಮಿಸುತ್ತೇವೆ ಎನ್ನುತ್ತಾರೆ ಕಿರಣ್‌ರಾಮ್.

ಯುವ ಬ್ರಿಗೇಡ್‌ನ ರಾಜ್ಯ ಸಂಚಾಲಕ ಕಿರಣ್‌ರಾಮ್ ನೇತೃತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಜಿಲ್ಲಾ ಸಂಚಾಲಕ ವೀರೇಶ, ದಿರಾಜ್‌, ಗುರುಪ್ರಸಾದ್‌ ಸೇರಿ ಇತರರು
ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.