ADVERTISEMENT

ಕೊಪ್ಪಳ | ಹಾಸ್ಟೆಲ್‌ನಲ್ಲಿ ಅಸ್ವಚ್ಛತೆ, ವಿದ್ಯಾರ್ಥಿನಿಯರಿಗೆ ಕಿರುಕುಳ?

34 ವಿದ್ಯಾರ್ಥಿನಿಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ, ಬಹಿರಂಗವಾಗಿ ನೋವು ತೋಡಿಕೊಂಡ ಮಕ್ಕಳು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 4:51 IST
Last Updated 19 ನವೆಂಬರ್ 2022, 4:51 IST
ಕೊಪ್ಪಳದಲ್ಲಿ ಶುಕ್ರವಾರ ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಅವರು ಅಸ್ವಸ್ಥಗೊಂಡ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು
ಕೊಪ್ಪಳದಲ್ಲಿ ಶುಕ್ರವಾರ ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಅವರು ಅಸ್ವಸ್ಥಗೊಂಡ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು   

ಕೊಪ್ಪಳ: ಇಲ್ಲಿನ ನಗರ ಪೊಲೀಸ್ ಠಾಣೆ ಸಮೀಪದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಪಲಾವ್ ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. ಹಾಸ್ಟೆಲ್‌ ಸಿಬ್ಬಂದಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಅಂಶ ಕೂಡ ಇದೇ ವೇಳೆ ಬಹಿರಂಗವಾಗಿದೆ.

ಗುರುವಾರ ಐದು ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಸಮಸ್ಯೆಯಾಗಿತ್ತು. ಶುಕ್ರವಾರ ಒಟ್ಟು 34 ವಿದ್ಯಾರ್ಥಿನಿಯರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯಾರ್ಥಿನಿಯರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವಸತಿ ನಿಲಯದಲ್ಲಿ ನ. 17ರಂದು ಮಾಡಲಾಗಿದ್ದ ಪಲಾವ್‌ ಅನ್ನು ತಿಂದ ಬಳಿಕ ಹಲವು ವಿದ್ಯಾರ್ಥಿಗಳ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಕೆಲ ವಿದ್ಯಾರ್ಥಿಗಳಲ್ಲಿ ತಲೆ, ಹೊಟ್ಟೆ ನೋವು, ವಾಂತಿ ಕಾಣಿಸಿದ್ದರಿಂದ ಎಲ್ಲರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ADVERTISEMENT

ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಡಿಎಚ್‌ಒ ಡಾ. ಅಲಕಾನಂದ ಮಳಗಿ, ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರು ಯೋಗಕ್ಷೇಮ ವಿಚಾರಿಸಿದರು.

ಆಹಾರ ಗುಣಮಟ್ಟ ಪರೀಕ್ಷಾ ತಂಡ ಅಡುಗೆ ಕೋಣೆಗೆ ತೆರಳಿ ಆಹಾರ ಪದಾರ್ಥಗಳನ್ನು ಪರಿಶೀಲಿಸಿತು. ಈ ವೇಳೆ ಅವಧಿ ಮುಗಿದ ಹಾಲಿನ ಪಾಕೆಟ್‌ಗಳು ಪತ್ತೆಯಾಗಿದ್ದು, ಅಕ್ಕಿ, ಬೇಳೆ, ತರಕಾರಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಯಿತು.

ನಗರಸಭೆಯಿಂದ ಪೂರೈಕೆಯಾಗುವ ನೀರನ್ನು ಸಂಪ್‌ನಲ್ಲಿ ಸಂಗ್ರಹಿಸಿ ಬಳಿಕ ಸರಬರಾಜು ಮಾಡಲಾಗುತ್ತಿದೆ. ಇದೇ ನೀರು ಅಡುಗೆ ಮಾಡಲು ಬಳಸಲಾಗುತ್ತಿದೆ. ಹಾಸ್ಟೆಲ್‌ನ ವಿದ್ಯಾರ್ಥಿನಿಯರಿಗೆ ಸಮಸ್ಯೆಯಾದ ಬಳಿಕ ಆರ್‌ಒ ಘಟಕ ಆರಂಭಿಸಲಾಗಿದೆ. ಸ್ವಚ್ಛತೆ ಕಾಪಾಡಿಕೊಳ್ಳಲು ಆದ್ಯತೆ ನೀಡಿಲ್ಲ ಎಂದು ಹಲವರು ದೂರಿದರು.

ನೋವು ತೋಡಿಕೊಂಡ ವಿದ್ಯಾರ್ಥಿನಿಯರು

ಕೊಪ್ಪಳ: ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಅವರು ಆಸ್ಪತ್ರೆಗೆ ಭೇಟಿ ನೀಡಿದಾಗ ಕೆಲ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ತಮ್ಮ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎನ್ನುವ ಸಂಗತಿಯನ್ನು ಬಹಿರಂಗಗೊಳಿಸಿದ್ದಾರೆ.

ಹಾಸ್ಟೆಲ್‌ ಬೇರೆ ಕಡೆ ಸ್ಥಳಾಂತರ ಮಾಡಲಾಗುತ್ತಿದೆ ಎನ್ನುವ ಕಾರಣಕ್ಕೆ ಅಲ್ಲಿನ ಸಿಬ್ಬಂದಿ ಹಲವು ದಿನಗಳಿಂದ ಸಂಗ್ರಹಿಸಿ ಇಟ್ಟಿದ್ದ ನೀರನ್ನು ವಿದ್ಯಾರ್ಥಿನಿಯರಿಗೆ ಕೊಟ್ಟಿದ್ದಾರೆ. ನೀರಿನಲ್ಲಿ ಕೂದಲು ಬಿದ್ದಿತ್ತು, ಸುತ್ತಲಿನ ಜಾಗ ಪಾಚಿಗಟ್ಟಿತ್ತು. ಅನ್ನದೊಳಗೆ ಹುಳ ಬರುತ್ತಿದ್ದವು. ಉಪ್ಪಿಲ್ಲದ ಸಾರು ನೀಡುತ್ತಾರೆ. ಇದರಿಂದ ಹೊಟ್ಟೆಯಲ್ಲಿ ಸಂಕಟವಾಗುತ್ತಿದೆ ಎಂದು ವಿದ್ಯಾರ್ಥಿನಿಯರು ನೋವು ತೋಡಿಕೊಂಡರು.

ಸೋಲಾರ್‌ ಇದ್ದರೂ ಬಿಸಿ ನೀರು ಕೊಡುವುದಿಲ್ಲ. ಅಡುಗೆಯಲ್ಲಿ ಉಪ್ಪು ಇಲ್ಲ, ಇನ್ನಷ್ಟು ಅನ್ನ ಹಾಕಿ ಎಂದು ಕೇಳಿದರೆ ಸೌಟು ತೆಗೆದುಕೊಂಡು ಹೊಡೆಯುತ್ತಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು.

ಹೇಮಲತಾ ನಾಯಕ ಅವರು ಹಾಸ್ಟೆಲ್‌ಗೆ ಭೇಟಿ ನೀಡುವ ವಿಷಯ ಗೊತ್ತಾಗುತ್ತಿದ್ದಂತೆ ಸುತ್ತಲಿನ ವಾತಾವರಣವನ್ನು ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪೌಡರ್‌ ಹಾಕಲಾಗಿದೆ.

‘ಮತ್ತಷ್ಟು ಅನ್ನ ಕೇಳಿದರೆ ಹಾಕುವುದಿಲ್ಲ ಎನ್ನುವ ಹಾಸ್ಟೆಲ್‌ ಸಿಬ್ಬಂದಿಯ ಅಮಾನವೀಯ ನಡೆ ತಿಳಿದು ಕರಳು ಕಿತ್ತುಬಂದಂತಾಯಿತು. ಸರ್ಕಾರ ಸೌಲಭ್ಯ ಕೊಟ್ಟರೂ ಅದನ್ನು ವಿದ್ಯಾರ್ಥಿನಿಯರಿಗೆ ಕೊಡಲು ಯಾಕೆ ಹಿಂದೇಟು’ ಎಂದು ಹೇಮಲತಾ ನಾಯಕ ಅವರು ಖಾರವಾಗಿ ಪ್ರಶ್ನಿಸಿದರು.

ವಿದ್ಯಾರ್ಥಿನಿಯರ ಅನಾರೋಗ್ಯಕ್ಕೆ ಕಾರಣವೇನು ಎನ್ನುವುದು ಗೊತ್ತಾಗಿಲ್ಲ. ಜ್ವರ ಅಥವಾ ಆಹಾರದಲ್ಲಿ ವ್ಯತ್ಯಾಸವಾಗಿರಬಹುದು ಎನ್ನುವ ಶಂಕೆ ಇದೆ. ಆಸ್ಪತ್ರೆಯಲ್ಲಿ ಇರುವ ಮಕ್ಕಳು ಆರಾಮವಾಗಿದ್ದಾರೆ.

– ಚಿದಾನಂದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.