ADVERTISEMENT

ಅನಧಿಕೃತ, ಅಕ್ರಮ ಕೋಚಿಂಗ್ ಕೇಂದ್ರಗಳ ಹಾವಳಿ: ತಂಡ ರಚನೆಗೆ ಅಧಿಕಾರಿಗಳ ಹಿಂದೇಟು

ನಾರಾಯಣರಾವ ಕುಲಕರ್ಣಿ
Published 4 ಜುಲೈ 2024, 6:04 IST
Last Updated 4 ಜುಲೈ 2024, 6:04 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕುಷ್ಟಗಿ: ಸರ್ಕಾರಿ ಶಾಲೆ ಮಕ್ಕಳನ್ನೇ ಸೇರಿಸಿಕೊಂಡು ನಡೆಯುತ್ತಿರುವ ತಾಲ್ಲೂಕಿನಲ್ಲಿಯ ಅನಧಿಕೃತ ಕೋಚಿಂಗ್ ಕೇಂದ್ರಗಳನ್ನು ಮುಚ್ಚಿಸಲು ಅಗತ್ಯಕ್ರಮ ಕೈಗೊಳ್ಳುವಂತೆ ಕೆಡಿಪಿ ಸಭೆ ನಿರ್ಣಯಿಸಿದ್ದರೂ ತಂಡ ರಚನೆಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ.

ಸರ್ಕಾರದ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಹೊಂದಿರುವ ಮಕ್ಕಳನ್ನು ವಸತಿ ಸಹಿತ ಈ ಕೇಂದ್ರಗಳಲ್ಲಿ ಅಕ್ರಮವಾಗಿ ಇಟ್ಟುಕೊಂಡಿರುವ ಕೇಂದ್ರಗಳ ವಿರುದ್ಧ ತಕ್ಷಣ ಕ್ರಮಕ್ಕೆ ಮುಂದಾಗಬೇಕು. ತಹಶೀಲ್ದಾರ್ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಪುರಸಭೆ ಮುಖ್ಯಾಧಿಕಾರಿಯನ್ನು ಒಳಗೊಂಡ ತಂಡ ರಚಿಸಿ ಕೇಂದ್ರಗಳ ತಪಾಸಣೆ ನಡೆಸುವಂತೆ ಶಾಸಕ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ADVERTISEMENT

ಆದರೆ ಸೂಚನೆ ನೀಡಿ ಐದಾರು ದಿನ ಕಳೆದರೂ ಯಾವುದೇ ತಂಡ ರಚನೆಯಾಗದಿರುವುದು ಮತ್ತು ದಾಳಿ ನಡೆಸಿ ಕ್ರಮ ಕೈಕೊಳ್ಳದಿರುವುದು ಗೊತ್ತಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಶ್ರುತಿ ಮಳ್ಳಪ್ಪಗೌಡ್ರ, ‘ತಂಡ ರಚನೆಯಾಗಿಲ್ಲ, ಈ ಬಗ್ಗೆ ಚರ್ಚಿಸಲು ಜು.8 ರಂದು ಸಭೆ ಕರೆಯಲಾಗಿದೆ. ಅಲ್ಲಿ ಸಭೆ ನಡಾವಳಿ ರಚಿಸಿ ಅದನ್ನು ಶಾಸಕರ ಗಮನಕ್ಕೆ ತಂದು ನಂತರ ಅನಧಿಕೃತ ಕೇಂದ್ರಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ಈ ಕುರಿತು ವಿವರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ‘ಕೆಡಿಪಿ ಸಭೆ ನಿರ್ಣಯದಂತೆ ಅನಧಿಕೃತ ಕೇಂದ್ರಗಳ ಬಗ್ಗೆ ಮಾಹಿತಿ ಪಡೆದು ನಿರ್ದಿಷ್ಟ ಸ್ಥಳಗಳಲ್ಲಿ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ’ ಹೇಳಿದರು.

ಈ ಮಧ್ಯೆ ಬುಧವಾರ ಪ್ರಕಟಣೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ, ಹನುಮಸಾಗರದಲ್ಲಿ 5, ಹನುಮನಾಳದಲ್ಲಿ, ತಾವರಗೇರಾದಲ್ಲಿ ತಲಾ 2, ಬಾದಿಮನಾಳ ಮತ್ತು ಕುಷ್ಟಗಿಯಲ್ಲಿ ತಲಾ 1 ಅನಧಿಕೃತ ಕೋಚಿಂಗ್‌ ಕೇಂದ್ರಗಳು ಸ್ಥಗಿತಗೊಂಡಿರುವ ಬಗ್ಗೆ ಸಿಆರ್‌ಪಿಗಳು ನೀಡಿದ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ. ಆದರೆ ಪಟ್ಟಣದಲ್ಲಿ 12 ಕೋಚಿಂಗ್ ಕೇಂದ್ರಗಳಿರುವುದು, ಸರ್ಕಾರಿ ಶಾಲೆ ಶಿಕ್ಷಕರೇ ಕೆಲ ಕೇಂದ್ರಗಳನ್ನು ನಡೆಸುತ್ತಿರುವುದು ಗೊತ್ತಿದ್ದರೂ ಅವುಗಳ ತಂಟೆಗೆ ಹೋಗದಿರುವುದು ಅಚ್ಚರಿ ಮೂಡಿಸಿದೆ. ಈ ಕುರಿತು ಶಿಕ್ಷಣ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.