ಕೊಪ್ಪಳ: ತಾಲ್ಲೂಕಿನ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯದ 19ನೇ ಗೇಟ್ ಕೊಚ್ಚಿ ಹೋಗಿದ್ದ ಜಾಗದಲ್ಲಿ ಮರಳಿ ಗೇಟ್ ಅಳವಡಿಸುವ ಪ್ರಕ್ರಿಯೆ ಆರಂಭವಾಗಿದ್ದು, ನಾಲ್ಕು ಅಡಿಯ ಒಂದು ಎಲಿಮೆಂಟ್ ಅಳವಡಿಕೆ ಯಶಸ್ವಿಯಾಗಿದೆ.
ರಭಸವಾಗಿ ಹರಿಯುತ್ತಿರುವ ನೀರಿನ ನಡುವೆಯೇ ಈ ಕಾರ್ಯಾಚರಣೆ ನಡೆದಿದ್ದು ವಿಶೇಷವಾಗಿದೆ. ಅಲ್ಪ ಬೆಳಕಿನ ನಡುವೆಯೇ ಕಾರ್ಯಾಚರಣೆ ನಡೆದಿದೆ.
ಕೊಚ್ಚಿ ಹೋಗಿರುವ ಗೇಟ್ 60 ಅಡಿ ಎತ್ತರ, 20 ಅಡಿ ಅಗಲವಿದ್ದು, ಈಗ ಇದೇ ಅಳತೆಯಲ್ಲಿ ಗೇಟ್ ತಯಾರಿಸಲಾಗಿದೆ. ನಾಲ್ಕು ಅಡಿಯ ಐದು ಎಲಿಮೆಂಟ್‌ಗಳನ್ನು ತಯಾರಿಸಲಾಗಿದ್ದು, ಅದರಲ್ಲಿ ಒಂದು ಎಲಿಮೆಂಟ್ ಯಶಸ್ವಿಯಾಗಿ ಮೊದಲಿದ್ದ ಗೇಟ್ ಜಾಗಕ್ಕೆ ಇರಿಸಲಾಗಿದೆ.
ಒಂದು ಎಲಿಮೆಂಟ್ ಅಳವಡಿಕೆಯಲ್ಲಿ ಯಶಸ್ಸು ಕಂಡರೆ ಇನ್ನುಳಿದ ನಾಲ್ಕು ಎಲಿಮೆಂಟ್‌ಗಳ ಅಳವಡಿಕೆ ಕಷ್ಟವಾಗುವುದಿಲ್ಲ. ಉಳಿದ ಎಲಿಮೆಂಟ್‌ಗಳನ್ನೂ ಸುರಕ್ಷಿತವಾಗಿ ಅಳವಡಿಕೆ ಮಾಡಲಾಗುವುದು ಎಂದು ಎಂಜಿನಿಯರ್‌ಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಲಾಶಯದ ಗೇಟ್ ಕೊಚ್ಚಿ ಹೋದ ದಿನದಿಂದಲೂ ಜೀವ ಪಣಕ್ಕಿಟ್ಟು ಸಿಬ್ಬಂದಿ ಕೆಲಸ ಮಾಡಿದ್ದರು. ಜಲಾಶಯಗಳ ಗೇಟ್ ಮತ್ತು ಸುರಕ್ಷತಾ ತಜ್ಞ ಕನ್ನಯ್ಯನಾಯ್ಡು ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಗೇಟ್ ಕೊಚ್ಚಿ ಹೋದಾಗಿನಿಂದ ನಿತ್ಯ 90ರಿಂದ 98 ಸಾವಿರ ಕ್ಯುಸೆಕ್ ತನಕ ನೀರು ಹೊರಗಡೆ ಹರಿಸಲಾಗಿತ್ತು. ಶುಕ್ರವಾರ ಸಂಜೆ 7 ಗಂಟೆ ನಂತರ 53,062 ಕ್ಯುಸೆಕ್ ನೀರು ಹೊರಗಡೆ ಹರಿಬಿಟ್ಟು ಗೇಟ್ ಅಳವಡಿಸುವ ಕಾರ್ಯಾಚರಣೆ ನಡೆಸಲಾಯಿತು. 39,619 ಕ್ಯುಸೆಕ್ ಒಳಹರಿವು ಇದೆ. ಇನ್ನು ನಾಲ್ಕು ಎಲಿಮೆಂಟ್‌ಗಳ ಅಳವಡಿಕೆ ಕೆಲಸ ಬಾಕಿ ಉಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.