ಗಂಗಾವತಿ: ರಾಜಕೀಯದ ಏಳುಬೀಳಿನ ಆಟಗಳ ನಡುವೆ ಮೊದಲ ಬಾರಿಗೆ ಇಲ್ಲಿನ ನಗರಸಭೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದು ಮೂರು ತಿಂಗಳುಗಳಾದರೂ ಅಭಿವೃದ್ಧಿ ಚಹರೆ ಮಾತ್ರ ಎಲ್ಲಿಯೂ ಕಾಣಿಸುತ್ತಿಲ್ಲ.
ಕ್ಷೇತ್ರದ ಶಾಸಕ ಜಿ. ಜನಾರ್ದನ ರೆಡ್ಡಿ ತಂತ್ರಗಾರಿಕೆಯಿಂದ ಬಿಜೆಪಿ ಮೊದಲ ಬಾರಿಗೆ ನಗರಸಭೆಯಲ್ಲಿ ಅಧಿಕಾರವೇನೊ ಪಡೆದುಕೊಂಡಿತು. ಹೊಸ ಅಧ್ಯಕ್ಷ, ಉಪಾಧ್ಯಕ್ಷರ ತಂಡವೂ ಅಧಿಕಾರ ಗಳಿಸಿತು. ಆದರೆ ನಗರದ ಜನರಿಗೆ ಸಕಾಲಕ್ಕೆ ಸೌಲಭ್ಯಗಳು ಲಭಿಸುತ್ತಿಲ್ಲ, ಮೂಲಸೌಕರ್ಯಗಳು ಮರೀಚಿಕೆಯಾಗಿವೆ ಎನ್ನುವ ವ್ಯಾಪಕ ದೂರುಗಳು ಇವೆ.
ಜಿಲ್ಲೆಯಲ್ಲಿಯೇ ಗಂಗಾವತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು ಅಷ್ಟೇ ಸಮಸ್ಯೆಗಳನ್ನು ಹೊದ್ದು ನಿಂತಿದೆ. ನಗರಸಭೆಯಲ್ಲಿ ಆಡಳಿತ ನಡೆಸುವ ಪಕ್ಷಗಳು ಬದಲಾಗುತ್ತಿವೆ ಹೊರತು ನಗರದ ಅಭಿವೃದ್ದಿ ಬಗ್ಗೆ, ಸಾರ್ವಜನಿಕರ ಕುಂದುಕೊರತೆ ಈಡೇರಿಸುವ ಕೆಲಸವಾಗುತ್ತಿಲ್ಲ.
ನಗರದ ಜನಸಂಖ್ಯೆಗೆ ತಕ್ಕಂತೆ ಪೌರಕಾರ್ಮಿಕರ ಕೊರತೆಯಿದ್ದು, ನಗರದ ವಿವಿಧಡೆ ಸಂಗ್ರಹವಾಗುತ್ತಿರುವ ಕಸ ಸಮರ್ಪಕವಾಗಿ ವಿಲೇವಾರಿಯಾಗುತ್ತಿಲ್ಲ. ಕಸ ವಿಲೇವಾರಿ ವಾಹನಗಳು ಕೂಡ ಕಡಿಮೆ ಇವೆ. ನಗರದ ಬಹುತೇಕ ವಾರ್ಡುಗಳಲ್ಲಿ ಚರಂಡಿಗಳು ಮಣ್ಣು, ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿ ನೀರು ಸಂಚರಿಸದೆ ದುರ್ವಾಸನೆ ಬೀರುತ್ತಿವೆ.
ಬಹುತೇಕ ಉದ್ಯಾನಗಳು ನಿರ್ವಹಣೆಯಿಲ್ಲದೇ ಅಧ್ವಾನವಾಗಿದೆ. ಕೊಳೆಗೇರಿ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳ ಮಾತು ಕಾರ್ಯರೂಪಕ್ಕೆ ಬಂದಿಲ್ಲ. ಸಾಮೂಹಿಕ ಶೌಚಾಲಯದ ಜತೆಗೆ ಶುದ್ದ ಕುಡಿಯುವ ನೀರಿನ ಘಟಕಗಳು ನಿರ್ಮಿಸಬೇಕಿದೆ. ಜುಲೈನಗರ, ಶಿವೆ ಟಾಕೀಸ್, ಗಾಂಧಿವೃತ್ತದ ಬಳಿನ ರಸ್ತೆಗಳು ಗುಂಡಿಗಳಿಂದ ಕೂಡಿವೆ. ಹಲವು ವರ್ಷಗಳಿಂದ ಇಲ್ಲಿ ಜನರಿಗೆ ಹಕ್ಕುಪತ್ರಗಳನ್ನು ನೀಡಿಲ್ಲ.
ಜುಲೈನಗರ, ಸಿದ್ದಿಕೇರಿ ರಸ್ತೆ, ಶಿವೆ ಟಾಕೀಸ್, ಗಾಂಧಿವೃತ್ತ, ಬಸ್ ನಿಲ್ದಾಣದ ಮುಂಭಾಗ, ವಿರೂಪಾಪುರ ತಾಂಡ, ಸರ್ಕಾರಿ ಹೆರಿಗೆ ಆಸ್ಪತ್ರೆ ಬಳಿ ರಸ್ತೆಗಳು ಗುಂಡಿಮಯವಾಗಿವೆ. ವಾಹನಗಳ ಸವಾರರು ಶಪಿಸುತ್ತಲೇ ಸಂಚರಿಸುತ್ತಿದ್ದು, ನಗರಸಭೆ ತಾತ್ಕಾಲಿಕವಾಗಿ ಜಲ್ಲಿಕಲ್ಲು, ಮಣ್ಣು ತುಂಬಿ ರಸ್ತೆ ಸರಿಪಡಿಸುತ್ತಿದೆ ಹೊರೆತು ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಿಲ್ಲ ಎನ್ನುವುದು ಸಾರ್ವಜನಿಕರ ದೂರು.
ಸಂಜೆ ರಸ್ತೆಗಳ ತುಂಬೆಲ್ಲ ಬೀಡಾಡಿ ದಿನಗಳದ್ದೇ ಕಾರುಬಾರು, ದ್ವಿಚಕ್ರ ವಾಹನಗಳ ಸವಾರರು ಅಪಘಾತಕ್ಕಿಡಾಗಿ ಹಲವು ಬಾರಿ ಗಾಯಗೊಂಡ ಉದಾಹರಣೆಗಳಿವೆ. ಗಾಂಧಿ ವೃತ್ತ, ಮಹಾವೀರ ಸರ್ಕಲ್, ಬಸ್ ನಿಲ್ದಾಣ, ನ್ಯಾಯಾಲಯ, ಇಸ್ಲಾಂಪುರ, ಪೊಲೀಸ್ ಠಾಣೆ, ಉಪವಿಭಾಗ ಆಸ್ಪತ್ರೆ ಸೇರಿ ವಿವಿಧ ವೃತ್ತ, ರಸ್ತೆಗಳಲ್ಲಿ ವಾಹನಗಳ ನಿಲ್ಲಿಸಲಾಗುತ್ತಿದ್ದು, ರಸ್ತೆಗಳೇ ವಾಹನ ನಿಲ್ದಾಣಗಳಾಗುತ್ತಿವೆ.
ಬೀದಿಬದಿ ವ್ಯಾಪಾರಸ್ಥರಿಂದ ಅಲ್ಲಲ್ಲಿ ರಸ್ತೆ, ಪಾದಚಾರಿ ಮಾರ್ಗ ಒತ್ತುವರಿಯಾಗಿದೆ. ವ್ಯಾಪಾರಸ್ಥರನ್ನು ಗುಂಡಮ್ಮ ಕ್ಯಾಂಪ್ ಮಾರುಕಟ್ಟೆಗೆ ಸ್ಥಳಾಂತರಿಸಬೇಕಿದೆ. ನಗರದ ಮುಖ್ಯರಸ್ತೆ, ಚರಂಡಿ ನಿರ್ಮಾಣದ ಕಾಮಗಾರಿಗಳು ಕಳಪೆ ಗುಣಮಟ್ಟದಲ್ಲಿ ನಡೆದಿವೆ ಎಂದು ಸಾರ್ವಜನಿಕರು ಮೇಲಿಂದ ಮೇಲೆ ದೂರು ನೀಡುತ್ತಿದ್ದರೂ ಯಾವುದೇ ಕ್ರಮವಾಗಿಲ್ಲ.
ನಗರಸಭೆಗೆ ವಾಣಿಜ್ಯ ಮಳಿಗೆಗಳಿಂದಲೇ ತೆರಿಗೆ ಬರಬೇಕಿದ್ದು, ಬಾಕಿ ಮೊತ್ತ ₹4.92 ಕೋಟಿಯಿದೆ. ಬಹುತೇಕ ನಗರಸಭೆ ಸಿಬ್ಬಂದಿ ಕೆಲಸದ ನೆಪದಲ್ಲಿ ಕಚೇರಿ ಸಮಯಕ್ಕೆ ಹಾಜರಾಗುವುದು ತಪ್ಪಿಸುತ್ತಿದ್ದು, ಅರ್ಜಿಗಳು ಹೊತ್ತು ಬಂದ ಸಾರ್ವಜನಿಕರಿಗೆ ಸಮಯಕ್ಕೆ ಸಿಗುತ್ತಿಲ್ಲ ಎನ್ನುವ ಆರೋಪವಿದೆ. ಹಿರೇಜಂತಕಲ್ 31ನೇ ವಾರ್ಡಿನಲ್ಲಿರುವ ಅಲೆಮಾರಿಗಳಿಗೆ ಸೂಕ್ತ ನೆಲೆ ಜತೆಗೆ ವಸತಿ ಯೋಜನೆಯಡಿ ನಿವೇಶನ ಕಲ್ಪಿಸಿಕೊಡಬೇಕಿದೆ.
ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೂ ಮುನ್ನ 15 ತಿಂಗಳ ನಗರಸಭೆ ಆಡಳಿತ ಜಿಲ್ಲಾಧಿಕಾರಿ (ಆಡಳಿತಾಧಿಕಾರಿ) ನೇತೃತ್ವದಲ್ಲಿ ನಡೆದಿದ್ದು ಆ ಸಮಯದಲ್ಲಿ ಅಭಿವೃದ್ದಿ ಕೆಲಸಗಳೇ ಆಗಿಲ್ಲ. ಸದ್ಯ ನಗರಸಭೆಯಲ್ಲಿ ಆಡಳಿತ ಪಕ್ಷವಿದ್ದು ನಗರದ ಅಭಿವೃದ್ಧಿ ಕಾರ್ಯ ಶುರುವಾಗಿಲ್ಲಮಲ್ಲಿಕಾರ್ಜುನ ನೇಕಾರ ಓಣಿ ನಿವಾಸಿ ಗಂಗಾವತಿ
ಮುಖ್ಯ ರಸ್ತೆಗಳು ಹಾಳಾಗಿ ಗುಂಡಿಗಳು ಬಿದ್ದಿವೆ. ಚರಂಡಿಗಳ ಸ್ವಚ್ಚತೆಯಿಲ್ಲ. ರಸ್ತೆಗಳಲ್ಲಿ ಅವ್ಯವಸ್ಥಿತ ವಾಹನ ನಿಲುಗಡೆಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇವುಗಳ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸುವುದು ಯಾವಾಗ?ಯಶೋಧಾ ಹೊಸಮನಿ ಗಂಗಾವತಿ ನಿವಾಸಿ
ಗುಂಡಮ್ಮ ಕ್ಯಾಂಪ್ ಮಾರುಕಟ್ಟೆ ಸ್ಥಳಾಂತರ ಅನಧಿಕೃತ ಬ್ಯಾನರ್‌ಗಳ ಅಳವಡಿಕೆಗೆ ಕಡಿವಾಣ ಅನಧಿಕೃತ ಲೇಔಟ್ ಫಾರಂ-3ವಿತರಣೆ ಸೇರಿ ಇತರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಈಗಾಗಲೇ ವಿಶೇಷ ಸಭೆ ನಡೆಸಲಾಗಿದೆ. ಕೆಲವೇ ದಿನಗಳಲ್ಲಿ ಅಭಿವೃದ್ದಿ ಕಾರ್ಯ ಆರಂಭಿಸಲಾಗುತ್ತದೆಮೌಲಾಸಾಬ್ ನಗರಸಭೆ ಅಧ್ಯಕ್ಷ
ವಿರೋಧ ಪಕ್ಷವಾಗಿ ಕಾಂಗ್ರೆಸ್ ಕೂಡ ನಿಷ್ಕ್ರೀಯ
ಗಂಗಾವತಿ ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ಕೆಲಸಗಳಾಗಬೇಕಿದ್ದರೂ ವಿರೋಧ ಪಕ್ಷವಾಗಿ ಕಾಂಗ್ರೆಸ್ ಕೂಡ ನಿಷ್ಕ್ರೀಯವಾಗಿದೆ. ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರವಿದ್ದರೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತರುವಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ವಿಫಲರಾಗಿದ್ದಾರೆ. ಚುನಾವಣೆ ಬಂದಾಗ ಮೂರ್ನಾಲ್ಕು ಬಣಗಳಲ್ಲಿ ಸಕ್ರಿಯರಾಗುವ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಬಳಿಕ ಜನರಿಗೆ ಸೌಲಭ್ಯ ಕಲ್ಪಿಸದ ನಗರಸಭೆಯ ಆಡಳಿತ ಪಕ್ಷಕ್ಕೆ ಚುರುಕು ಮುಟ್ಟಿಸುವ ಅಥವಾ ಕನಿಷ್ಠ ಹೋರಾಟದ ಕೆಲಸವನ್ನೂ ಮಾಡಿಲ್ಲ ಎನ್ನುವುದು ಜನರ ದೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.